ADVERTISEMENT

ವಿಶ್ವಕವಿ ಸಮ್ಮೇಳನ: ಗಮನ ಸೆಳೆದ ಹುಲಿಪಟ್ಟೆಯಿರುವ ಮಗು ಜನಿಸಿದ್ದರ ಅಖಂಡ ಕಾವ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 15:32 IST
Last Updated 21 ಅಕ್ಟೋಬರ್ 2022, 15:32 IST
ಬಳ್ಳಾರಿಯಲ್ಲಿ ನಡೆದ ಅರಿವು ಸಂಗಂ ವಿಶ್ವಕವಿ ಸಮ್ಮೇಳನದ ಆರನೆಯ ಮತ್ತು ಕೊನೆಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಕಾಶ್‌ ಪೊನ್ನಾಚಿ, ಮೃತ್ಯುಂಜಯ ಸಿಂಗ್‌ ಹಾಗೂ ಎಂ ಸಂಜೀವ್‌ ಖಾಂಡೇಕರ್‌
ಬಳ್ಳಾರಿಯಲ್ಲಿ ನಡೆದ ಅರಿವು ಸಂಗಂ ವಿಶ್ವಕವಿ ಸಮ್ಮೇಳನದ ಆರನೆಯ ಮತ್ತು ಕೊನೆಯ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರಕಾಶ್‌ ಪೊನ್ನಾಚಿ, ಮೃತ್ಯುಂಜಯ ಸಿಂಗ್‌ ಹಾಗೂ ಎಂ ಸಂಜೀವ್‌ ಖಾಂಡೇಕರ್‌   

ಬಳ್ಳಾರಿ: ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ಸಾಹಿತಿಗಳು ತಮ್ಮ ಕವನಗಳನ್ನು ಓದುವುದರೊಂದಿಗೆ ವಿಶ್ವಕವಿ ಸಮ್ಮೇಳನದ ಕೊನೆಯ ಗೋಷ್ಠಿ ಸಂಪನ್ನವಾಯಿತು.

ಎಂ.ಸಂಜೀವ್‌ ಖಾಂಡೇಕರ್‌ ಅವರು ಓದಿದ ಅಖಂಡ ಕಾವ್ಯವು ಜನರ ಆಸಕ್ತಿಯನ್ನು ಹಿಡಿದಿರಿಸಿತು. ಮನುಷ್ಯರಿಗೆ ಹುಟ್ಟಿದ ಹುಲಿಪಟ್ಟೆ ಇರುವ ಮಗುವನ್ನು ಹೆತ್ತ ಅಮ್ಮ ಮತ್ತು ಅಪ್ಪನ ನಡುವಿನ ಸಂಭಾಷಣೆಯ ಸುದೀರ್ಘ ಕವಿತೆಯನ್ನು ಭಾವದುಂಬಿ ವಾಚಿಸಿದಾಗ ಸ್ವೀಕೃತ ಮತ್ತು ತಿರಸ್ಕಾರಗಳ ನಡುವಿನ ಅನುಮಾನ ಮತ್ತು ಅವಮಾನಗಳಂಥ ಎಲ್ಲ ಭಾವಗಳೂ ಹಾದು ಹೋಗುತ್ತವೆ.

ಹುಲಿಯಂತ ಮಗುವನ್ನು ಹೆರುವುದು, ಅಪ್ಪನಿಗೆ ಹೆಮ್ಮೆಯೆನಿಸುವುದು, ಅಮ್ಮನಿಗೆ ಆತಂಕ ಹುಟ್ಟುವುದು ಎಲ್ಲವೂ ಈ ಕವಿತೆಯ ಪ್ರಾಣಾಳವಾಗಿದೆ. ಮುಟಾಟಿಸ್‌, ಮುಟಾಂಡಿಸ್‌ ಕವಿತೆಗೆ ಕೇಳುಗರ ಸ್ಪಂದನೆಯೂ ಅಷ್ಟೇ ಮನೋಜ್ಞವಾಗಿತ್ತು. ಆಗಾಗ ಚಪ್ಪಾಳೆ, ಲೊಚಗುಟ್ಟುವುದು, ನಗುವುದು ನಡೆದೇ ಇತ್ತು.

ADVERTISEMENT

ಪಶ್ಚಿಮ ಬಂಗಾಲದ ಮೃತ್ಯುಂಜಯ ಸಿಂಗ್‌ ಅವರು ಭಗೀರಥಿ ನದಿಯ ಅಳಲನ್ನು ಬಿಚ್ಚಿಟ್ಟರು. ಅಧಿಕಾರವನ್ನು ಅನುಭವಿಸುತ್ತ ಪಟ್ಟದ ಮೇಲೆ ಆಸೀನವಾಗಿರುವ ಗಿಡುಗಗಳು ಭಗೀರಥಿಯತ್ತ ದುರುಗುಟ್ಟುತ್ತಿವೆ ಎನ್ನುತ್ತಲೇ ಭಗೀರಥಿಯ ಸುತ್ತಲಿನ ಬದುಕನ್ನು ಬಿಚ್ಚಿಡುತ್ತಾರೆ.

