ADVERTISEMENT

‘ಸಾರಥಿ’ಯ ಪರೀಕ್ಷೆಯಲ್ಲಿ ಪಾಸಾದವರು ಕಡಿಮೆ!

ವಾಹನ ಚಾಲನೆ ಕಲಿಕೆ ಪರವಾನಗಿ ಈಗ ಆನ್‌ಲೈನ್‌

ಕೆ.ನರಸಿಂಹ ಮೂರ್ತಿ
Published 29 ಜೂನ್ 2018, 13:47 IST
Last Updated 29 ಜೂನ್ 2018, 13:47 IST
ವಾಹನ ಚಾಲನೆ ಕಲಿಕೆ ಪರವಾನಗಿಗಾಗಿ ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆನ್‌ಲೈನ್‌ ಪರೀಕ್ಷೆಗೆ ಹಾಜರಾಗಿದ್ದ ಅರ್ಜಿದಾರರು.
ವಾಹನ ಚಾಲನೆ ಕಲಿಕೆ ಪರವಾನಗಿಗಾಗಿ ಬಳ್ಳಾರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆನ್‌ಲೈನ್‌ ಪರೀಕ್ಷೆಗೆ ಹಾಜರಾಗಿದ್ದ ಅರ್ಜಿದಾರರು.   

ಬಳ್ಳಾರಿ: ವಾಹನ ಚಾಲನೆ ಕಲಿಕೆಯ ಪರವಾನಗಿ (ಎಲ್‌ಎಲ್ಆರ್‌) ನೀಡಲು ಸಾರಿಗೆ ಇಲಾಖೆಯು ಜಾರಿಗೊಳಿಸಿರುವ ಸಾರಥಿ–4 ಆನ್‌ಲೈನ್‌ ವ್ಯವಸ್ಥೆಯ ಪರೀಕ್ಷೆಯಲ್ಲಿ ಫೇಲಾಗುವವರ ಸಂಖ್ಯೆ ಹೆಚ್ಚುತ್ತಿದೆ!

ಜೂನ್‌ 4ರಿಂದ ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರಥಿ–4 ಆನ್‌ಲೈನ್‌ ಪರೀಕ್ಷೆ ವ್ಯವಸ್ಥೆ ಜಾರಿಗೆ ಬಂದಿದೆ. ಅದಕ್ಕಾಗಿ ಕಚೇರಿಯಲ್ಲಿ ಹತ್ತು ಕಂಪ್ಯೂಟರ್‌ಗಳನ್ನೂ ಅಳವಡಿಸಲಾಗಿದೆ. 24 ದಿನದಲ್ಲಿ 220 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 150 ಮಂದಿ ಮಾತ್ರ ಪಾಸಾಗಿದ್ದಾರೆ.

ಅವರಲ್ಲಿ ಅನಕ್ಷರಸ್ಥರು ಹೆಚ್ಚಿದ್ದಾರೆ.ಪ್ರಶ್ನೆಗಳನ್ನು ಮತ್ತು ಬಹು ಆಯ್ಕೆಯ ಉತ್ತರಗಳನ್ನು ಓದಲು ಬಾರದೆ, ಸಮಯ ಸಾಕಾಗದೆ ಪರೀಕ್ಷೆಯಲ್ಲಿ ಫೇಲಾಗುತ್ತಿದ್ದಾರೆ. ಪ್ರಶ್ನೆ ಮತ್ತು ಉತ್ತರಗಳನ್ನು ಓದಿ ಹೇಳುವ ಆಡಿಯೋ ವ್ಯವಸ್ಥೆ ಇದ್ದರೂ, ಹೆಡ್‌ಫೋನ್‌ಗಳನ್ನು ಇಲಾಖೆಯು ಪೂರೈಸದೇ ಇರುವುದು ಈ ಸನ್ನಿವೇಶಕ್ಕೆ ಕಾರಣ.

ADVERTISEMENT

ಇದರೊಂದಿಗೆ, ಖಾಸಗಿ ಕಂಪ್ಯೂಟರ್‌ ಕೇಂದ್ರಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಜಿದಾರರಿಂದ ದುಬಾರಿ ಶುಲ್ಕವನ್ನೂ ವಸೂಲು ಮಾಡುತ್ತಿವೆ. ಬಹಳಷ್ಟು ಮಂದಿ ಡ್ರೈವಿಂಗ್‌ ಸ್ಕೂಲ್‌ಗಳನ್ನು ಅವಲಂಬಿಸಿದ್ದಾರೆ.

