ADVERTISEMENT

ಹಂಪಿಯಲ್ಲಿ ನಿಯಮ ಉಲ್ಲಂಘನೆ ಸಾಮಾನ್ಯ!, ನಿಷೇಧಿತ ವಲಯದಲ್ಲಿ ವಾಹನಗಳ ಓಡಾಟ

ಸ್ಮಾರಕಗಳ ಮೇಲೆ ನಿಂತುಕೊಂಡು ಛಾಯಾಚಿತ್ರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಅಕ್ಟೋಬರ್ 2018, 20:00 IST
Last Updated 16 ಅಕ್ಟೋಬರ್ 2018, 20:00 IST
ಹಂಪಿ ವಿಜಯ ವಿಠಲ ದೇವಸ್ಥಾನದ ಮಾರ್ಗದಲ್ಲಿ ವಾಹನಗಳ ಓಡಾಟದ ಮೇಲೆ ನಿಷೇಧವಿದ್ದರೂ ಅದನ್ನು ಉಲ್ಲಂಘಿಸಿ ಓಡಾಡುತ್ತಿರುವುದು
ಹಂಪಿ ವಿಜಯ ವಿಠಲ ದೇವಸ್ಥಾನದ ಮಾರ್ಗದಲ್ಲಿ ವಾಹನಗಳ ಓಡಾಟದ ಮೇಲೆ ನಿಷೇಧವಿದ್ದರೂ ಅದನ್ನು ಉಲ್ಲಂಘಿಸಿ ಓಡಾಡುತ್ತಿರುವುದು   

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ನಿಯಮಗಳು ಹೆಸರಿಗಷ್ಟೇ ಎಂಬಂತಾಗಿದೆ. ನಿತ್ಯ ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಎಂತಹವರಿಗೂ ಅದು ಅನಿಸದೇ ಇರದು.

ಕಪ್ಪು ಹೊಗೆ ಹಾಗೂ ದೂಳಿನಿಂದ ಹಂಪಿಯ ವಿಜಯ ವಿಠಲ ದೇಗುಲ ಸ್ಮಾರಕ ಕಳೆಗುಂದಬಾರದು ಎಂಬ ದೃಷ್ಟಿಯಿಂದ ಆ ಭಾಗದಲ್ಲಿ ವಾಹನಗಳ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರಿಗಾಗಿ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಲ್ಲಿ ಬ್ಯಾಟರಿಚಾಲಿತ ವಾಹನಗಳ ಬದಲು ಅನ್ಯ ವಾಹನಗಳ ಓಡಾಟವೇ ಹೆಚ್ಚಾಗಿದೆ.

ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚೆಕ್‌ಪೋಸ್ಟ್‌ ತೆಗೆದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗಿದ್ದರೂ ಎಗ್ಗಿಲ್ಲದೆ ವಾಹನಗಳು ಓಡಾಡುತ್ತಿವೆ. ಕೆಲವು ಸಲವಂತೂ ವಾಹನಗಳ ದಂಡೇ ಅಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಯಾರೊಬ್ಬರೂ ಅದನ್ನು ಪ್ರಶ್ನಿಸುವ, ತಡೆಯುವ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರಾಗಿದೆ.

ADVERTISEMENT

ಅದನ್ನು ಪುಷ್ಟೀಕರಿಸುವಂತೆ ಭಾನುವಾರ ಸಂಜೆ ಅಲ್ಲಿ ವಾಹನಗಳ ದಂಡೇ ಬೀಡು ಬಿಟ್ಟಿತ್ತು. ತಡಹೊತ್ತು ರಸ್ತೆಯ ಮಧ್ಯದಲ್ಲಿಯೇ ನಿಂತಿದ್ದರಿಂದ ಬ್ಯಾಟರಿಚಾಲಿತ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿತ್ತು. ಮಣ್ಣಿನ ರಸ್ತೆಯಲ್ಲಿ ವಾಹನಗಳು ಓಡಾಡಿದ್ದರಿಂದ ಎಲ್ಲೆಡೆ ದೂಳು ಆವರಿಸಿಕೊಂಡಿತ್ತು. ಭದ್ರತಾ ಸಿಬ್ಬಂದಿ ಅಲ್ಲಿಯೇ ಇದ್ದರೂ ಅದನ್ನು ತಡೆದು ಪ್ರಶ್ನಿಸಲಿಲ್ಲ.

ಅಷ್ಟೇ ಅಲ್ಲ, ಅದೇ ಮಾರ್ಗದಲ್ಲಿರುವ ಮಂಟಪಗಳ ಮೇಲೆ ನಿಂತುಕೊಂಡು ಪ್ರವಾಸಿಗರು ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದರು. ಅವರನ್ನು ಕೂಡ ಯಾರು ತಡೆಯಲಿಲ್ಲ. ಈ ರೀತಿ ರಾಜಾರೋಷವಾಗಿ ನಿಯಮ ಉಲ್ಲಂಘಿಸುತ್ತಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್‌.ಐ.) ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿರುವ ವಿಜಯ ವಿಠಲ ದೇಗುಲ ಸ್ಮಾರಕ ಬಹಳ ಅಪರೂಪದ್ದು. ಅದನ್ನು ಸಂರಕ್ಷಿಸಲೆಂದೇ ವಾಹನಗಳ ಓಡಾಟದ ಮೇಲೆ ನಿಷೇಧ ಹೇರಲಾಗಿದೆ. ಭದ್ರತಾ ಸಿಬ್ಬಂದಿಯಿದ್ದರೂ ವಾಹನಗಳು ಓಡಾಡುತ್ತಿವೆ ಎಂದರೆ ಇದು ಎ.ಎಸ್‌.ಐ.ಅಧಿಕಾರಿಗಳ ಮೇಲೆ ಅನುಮಾನ ಮೂಡಿಸುತ್ತದೆ. ಇದರಲ್ಲಿ ಯಾರು ತಪ್ಪಿತಸ್ಥರು ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಹಂಪಿ ನಿವಾಸಿ ರಾಜು ಆಗ್ರಹಿಸಿದರು.

‘ರಾಜಾರೋಷವಾಗಿ ಸ್ಮಾರಕಗಳ ಮೇಲೆ ನಿಂತುಕೊಂಡು ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದರು ಎ.ಎಸ್‌.ಐ. ಸಿಬ್ಬಂದಿ ಅದನ್ನೇಕೇ ತಡೆಯಲಿಲ್ಲ. ಇದೇ ರೀತಿ ಮುಂದುವರಿದರೆ ಸ್ಮಾರಕಗಳ ಸಂರಕ್ಷಣೆ ಹೆಸರಿಗಷ್ಟೇ ಸೀಮಿತವಾಗುತ್ತದೆ’ ಎಂದರು.

‘ಹಂಪಿ ವಿಶಾಲವಾದ ಪ್ರದೇಶ. ಹೀಗಿದ್ದರೂ ಎಲ್ಲೆಡೆ ನಮ್ಮ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಹೀಗಿದ್ದರೂ ನಿಷೇಧಿತ ವಲಯದಲ್ಲಿ ಅಷ್ಟೊಂದು ವಾಹನಗಳು ಹೇಗೆ ಹೋದವು ಎಂಬುದು ಗೊತ್ತಾಗುತ್ತಿಲ್ಲ. ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಕಾಳಿಮುತ್ತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.