75ರ ನನ್ನಪ್ಪ ಮರೆವಿನ ರೋಗಕ್ಕೆ ಒಳಗಾಗಿದ್ದಾನೆ. ಮಕ್ಕಳನ್ನು ಗುರುತಿಸುವುದಿಲ್ಲ, ಹೆಂಡತಿಯನ್ನು ಇನ್ನೊಂದು ಹೆಣ್ಣಿನಂತೆ ಕಾಣುತ್ತಾನೆ ಎನ್ನುತ್ತಲೇ 75ರ ವಿಶೇಷಗಳನ್ನು ಪಟ್ಟಿ ಮಾಡುತ್ತ ಹೋಗುತ್ತಾರೆ. ಇಡಿಯ ಕವಿತೆ ರೂಪಕದಲ್ಲಿ ಸಾಗುತ್ತ ನಗೆಯುಕ್ಕಿಸಿದರೂ ವಿಷಾದವನ್ನು ಹುಟ್ಟುಹಾಕುತ್ತದೆ.

ಮಹಾಭಾರತದ ಕಥನವನ್ನು ಸುಶ್ರಾವ್ಯವಾಗಿ ಹಾಡಿ ಗಮನಸೆಳೆದರು. ಪ್ರಕಾಶ್‌ ಪಣಚ್ಚಿ ಅವರು ದೀಪ ಮತ್ತು ಕಡುಕತ್ತಲೆಯ ಕುರಿತ ಕವನ ಓದಿ ಗಮನಸೆಳೆದರು.

ಜಯಶ್ರೀ ಕಂಬಾರ ಅವರು ಪ್ರತಿಕವಿತೆಯೂ ಅದ್ಹೇಗೆ ಸಮಕಾಲೀನ ಘಟನೆಗಳಿಗೆ ಸ್ಪಂದಿಸುತ್ತ ಹೋಗಿದೆ ಎಂಬುದನ್ನು ವಿವರಿಸಿದರು.

ಈ ಗೋಷ್ಠಿಯೊಂದಿಗೆ ಮೊದಲ ದಿನದ ಕವಿಗಳ ಕೂಜನಕ್ಕೆ ಅಲ್ಪವಿರಾಮ ಹಾಡಲಾಯಿತು.

ರೊಟ್ಟಿಯೂಟ, ಹೆಸರುಬೇಳೆ ಪಾಯಸ: ಬಂದ ಅತಿಥಿಗಳೆಲ್ಲರಿಗೂ ಖಟಿರೊಟ್ಟಿ, ಬಿಸಿರೊಟ್ಟಿ, ಚಪಾತಿ, ಎಣ್ಣೆಗಾಯಿ, ಸೇಂಗಾ ಚಟ್ನಿ, ಗುರೆಳ್ಳುಚಟ್ನಿ, ಹಸಿಮೆಣಸಿನ ಚಟ್ನಿ, ಮಸಾಲೆ ಅನ್ನ, ಗಟ್ಟಿ ಮೊಸರು, ಬಿಳಿಅನ್ನ ಸಾರು, ಹಪ್ಪಳ ಸಂಡಿಗೆಗಳೂ ಇದ್ದವು. ಯಾವುದೇ ರೀತಿಯ ಗಲಾಟೆಯಾಗದೇ ಎಲ್ಲರೂ ಸಮಾಧಾನದಲ್ಲಿ ಊಟ ಸೇವಿಸಿದರು.

ವಿದೇಶಿಗರೂ ಸಹ ರೊಟ್ಟಿಯನ್ನು ಸವಿಯುವುದು, ಸ್ಥಳೀಯರು ಸವಿಯುವ ಬಗೆಯನ್ನು ಹೇಳಿಕೊಡುವುದು ಸಾಗಿತ್ತು. ಸಾಹಿತ್ಯದ ರಸಗವಳದೊಂದಿಗೆ ಭರ್ಜರಿ ಊಟವನ್ನು ಮೆಚ್ಚುತ್ತ, ಮರುದಿನದ ಗೋಷ್ಠಿಗಳ ಕುರಿತು ಚರ್ಚಿಸುತ್ತ ಸಾಹಿತ್ಯಾಸಕ್ತರು ಪರಸ್ಪರ ವಿದಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.