‘ಅನಕ್ಷರಸ್ಥರಿಗೆ ಓದಿ ಹೇಳುವ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ಆನ್‌ಲೈನ್‌ ವ್ಯವಸ್ಥೆ ಯಶಸ್ವಿಯಾಗುತ್ತದೆ. ನನಗೆ ಓದಲು ಬಾರದೇ ಉತ್ತರಗಳನ್ನು ನಿಗದಿತ ಸಮಯದಲ್ಲಿ ಆಯ್ಕೆ ಮಾಡಲು ಬಹಳ ಕಷ್ಟವಾಯಿತು’ ಎಂದು ತಾಲ್ಲೂಕಿನ ಬೈಲೂರಿನ ಸಂತೋಷ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಅವರು ಶುಕ್ರವಾರ ಪರೀಕ್ಷೆಗೆ ಹಾಜರಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದಸಹಾಯಕ ಪ್ರಾದೇಶಿಕ ಅಧಿಕಾರಿ ಶ್ರೀನಿವಾಸ ಗಿರಿ, ‘ಅನಕ್ಷರಸ್ಥರಿಗೆ ಪ್ರಶ್ನೆಗಳನ್ನು ಓದಿ ಹೇಳುವ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಹೆಡ್‌ಫೋನ್‌ ಅಳವಡಿಸಿಕೊಂಡು ಅವರು ಉತ್ತರಗಳನ್ನು ಆಯ್ಕೆ ಮಾಡಬಹುದು. ಸದ್ಯಕ್ಕೆ ಆ ಸೌಕರ್ಯವನ್ನು ಇನ್ನೂ ಇಲಾಖೆ ನೀಡಿಲ್ಲ’ ಎಂದು ‘ತಿಳಿಸಿದರು.

ದಿನವೂ 40: ‘ಪ್ರತಿ ದಿನ 40 ಮಂದಿಗೆ ಪರೀಕ್ಷೆಗೆ ಹಾಜರಾಗಲು ಆನ್‌ಲೈನ್‌ ಮೂಲಕವೇ ವೇಳಾಪಟ್ಟಿಯನ್ನು ನೀಡಲಾಗುತ್ತದೆ. ಅದರ ಪ್ರಕಾರ ಪರೀಕ್ಷೆ ನಡೆಸುತ್ತಿದ್ದೇವೆ. ಉತ್ತೀರ್ಣರಾದವರ ಸಂಖ್ಯೆ ಕಡಿಮೆಯಾಗಿದೆ ನಿಜ. ಅದಕ್ಕೆ ಅವರ ತಿಳಿವಳಿಕೆಯ ಮಟ್ಟ ಹೆಚ್ಚಬೇಕಷ್ಟೇ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಹೆಚ್ಚು ಶುಲ್ಕ ಪಡೆಯುವ ಕಂಪ್ಯೂಟರ್‌ ಅಂಗಡಿಗಳ ಬದಲು ಬೇರೆ ಕಡೆ ಅರ್ಜಿ ಸಲ್ಲಿಸುವುದು ಒಳಿತು’ ಎಂದರು.

ಸಲ್ಲಿಕೆ ಹೇಗೆ?
ಅರ್ಜಿದಾರರು ಸಾರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಮಾಹಿತಿಗಳನ್ನು ತುಂಬಿ, ಎಸ್‌ಎಸ್‌ಎಲ್‌ಸಿ ಮತ್ತು ಆಧಾರ್‌ ಕಾರ್ಡ್‌ ದಾಖಲೆಗಳನ್ನು, ಸಹಿ ಮತ್ತು ಫೋಟೋವನ್ನು ಅಪ್‌ಲೋಡ್‌ ಮಾಡಬೇಕು. ನಂತರ, ನಂತರ ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಅವರೇ ಆಯ್ಕೆ ಮಾಡಿಕೊಳ್ಳಬಹುದು. ನಂತರ ಅವರ ಫೋನ್‌ ನಂಬರಿಗೆ ಒಟಿಪಿ ಸಂಖ್ಯೆ ಬರುತ್ತದೆ. ಅದರೊಂದಿಗೆ ನಿಗದಿತ ದಿನದಂದು ಪರೀಕ್ಷೆಗೆ ಹಾಜರಾಗಬೇಕು.

