ADVERTISEMENT

PV Web Exclusive: ಆನಂದದ ಮೇಲೆ ಆನಂದ...

ಶತಮಾನೋತ್ಸವದ ಬಿಡಿಸಿಸಿ ಬ್ಯಾಂಕಿನಲ್ಲಿ ಬಿಜೆಪಿ ಶಕೆ ಆರಂಭ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಫೆಬ್ರುವರಿ 2021, 12:42 IST
Last Updated 9 ಫೆಬ್ರುವರಿ 2021, 12:42 IST
ಹೊಸಪೇಟೆ ನಗರದಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪ್ರಧಾನ ಕಚೇರಿ
ಹೊಸಪೇಟೆ ನಗರದಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪ್ರಧಾನ ಕಚೇರಿ   

ಹೊಸಪೇಟೆ: ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಈಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಅವರಿಗೆ ಆನಂದದ ಮೇಲೆ ಆನಂದ ಕೊಡುವ ಬೆಳವಣಿಗೆಗೆಳು ನಡೆಯುತ್ತಿವೆ.

2019ರ ನವೆಂಬರ್‌ನಲ್ಲಿ ನಡೆದ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದ ನಂತರದಿಂದ ಅವರ ನಾಗಾಲೋಟ ಸತತ ಎರಡನೇ ಹೊಸ ವರ್ಷದಲ್ಲೂ ಮುಂದುವರೆದಿದೆ. 2020ರ ಆರಂಭದಲ್ಲಿ ಸಚಿವರಾಗುವ ಭಾಗ್ಯ ಒಲಿದು ಬಂತು. ವರ್ಷಾಂತ್ಯಕ್ಕೆ ಏತ ನೀರಾವರಿ ಯೋಜನೆ, ವಿಜಯನಗರ ಜಿಲ್ಲೆಗೆ ಸರ್ಕಾರದಿಂದ ಅನುಮೋದನೆ ಕೊಡಿಸುವಲ್ಲಿ ಯಶಸ್ವಿಯಾದರು.

ಎರಡು ಸಲ ಮಹತ್ವದ ಖಾತೆ ಕಸಿದುಕೊಂಡಿದ್ದರಿಂದ ಇತ್ತೀಚೆಗೆ ಆನಂದ್‌ ಸಿಂಗ್‌ ಸ್ವಲ್ಪ ಅಸಮಾಧಾನಗೊಂಡಿದ್ದರು. ಆದರೆ, ವಿಜಯನಗರ ಜಿಲ್ಲೆಗೆ ಅಂತಿಮ ಮೊಹರು ಬಿದ್ದಿರುವುದರಿಂದ ಸದ್ಯ ಅದರಿಂದ ಸ್ವಲ್ಪ ಹೊರಬಂದಿರುವಂತೆ ಕಾಣುತ್ತಿದ್ದಾರೆ. ಜಿಲ್ಲೆ ಘೋಷಣೆಯ ಸಂಭ್ರಮದಿಂದ ಇನ್ನೂ ಆನಂದ್‌ ಸಿಂಗ್‌ ಹೊರಬಂದಿಲ್ಲ. ಅಷ್ಟರೊಳಗೆ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ADVERTISEMENT

ನೂರು ವರ್ಷದ ಕಾಂಗ್ರೆಸ್‌ ಆಡಳಿತ ಕೊನೆ:

ಬಿಡಿಸಿಸಿ ಬ್ಯಾಂಕ್‌ ಈಗ ನೂರು ವರ್ಷ ಪೂರೈಸಿದೆ. ಶತಮಾನೋತ್ಸವ ಆಚರಣೆಯ ಸಿದ್ಧತೆಯಲ್ಲಿದೆ. ನೂರು ವರ್ಷಗಳಿಂದ ಬ್ಯಾಂಕಿನ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ಕಾಂಗ್ರೆಸ್‌ ಅದನ್ನು ಈಗ ಬಿಜೆಪಿಗೆ ಬಿಟ್ಟುಕೊಟ್ಟಿದೆ.

