ADVERTISEMENT

ಹೂವಿನಹಡಗಲಿ: ಕೈಬೀಸಿ ಕರೆವ ನಿಸರ್ಗ ತಾಣ ‘ಅಂಗೂರ ನಡುಗಡ್ಡೆ’

ಕೆ.ಸೋಮಶೇಖರ
Published 27 ಸೆಪ್ಟೆಂಬರ್ 2019, 11:30 IST
Last Updated 27 ಸೆಪ್ಟೆಂಬರ್ 2019, 11:30 IST
ಅಂಗೂರ ನಡುಗಡ್ಡೆ
ಅಂಗೂರ ನಡುಗಡ್ಡೆ   

ಹೂವಿನಹಡಗಲಿ: ಸುತ್ತಲೂ ಜುಳು ಜುಳು ಹರಿವ ನದಿಯ ನೀರು, ನಡುವೆ ಹಸಿರು ಹೊದ್ದು ನಿಂತಿರುವ ಭೂ ಪ್ರದೇಶ. ಹಕ್ಕಿ ಪಕ್ಷಿಗಳ ಕಲರವದಿಂದ ಕೂಡಿರುವ ‘ಅಂಗೂರ ನಡುಗಡ್ಡೆ’ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ತಾಲ್ಲೂಕಿನ ಅಂಗೂರು ಗ್ರಾಮದ ಬಳಿ ತುಂಗಭದ್ರಾ ನದಿ ಕವಲೊಡೆದಿದೆ. ಇಲ್ಲಿ ನದಿಯ ಹರಿವಿನಿಂದಲೇ ಪ್ರಾಕೃತಿಕವಾಗಿ ನಡುಗಡ್ಡೆ ನಿರ್ಮಾಣವಾಗಿದೆ. ನೂರಾರು ಎಕರೆ ಭೂ ಪ್ರದೇಶದಲ್ಲಿ ನಾನಾ ಗಿಡಮರಗಳು, ಔಷಧಿ ಸಸ್ಯಗಳು ಸೊಂಪಾಗಿ ಬೆಳೆದಿವೆ.

ನವಿಲುಗಳು ಸೇರಿದಂತೆ ನಾನಾ ಬಗೆಯ ವಲಸೆ ಹಕ್ಕಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಪ್ರಕೃತಿ ಸೌಂದರ್ಯವನ್ನೇ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ನಡುಗಡ್ಡೆಯಲ್ಲಿ ಬಸವೇಶ್ವರ ವೀರಭದ್ರೇಶ್ವರ ಸ್ವಾಮಿಯ ಪ್ರಾಚೀನ ದೇವಸ್ಥಾನಗಳು ಇವೆ. ನದಿಯು ಮೈದುಂಬಿ ಹರಿಯುವಾಗ ತೆಪ್ಪದ ಮೂಲಕ ದಾಟಿ ನಡುಗಡ್ಡೆ ಸೇರುವುದು ಒಂದು ರೋಚಕ ಅನುಭವ ನೀಡುತ್ತದೆ.

ADVERTISEMENT

ನದಿಯ ಇನ್ನೊಂದು ಕಡೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸಾಸಲವಾಡ ಗ್ರಾಮವಿದೆ. ಆಯುರ್ವೇದ ಸಸ್ಯ ಸಂಪತ್ತು, ಇತರೆ ಗಿಡಮರಗಳಿಂದ ಹಚ್ಚ ಹಸಿರಾಗಿರುವ ಇಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಲು ವಾರಂತ್ಯದಲ್ಲಿ ಅನೇಕ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ.

ಪ್ರಕೃತಿ ನಿರ್ಮಿತ ಈ ನಡುಗಡ್ಡೆ ಯಾವ ಪ್ರವಾಸಿ ತಾಣಕ್ಕೂ ಕಡಿಮೆ ಇಲ್ಲ. ಇಲ್ಲಿಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆಯಾಗಲೀ, ಸುರಕ್ಷಿತವಾಗಿ ನದಿ ದಾಟುವ ಸಾಧನಗಳಿಲ್ಲದೇ ಈ ನಿಸರ್ಗ ತಾಣ ಹೊರಗಿನ ಜನರಿಗೆ ಅಪರಿಚಿತವಾಗಿಯೇ ಉಳಿದಿದೆ.

ಅಂಗೂರು ಗ್ರಾಮದ ನದಿ ತೀರದಲ್ಲೇ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಪ್ರಾಚೀನ ಕಲ್ಲೇಶ್ವರ ದೇವಸ್ಥಾನವಿದೆ. ಮಹಿಷಾಸುರ ಮರ್ದಿನಿ, ನಂದಿ ಇತರ ಸುಂದರ ಕಲಾಕೃತಿಗಳ ಕೆತ್ತನೆಯಿಂದ ಈ ದೇವಸ್ಥಾನ ಕಣ್ಮನ ಸೆಳೆಯುತ್ತಿದೆ. ಈ ದೇವಸ್ಥಾನದ ಕೂಗಳತೆ ದೂರದಲ್ಲೇ ನಡುಗಡ್ಡೆ ಇದೆ.

‘ಬಳ್ಳಾರಿ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಿಗೆ ಹತ್ತಿರವಿರುವ ಈ ನಡುಗಡ್ಡೆಯನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಆಶಯ. ನದಿ ದಾಟಿಕೊಂಡು ಇಲ್ಲಿಗೆ ಬಂದು ಹೋಗಲು ಯಾಂತ್ರೀಕೃತ ದೋಣಿ ವ್ಯವಸ್ಥೆ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದಲ್ಲಿ ಇದೊಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಪ್ರವಾಸೋದ್ಯಮ ಇಲಾಖೆ ಈ ದಿಸೆಯಲ್ಲಿ ಚಿಂತನೆ ನಡೆಸಲಿ’ ಎಂಬುದು ಅಂಗೂರು ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.