15 ಪ್ರಶ್ನೆ, 15 ನಿಮಿಷ:
ಆನ್‌ಲೈನ್‌ ಪರೀಕ್ಷೆಯಲ್ಲಿ 15 ಪ್ರಶ್ನೆಗಳಿಗೆ ಉತ್ತರಗಳನ್ನು ಆಯ್ಕೆ ಮಾಡಬೇಕು. ಪ್ರತಿ ಪ್ರಶ್ನೆಗೆ ಒಂದು ನಿಮಿಷ ಕಾಲಾವಕಾಶವೂ ಇರುತ್ತದೆ. 11 ಉತ್ತರ ಸರಿ ಇದ್ದರೆ ಅವರು ಪಾಸಾದರು ಎಂಬ ಸಂದೇಶವೂ ಬರುತ್ತದೆ. ನಂತರ ಅವರು ಅದೇ ವೆಬ್‌ಸೈಟ್‌ನಲ್ಲಿ ಬರುವ ಪರವಾನಗಿಯ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬಹುದು.

‘ಸಾರಥಿ’ ಎಂದರೇನು?

ಬಳ್ಳಾರಿ: ಚಾಲನೆ ಪರವಾನಗಿ ನೀಡಲು ಸಾರಿಗೆ ಇಲಾಖೆಯು ರೂಪಿಸಿರುವ ವ್ಯವಸ್ಥೆಯೇ ಸಾರಥಿ. ‘ಸಾರಥಿ 1 ಮತ್ತು 2ರ ವ್ಯವಸ್ಥೆಯಲ್ಲಿ ಎಲ್ಲವೂ ಕಾಗದದ ಮೂಲಕವೇ ನಡೆಯುತ್ತಿತ್ತು. ಸಾರಥಿ 3ರಲ್ಲಿ ಅರ್ಜಿ ಆನ್‌ಲೈನ್‌ನಲ್ಲಿ ಸಲ್ಲಿಸಿದರೂ, ಪರೀಕ್ಷೆಯನ್ನು ಸಿಬ್ಬಂದಿಯೇ ನಡೆಸುತ್ತಾರೆ. ಸಾರಥಿ 4 ಸಂಪೂರ್ಣ ಆನ್‌ಲೈನ್‌, ಇಲ್ಲಿ ಅರ್ಜಿ ಸಲ್ಲಿಕೆ, ಪರೀಕ್ಷೆ, ಪರವಾನಗಿ ವಿಲೇವಾರಿ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ’ ಎಂದು ಶ್ರೀನಿವಾಸ ಗಿರಿ ತಿಳಿಸಿದರು.


ಡಿ.ಎಲ್ ಪರೀಕ್ಷೆಗೆ ಹಳೇ ಟ್ರ್ಯಾಕ್‌!

ಬಳ್ಳಾರಿ: ಚಾಲನಾ ಪರವಾನಗಿ ನೀಡುವ ಮುನ್ನ ಅರ್ಜಿದಾರರ ಸಾಮರ್ಥ್ಯವನ್ನು ಪರಿಶೀಲಿಸಲು ಅಧಿಕಾರಿಗಳು ಕಚೇರಿ ಆವರಣದ ಹಳೇ ಟ್ರ್ಯಾಕ್‌ ಅನ್ನೇ ಅವಲಂಬಿಸಿದ್ದಾರೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದರೂ, ಪರೀಕ್ಷೆಗೆ ಹಳೇ ವ್ಯವಸ್ಥೆಯೇ ಇದೆ.

‘ಎಲೆಕ್ಟ್ರಾನಿಕ್‌ ಟ್ರ್ಯಾಕ್‌ ವ್ಯವಸ್ಥೆ ಬಂದರೆ ಅಲ್ಲಿ ಪರಿಶೀಲನೆಗೆ ಅಧಿಕಾರಿಗಳು ಬೇಕಾಗುವುದಿಲ್ಲ. ಇಲಾಖೆಯ ಡ್ರೈವಿಂಗ್‌ ಸ್ಕೂಲ್‌ ಸ್ಥಾಪನೆಯಾಗುವವರೆಗೂ ಹಳೇ ವ್ಯವಸ್ಥೆಯೇ ಮುಂದವರಿಯಲಿದೆ’ ಎಂದು ಶ್ರೀನಿವಾಸ ಗಿರಿ ತಿಳಿಸಿದರು.

ಆನ್‌ಲೈನ್‌ನಲ್ಲಿ ನನ್ನ ಅರ್ಜಿಯನ್ನು ಸಲ್ಲಿಸಲು ಕಂಪ್ಯೂಟರ್ ಅಂಗಡಿಯವರು 110 ರೂಪಾಯಿ ವಸೂಲು ಮಾಡಿದರು.
–ಸಂತೋಷ್‌ಕುಮಾರ್‌, ಬೈಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.