ಒಟ್ಟು 13 ಜನ ನಿರ್ದೇಶಕರಿರುವ ಬ್ಯಾಂಕಿನಲ್ಲಿ ಹೆಚ್ಚಿನವರು ಈಗಲೂ ಕಾಂಗ್ರೆಸ್‌ ಹಿನ್ನೆಲೆಯವರೇ ಇದ್ದಾರೆ. ಆದರೆ, ಆನಂದ್‌ ಸಿಂಗ್‌ ಅವರನ್ನು ಎದುರು ಹಾಕಿಕೊಳ್ಳದೆ ಎಲ್ಲರೂ ಮಂಡಿಯೂರಿ ಬ್ಯಾಂಕ್‌ ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಆರೋಪ ಇದೆ.

‘ಆನಂದ್‌ ಸಿಂಗ್‌ ಅವರು ಸಚಿವರಾಗಿರುವುದರಿಂದ ಅವರು ಅಧ್ಯಕ್ಷರಾದರೆ ಬ್ಯಾಂಕ್‌ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಇಲ್ಲಿ ರಾಜಕೀಯ ಪಕ್ಷದ ಪ್ರಶ್ನೆ ಬರುವುದಿಲ್ಲ. ಇದು ಸಹಕಾರ ಕ್ಷೇತ್ರ’ ಎಂದು ಇತ್ತೀಚೆಗೆ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಟಿ.ಎಂ.ಚಂದ್ರಶೇಖರಯ್ಯ ಸೇರಿದಂತೆ ಇತರೆ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

9ರಂದೇ ಖುಲಾಯಿಸಿದ ಅದೃಷ್ಟ
ಆನಂದ್‌ ಸಿಂಗ್‌ ಅವರಿಗೆ ಮತ್ತೆ 9 ನಂಬರ್‌ ಅದೃಷ್ಟದ ಸಂಖ್ಯೆ ಎಂಬುದು ಸಾಬೀತಾಗಿದೆ. ಫೆ. 9ರಂದೇ ಅವರು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿರುವುದೇ ಅದಕ್ಕೆ ಕಾರಣ. ಏನೇ ಶುಭ ಕಾರ್ಯ ಮಾಡಬೇಕಿದ್ದರೂ 9ರಂದೇ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅವರ ವಾಹನಗಳ ಸಂಖ್ಯೆಗಳನ್ನು ಕೂಡಿಸಿದರೆ 9 ಆಗುತ್ತದೆ. 9ರಂದು ವಿಜಯನಗರ ಜಿಲ್ಲೆ ಘೋಷಣೆಗೂ ಪ್ರಯತ್ನಿಸಿದ್ದರು. ಆದರೆ, ಅದು ಕೈಗೂಡದೇ, ಒಂದು ದಿನ ಮುಂಚಿತವಾಗಿ ಘೋಷಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಾನೇನೂ ಹೇಳಲಾರೆ’
‘ಶತಮಾನೋತ್ಸವದ ಸಂಭ್ರಮದಲ್ಲಿರುವ ಬ್ಯಾಂಕ್ ಇದುವರೆಗೆ ಕಾಂಗ್ರೆಸ್ ಹಿಡಿತದಲ್ಲಿತ್ತು. ಈಗ ಬಿಜೆಪಿ ಹಿಡಿತಕ್ಕೆ ಬರುತ್ತಿದೆ ಎನ್ನುವುದರ ಕುರಿತು ನಾನೇನೂ ಹೇಳಲಾರೆ. ವಿಜಯನಗರದಲ್ಲಿ ಆ ಮನೋಭಾವ ಯಾರಿಗೂ ಇಲ್ಲ. ಎಲ್ಲರೂ ಸೇರಿಕೊಂಡು ಬ್ಯಾಂಕಿನ ಏಳಿಗೆಗೆ ಶ್ರಮಿಸುತ್ತೇವೆ. ಅನೇಕ ವರ್ಷಗಳಿಂದ ಬ್ಯಾಂಕಿನಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಶ್ರಮಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.