ADVERTISEMENT

ಶಿಕ್ಷಕರಿಗೆ ಸಮುದಾಯದ ಸಂಪರ್ಕ ಅಗತ್ಯ: ಎಚ್‌.ಡಿ.ಪ್ರಶಾಂತ್ ‘

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 14:04 IST
Last Updated 28 ಸೆಪ್ಟೆಂಬರ್ 2018, 14:04 IST
ಶಿಕ್ಷಕರು ಪೇಟ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಿಕ್ಷಕರು ಪೇಟ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.   

ಬಳ್ಳಾರಿ: ‘ಶಿಕ್ಷಕರು ಬೋಧನೆಯ ಸಲಕರಣೆಗಳಾಚೆಗೆ ಸಮುದಾಯಗಳೊಂದಿಗೆ ಸಂಪರ್ಕವನ್ನು ಏರ್ಪಡಿಸಿಕೊಂಡರೆ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ’ ಎಂದು ಲೇಖಕ ಎಚ್‌.ಡಿ.ಪ್ರಶಾಂತ್‌ ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಶಿಕ್ಷಕರ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಗಾರದಲ್ಲಿ ಮಾತನಾಡಿದ ಅವರು, ‘ತರಗತಿಗಳಲ್ಲಿ ಪಾಠ ಮಾಡುವುದೇ ಶಿಕ್ಷಕರ ಪ್ರಮುಖ ಜವಾಬ್ದಾರಿ ಎಂದು ಬಿಂಬಿಸಲಾಗಿದೆ. ಬಹುತೇಕ ಶಿಕ್ಷಕರು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ವಿದ್ಯಾರ್ಥಿ, ಪೋಷಕರು ಮತ್ತು ಸಮಾಜದ ಸಮುದಾಯದೊಂದಿಗೆ ಸಂಪರ್ಕ, ಸಂವಹನವನ್ನು ಏರ್ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದರು.

‘ಶೋಷಣೆ, ಅಭಿವೃದ್ಧಿ, ಹೋರಾಟದ ಕುರಿತು ವಿದ್ಯಾರ್ಥಿ, ಪೋಷಕರು ಹಾಗೂ ಸಮಾಜದ ವಿವಿಧ ವರ್ಗಗಳಲ್ಲಿ ಜಾಗೃತಿ ಮೂಡಿಸುವುದೇ ಶಿಕ್ಷಣದ ಉದ್ದೇಶ. ವಿಮರ್ಶೆ ಮತ್ತು ವಿಶ್ಲೇಷಣೆಯನ್ನು ಕಲಿಸುವುದೇ ಶಿಕ್ಷಣದ ಗುರಿ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರಬಲವಾಗಿ ಪ್ರತಿಪಾದಿಸಿದ್ದರು. ಆದರೆ ಇಂದಿನ ಶಿಕ್ಷಣದಲ್ಲಿ ಈ ಅಂಶಗಳು ಕಾಣೆಯಾಗಿವೆ’ ಎಂದು ವಿಷಾದಿಸಿದರು.

ADVERTISEMENT

‘ಯಾವ ಉದ್ದೇಶಕ್ಕಾಗಿ ಶಿಕ್ಷಕರಾದೆವು, ಈಗ ಶಿಕ್ಷಕರಾಗಿ ಏನು ಮಾಡುತ್ತಿದ್ದೇವೆ. ಇನ್ನು ಏನು ಮಾಡಬೇಕು ಎಂಬ ಬಗ್ಗೆ ಬಹಳ ಶಿಕ್ಷಕರಲ್ಲಿ ಸ್ಪಷ್ಟತೆ ಇಲ್ಲ. ಎಲ್ಲರೂ ಪೇಟ ಧರಿಸಿದ್ದಾರೆ ಎಂದು ನಾನೂ ಧರಿಸಿದೆ ಎಂದು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ. ವಿಮರ್ಶೆ ಅತ್ಯಗತ್ಯ’ ಎಂದರು.

‘ಶಿಕ್ಷಣವು ನಾನು ಎಂಬ ವ್ಯಕ್ತಿಕೇಂದ್ರಿತ ಆಲೋಚನೆಯನ್ನು ಕಲಿಸುತ್ತಿದೆ. ಅದು ಅಪಾಯಕಾರಿ. ನಾವು ಎಂಬ ಭಾವನೆ ಮೂಡಿಸಿದರೆ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಬಹುದು. ವ್ಯಕ್ತಿ ಮತ್ತು ಭಕ್ತಿ ಕೇಂದ್ರಿತವಾದ ಬೋಧನೆಯೂ ಅಪಾಯಕಾರಿ’ ಎಂದರು.

₨ 50 ಲಕ್ಷ: ಜಿಲ್ಲಾ ಗುರುಭವನ ನಿರ್ಮಾಣಕ್ಕೆ ₨ ೫೦ ಲಕ್ಷ ನೀಡುವುದಾಗಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

ಮೇಯರ್ ಆರ್.ಸುಶೀಲಾಬಾಯಿ ಮಾತನಾಡಿದರು. ಉಪಮೇಯರ್ ವಿ.ಲಕ್ಷ್ಮಿದೇವಿ, ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ನಾಗಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ, ಶಿಕ್ಷಕರ ಸಂಘದ ಮುಖಂಡರಾದ ಎಂ.ಟಿ.ಮಲ್ಲೇಶ್, ಸಿ.ನಿಂಗಪ್ಪ, ಆನಂದ್ ನಾಯ್ಕ್, ಅಸುಂಡಿ ನಾಗರಾಜ, ಎನ್.ಪಂಪಾಪತಿ, ರಾಮಕೃಷ್ಣ ಇದ್ದರು. ಎಲ್ಲ ಶಿಕ್ಷಕರು ಪೇಟ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.