
ಸಿರಗುಪ್ಪ: ‘ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಬೇಡ, ವಾಲ್ಮೀಕಿ, ನಾಯಕ ಸೇರಿದಂತೆ 51 ಪರಿಶಿಷ್ಟ ಪಂಗಡ ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಯಾದಗಿರಿ ಜಿಲ್ಲ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಆರೋಪಿಸಿದರು.
ಇಲ್ಲಿನ ಕುವೆಂಪು ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್, ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕ ಬಿ.ಎಂ. ನಾಗರಾಜ ಅವರ ನಿವಾಸದ ಮುಂದೆ ಸಾಂಕೇತಿಕ ಧರಣಿಯಲ್ಲಿ ಮಾತನಾಡಿದರು.
‘ಪರಿಶಿಷ್ಟ ಪಂಗಡದ ಬೇಡ, ವಾಲ್ಮೀಕಿ ನಾಯಕ ಇತರೆ ಸೂಕ್ಷ್ಮ, ಅತಿಸೂಕ್ಷ್ಮ 51 ಬುಡಕಟ್ಟು ಜನಾಂಗದವರ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಮತ್ತು ಮೀಸಲಾತಿ ಅನ್ಯಾಯದಂತಹ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದರು.
‘ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು ₹11,000 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ಸಮಾಜದ ಮೇಲಿನ ಸರ್ಕಾರದ ದ್ರೋಹವಾಗಿದೆ. ಪರಿಶಿಷ್ಟ-ಪಂಗಡದ ಕಲ್ಯಾಣ ಇಲಾಖೆಯ ಯೋಜನೆಗಳು ಹಳ್ಳ ಹಿಡಿದಿವೆ’ ಎಂದು ಬೇಸರ ವ್ಯಕ್ತ ಪಡಿಸಿದರು.
‘ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರು ಹಾಗೂ ಸಮಾಜದ ಸಚಿವರು ವಿಧಾನಸಭೆಗಳಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತದಿರುವುದು ಅವರ ಅಸಮರ್ಥತೆಯನ್ನು ತೋರಿಸುತ್ತದೆ’ ಎಂದು ಆರೋಪಿಸಿದರು.
ರಾಜ್ಯ ಎಸ್.ಸಿ.ಎಸ್.ಟಿ. ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿಯ ರಾಜ್ಯ ಅಧ್ಯಕ್ಷ ಶ್ರವಣಕುಮಾರ್ ಡಿ.ನಾಯಕ, ಮುಖಂಡರಾದ ನರೇಂದ್ರ ಸಿಂಹ, ನರಸಿಂಹ ನಾಯಕ, ಧರಪ್ಪ ನಾಯಕ, ಯರ್ರೆಪ್ಪ, ಯಲ್ಲಪ್ಪ, ಹೊನ್ನಪ್ಪ, ಸಣ್ಣಯಲ್ಲಪ್ಪ, ಮಣಿಕಂಠ, ಮುದುಕಪ್ಪ, ವೀರಣ್ಣ, ಶ್ರೀಧರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.