ADVERTISEMENT

ವಿಶ್ವಕವಿ ಸಮ್ಮೇಳನ: ಇಸ್ರೇಲ್‌ ನೆಲದಿಂದ ಕಡಕೋಳದವರೆಗೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 12:54 IST
Last Updated 21 ಅಕ್ಟೋಬರ್ 2022, 12:54 IST
ಬಳ್ಳಾರಿಯಲ್ಲಿ ಜರಗುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಇಸ್ರೇಲ್‌ನ ಆಮಿರ್ ಔರ್‌, ಟಿ ಸುಮತಿ, ರಾಜೇಂದ್ರ ಪ್ರಸಾದ್, ರಾಬರ್ಟ್‌ ಜೋಸ್‌ ಪಾಲ್ಗೊಂಡಿದ್ದರು.
ಬಳ್ಳಾರಿಯಲ್ಲಿ ಜರಗುತ್ತಿರುವ ಸಂಗಂ ವಿಶ್ವಕವಿ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಇಸ್ರೇಲ್‌ನ ಆಮಿರ್ ಔರ್‌, ಟಿ ಸುಮತಿ, ರಾಜೇಂದ್ರ ಪ್ರಸಾದ್, ರಾಬರ್ಟ್‌ ಜೋಸ್‌ ಪಾಲ್ಗೊಂಡಿದ್ದರು.   

ಬಳ್ಳಾರಿ, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ: ಭಾಷೆಯ ಭಾಷ್ಯ ಯಾವುದು, ಮಾತು, ಮೌನ, ಸ್ಪರ್ಶ ಎಂಬ ಕವಿತೆಯು ಇಸ್ರೇಲ್‌ನ ಕವಿ ಅಮೀರ್‌ ಔರ್‌ ಹೇಳುತ್ತ ಸಂಗಂವಿಶ್ವಕವಿ ಸಮ್ಮೇಳನವನ್ನು ಆರಂಭಿಸಿದರು. ಮೂಕನಾಗಿರಬೇಕು ಜಗದೊಳು ಎಂದು ಕಡಕೋಳ ಮಡಿವಾಳಪ್ಪನವರ ತತ್ವಪದದ ಸಾಲುಗಳೊಂದಿಗೆ ಪ್ರೊ. ರಾಬರ್ಟ್‌ಜೋಸ್‌ ಅವರುಮೊದಲ ಗೋಷ್ಠಿಯನ್ನು ಕೊನೆಗೊಳಿಸಿದರು.

ಹೀಬ್ರು ಭಾಷೆಯಿಂದ ಕನ್ನಡದವರೆಗೂ ಜಗದ ಕವಿತ್ವದ ಬಗ್ಗೆ ಬೆಳಕು ಚೆಲ್ಲಿದರು.

ಬಳ್ಳಾರಿಯಲ್ಲಿ ಶುಕ್ರವಾರ ಆರಂಭವಾದ ವಿಶ್ವಕವಿ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಒಟ್ಟು ಎಂಟು ಕವಿತೆಗಳನ್ನು ಓದಲಾಯಿತು. ಆಮೀರ್‌ ಓರ್‌, ಭಾಷೆಯು ಹೇಳುತ್ತಿದೆ, ದೇಗುಲದ ಬಳಿ, ದೇವರ ಬಳಿ ಎಂಬ ಕವಿತೆಗಳನ್ನು ಹೇಳುತ್ತಲೇ ಗೋಷ್ಠಿಗೆ ಸೂಫಿತನ ಸ್ಪರ್ಶ ನೀಡಿದರು. ಈ ಕವಿತೆಗಳನ್ನು ಭಾಗ್ಯ ಸಿಎಚ್‌ ಅವರು ಅನುವಾದಿಸಿದ್ದು, ಸಿದ್ದು ದೇವರಮನಿ ಅವರು ವಾಚಿಸಿದರು.

ADVERTISEMENT

ನಂತರ ತಮಿಳಚ್ಚಿ ತಂಗಪಾಂಡ್ಯನ್‌ ಕಾವ್ಯನಾಮದಲ್ಲಿ ಕವಿತೆಗಳನ್ನು ಬರೆಯುತ್ತಿರುವ ಟಿ ಸುಮತಿ ಅವರು ವಿಸ್ತೃತ ಮಧ್ಯಾಹ್ನ, ಕೈಗೆಟಕು ಕಡುಗತ್ತಲೆ ಹಾಗೂ ವನ ಅಪ್ಸರೆ ಕವಿತೆಗಳನ್ನು ವಾಚಿಸಿದರು. ‘ನಿಧಾನವಾಗಿ ತ್ವರಿತಗತಿಯಲ್ಲಿ ಮಾಡಬೇಕು’ ಎಂಬಂಥ ವೈರುಧ್ಯಗಳನ್ನು ಸೃಷ್ಟಿಸುವಂಥ ಕಾವ್ಯದ ಗುಣ ಈ ಕವಿತೆಗಳಿಗಿದ್ದವು ಎಂದು ನುಡಿಸ್ಪಂದನೆಯಲ್ಲಿ ಮಾತನಾಡಿದ ರಾಬರ್ಟ್‌ ಜೋಸ್‌ ಅವರು ಈ ಕವಿತೆಗಳ ಸಾರವನ್ನು ಹೇಳಿದರು. ಸುಮತಿ ಅವರ ಕವಿತೆಗಳನ್ನು ಕಮಲಾಕರ ಕಡವೆ ಅನುವಾದಿಸಿದ್ದನ್ನು ಸುಮಾಗುಡಿ ವಾಚಿಸಿದರು

ಮಂಡ್ಯದ ರಾಜೇಂದ್ರ ಪ್ರಸಾದ್‌ ಅವರು ಭಾರತ ನಡೆಯುತ್ತಿದೆ ಮತ್ತು ಹೃದಯ ಎಂಬ ಕವಿತೆಗಳನ್ನು ವಾಚಿಸಿದರು. ಪ್ರತಿ ಕವಿತೆಯ ಆಂಗ್ಲ ಅನುವಾದದ ಬರಹ ವೇದಿಕೆಯ ಮೇಲಿನ ಪರದೆಯ ಮೇಲೆ ಕವಿತೆ ಓದುವಾಗಲೇ ಮೂಡುತ್ತಿತ್ತು. ಕವಿತೆಗಳನ್ನು ಕನ್ನಡದಲ್ಲಿಯೂ ಅನುವಾದಿಸಿದ್ದು, ಅವನ್ನೂ ವಾಚನ ಮಾಡಲಾಯಿತು.

‘ಇದೊಂದು ದುರಿತ ಕಾಲ, ಸತ್ಯದ ಕಾಲ, ಕೋವಿಡ್‌ ನಂತರದ ಕಾಲ, ಕೋವಿಡ್‌ ಪೂರ್ವ ಕಾಲ ಎಂದೆಲ್ಲ ಬಣ್ಣಿಸಲಾಗುತ್ತಿದೆ. ಇದು ಸತ್ಯದ ಕಾಲ ಎಂಬಂತೆ ಹಲವು ಸತ್ಯಗಳನ್ನು ಇಲ್ಲಿ ಕವಿಗಳು ಪ್ರಸ್ತುತ ಪಡಿಸಿದರು. ಸತ್ಯವೆಂಬುದು ಏಕ ಮಾರ್ಗದಲ್ಲಿ ಸಾಗುತ್ತಿದೆಯೇ, ಬಹುತ್ವವಾಗಿದೆಯೇ ಎಂವಬ ವೈರುಧ್ಯಗಳ ನಡುವೆಯೇ, ಕಾಲದೊಂದಿಗೆ ಸ್ಪಂದಿಸುತ್ತ, ಈ ಕವಿಗಳು ಈ ಕಾಲದ ಸಂಘರ್ಷಗಳಿಗೆ ಧ್ವನಿಯಾಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.