ತೆಕ್ಕಲಕೋಟೆ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ವಾರದಿಂದ ಮಳೆ ಬಿಡುವು ಕೊಟ್ಟಿದ್ದು, ಬೆಳೆದು ನಿಂತ ಹತ್ತಿ, ಹಸಿಮೆಣಸಿನಕಾಯಿ, ಮೆಕ್ಕೆಜೋಳದ ಕಟಾವು ಗರಿಗೆದರಿವೆ.
ಹತ್ತಿ, ಹಸಿಮೆಣಸಿನಕಾಯಿ ಬಿಡಿಸುವುದು ಸೇರಿದಂತೆ ಮೆಕ್ಕೆಜೋಳ ಜಿನ್ನಿಗೆ ಹಾಕಿ ಜೋಳ ಮಾಡಿಸುವ ಕಾರ್ಯ ಭರದಿಂದ ಸಾಗಿದೆ.
ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1,010 ಹೆಕ್ಟೇರ್ ಹತ್ತಿ, 1,390 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಹಾಗೂ 2,016 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.
ಮಳೆಯಿಂದಾಗಿ ಹತ್ತಿಯು ಕಪ್ಪುಬಣ್ಣಕ್ಕೆ ತಿರುಗುತ್ತದೆ ಎಂದು ಆತಂಕದಲ್ಲಿಯೇ ರೈತರು ಹತ್ತಿಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಾರದ ಹಿಂದೆ ಕ್ವಿಂಟಲ್‌ಗೆ ₹7,300 ಇದ್ದ ಹತ್ತಿ, ಮಳೆಯ ಕಾರಣ ದಿಢೀರನೆ ₹6.5 ಸಾವಿರಕ್ಕೆ, ಮೆಕ್ಕೆಜೋಳ ₹2,800ದಿಂದ ₹1,800ಕ್ಕೆ ಕುಸಿದಿದೆ. ರೈತರನ್ನು ಚಿಂತೆಗೀಡುಮಾಡಿದೆ.
‘ಈ ಬಾರಿ ಉತ್ತಮ ಮಳೆ ಬಂದಿದೆ, ಅದರಂತೆ ಇಳುವರಿ ಚೆನ್ನಾಗಿ ಆಗಿದೆ. ಆದರೆ ಕಾಯಿ ಒಡೆಯುವ ಸಮಯದಲ್ಲಿ ಮಳೆ ಬಂದು ರೈತರ ನಿರೀಕ್ಷೆ ಉಲ್ಟಾ ಆಗಿದೆ’ ಎಂದು ಹಳೇಕೋಟೆ ಗ್ರಾಮದ ರೈತ ಪಂಪಣ್ಣ ಅಲವತ್ತುಕೊಂಡರು.
ಮಳೆಯಿಂದ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೊಲಗಳಲ್ಲಿ ಬಸಿಗಾಲುವೆ ತೆಗೆದು ನೀರು ನಿಲ್ಲದಂತೆ ಮಾಡಬೇಕು. ಔಷಧ ಸಿಂಪಡಣೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು-ಮಂಜುನಾಥರೆಡ್ಡಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.