ADVERTISEMENT

ತುಂಗಭದ್ರಾ ನದಿ ಸೇತುವೆ ಮುಳುಗಡೆ ಭೀತಿ: ಕಂಪ್ಲಿ-ಗಂಗಾವತಿ ಸಂಪರ್ಕ ಬಂದ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 2:28 IST
Last Updated 26 ಜುಲೈ 2024, 2:28 IST
   

ಕಂಪ್ಲಿ(ಬಳ್ಳಾರಿ): ಇಲ್ಲಿಯ ಕೋಟೆ ಜನವಸತಿ ಪ್ರದೇಶದ ಬಳಿಯ ತುಂಗಭದ್ರಾ ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೇತುವೆ ಮುಳುಗಡೆ ಭೀತಿ ಎದುರಾಗಿದೆ.

ಸದ್ಯ ಮುಂಜಾಗ್ರತೆಯಾಗಿ ಕಂಪ್ಲಿ- ಗಂಗಾವತಿ ಸೇತುವೆ ಬಂದ್ ಮಾಡಲಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಅದರಿಂದ ಕಲ್ಯಾಣ, ಉತ್ತರ ಮತ್ತು ಮಧ್ಯ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಕ್ಕೆ ತೆರಳುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ.

ADVERTISEMENT

ಕಂಪ್ಲಿಯಿಂದ ಗಂಗಾವತಿಗೆ ನಿತ್ಯ ತೆರಳುವ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಮುಖ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ರೋಗಿಗಳು, ವಾಣಿಜ್ಯ ವ್ಯವಹಾರಗಳಿಗೆ ತೆರಳುವವರು ವಿಜಯನಗರ ಜಿಲ್ಲೆಯ ಬುಕ್ಕಸಾಗರ ಗ್ರಾಮದ ಬಳಿಯ ಕಡೆಬಾಗಿಲು ಸೇತುವೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ತಲೆದೋರಿದೆ.

ಕಂಪ್ಲಿ-ಸಿರುಗುಪ್ಪ ಹೆದ್ದಾರಿಗೆ ನದಿ ಹಿನ್ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಸಂಪರ್ಕ ಕಡಿತಗೊಳ್ಳುವ ನಿರೀಕ್ಷೆ ಇದೆ.

ನದಿ ಪಾತ್ರದಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ರೈತರು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಈಗಾಗಲೆ ಮುