ADVERTISEMENT

ಸಿರುಗುಪ್ಪ: ಕಡಲೆ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:21 IST
Last Updated 6 ಜನವರಿ 2026, 2:21 IST
ಸಿರುಗುಪ್ಪ ನಗರದ ಕೃಷಿ ಸಂಶೋಧನ ಕೇಂದ್ರದಲ್ಲಿ ಬೆಳೆದ ಕಡಲೆ ಬೆಳೆ
ಸಿರುಗುಪ್ಪ ನಗರದ ಕೃಷಿ ಸಂಶೋಧನ ಕೇಂದ್ರದಲ್ಲಿ ಬೆಳೆದ ಕಡಲೆ ಬೆಳೆ   

ಸಿರುಗುಪ್ಪ: ತಾಲ್ಲೂಕಿನಲ್ಲಿ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರಿಲ್ಲದ ಕಾರಣ ಹಾಗೂ ಹವಾಮಾನ ಸಹಕಾರದಿಂದ ರೈತರು ಕಡಲೆ ಬೆಳೆ ಗುರಿಮೀರಿ ಬಿತ್ತನೆ ಮಾಡಿದ್ದು, ಸಮೃದ್ಧ ಬೆಳೆಯೊಂದಿಗೆ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ತಾಲೂಕಿನಾದ್ಯಂತ ಈ ಬಾರಿ 840 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 1750 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಮೀರಿ ಬಿತ್ತನೆ ಮಾಡಿದ್ದಾರೆ. ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು ಅದು ಹಿಂಗಾರಿನಲ್ಲಿ ಸಹಕಾರಿಯಾಗಿತ್ತು. ಜಲಾಶಯದಿಂದ ಎರಡನೇ ಬೆಳೆಗೆ ನೀರು ಇಲ್ಲದ ಕಾರಣದಿಂದಾಗಿ ಹೆಚ್ಚಿನ ಪ್ರದೇಶದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಲು ಕಾರಣವಾಗಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಭೂಮಿಯ ತೇವಾಂಶ ಹೆಚ್ಚಾಗಿ ಬೆಳೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಈ ಬೆಳೆ ಬಿತ್ತನೆ ಮಾಡಿದರೆ ತಕ್ಕಮಟ್ಟಿಗೆ ಲಾಭ ದೊರೆಯುವುದೆಂಬ ಭರವಸೆಯಲ್ಲಿ ರೈತರು ಇದ್ದಾರೆ.

ADVERTISEMENT

ಬಿತ್ತನೆ ಮಾಡಿದ ಕೆಲವು ದಿನಗಳ ನಂತರ ಹವಾಮಾನ ವೈಪರೀತ್ಯದಿಂದಾಗಿ ಚಳಿಯ ಪ್ರಮಾಣ ಹೆಚ್ಚುತ್ತಿರುವುದು ಹಾಗೂ ಬೆಳೆ ಪರಿವರ್ತನೆಯಾಗಿದ್ದು ಉತ್ತಮ ಇಳುವರಿ ಬರಲಿದೆ ಎಂದು ಅಂದಾಜಿಸಲಾಗಿದೆ.

ಹಿಂಗಾರು ಹಂಗಾಮಿನಲ್ಲಿ ಬಂದ ಉತ್ತಮ ಮಳೆಯು ಕಡಲೆ ಬೆಳೆಗೆ ವರದಾನವಾಗಿದೆ. ಮುಂಗಾರು ನಷ್ಟದಿಂದಾಗಿ ಮಾಡಿದ ಸಾಲ ತೀರಿಸಲು ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ಕಡಲೆ ಬೆಳೆಯಿಂದ ಉತ್ತಮ ಫಸಲು ನಿರೀಕ್ಷಿಸಲಾಗುತ್ತಿದೆ.

ಎಕರೆಗೆ ಕನಿಷ್ಠ 5 ರಿಂದ 8 ಕ್ವಿಂಟಾಲ್ ಅಥವಾ ಅದಕ್ಕಿಂತ ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಇದೆ. ಹಲವು ರೈತರು ಬೆಳೆ ಚೆನ್ನಾಗಿ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವರದಾನವಾದ ಇಬ್ಬನಿ:

ಅತಿಯಾದ ಚಳಿಯ ಇಬ್ಬನಿಯು ಕಡಲೆ ಬೆಳೆಗೆ ವರದಾನವಾಗಿ ಪರಿಣಮಿಸಿದೆ. ಕಪ್ಪು ಮಣ್ಣು ಕಡಲೆ ಬೆಳೆಗೆ ತುಂಬಾ ಸಹಕಾರಿ. ಕಡಲೆ 100 ರಿಂದ 110 ದಿನಗಳ ಬೆಳೆಯಾಗಿದ್ದು, ಮುಂಚಿತವಾಗಿ ನಾಟಿ ಮಾಡಿದವರು ಜನವರಿಯಲ್ಲಿ ಮಧ್ಯದಲ್ಲಿ ಕಟಾವು ಮಾಡುತ್ತಾರೆ. ತಡವಾಗಿ ಹಾಕಿರುವ ಕಡಲೆ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕಟಾವಿಗೆ ಬರುತ್ತವೆ ಎಂದು ಸಿರುಗುಪ್ಪದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದರು.

ಖರ್ಚು ಕಡಿಮೆ

ಕಡಲೆ ಬೆಳೆಗೆ ಖರ್ಚು ಹಾಗೂ ಕೂಲಿ ಕಾರ್ಮಿಕರು ಕಡಿಮೆ. ಯಂತ್ರದ ಸಹಾಯದಿಂದ ಕಟಾವು ಮಾಡಲು ಸುಲಭವಾಗುತ್ತದೆ. ಇದರಿಂದ ರೈತರು ಈ ಬೆಳೆಯಲ್ಲಿ ಉತ್ತಮ ಇಳುವರಿ ನಿರೀಕ್ಷಿಸುತ್ತಿದ್ದಾರೆ. ಏಕೆಂದರೆ ಹಿಂಗಾರು ಹಂಗಾಮಿನ ಮಳೆಯು ಬೆಳೆಗಳಿಗೆ ಅನುಕೂಲಕರವಾಗಿದೆ. ಮುಂಗಾರು ಹಂಗಾಮಿನ ನಷ್ಟವನ್ನು ಸರಿದೂಗಿಸಲು ಈ ಬೆಳೆ ಆಸರೆಯಾಗಿದೆ ಸರಿಯಾದ ಬಿತ್ತನೆ ಪೋಷಕಾಂಶಗಳ ನಿರ್ವಹಣೆ ಕೀಟ– ರೋಗಗಳ ನಿಯಂತ್ರಣ ಮತ್ತು ಆಧುನಿಕ ತಂತ್ರಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಎಕರೆಗೆ 5-8 ಕ್ವಿಂಟಲ್ ಅಥವಾ ಅದಕ್ಕಿಂತ ಹೆಚ್ಚಿನ ಇಳುವರಿ ಬರುವ ನಿರೀಕ್ಷೆಯಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನ ಸಂಸ್ಥೆ ಮುಖ್ಯಸ್ಥ ಎಂ.ಎ.ಬಸವಣ್ಣೆಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.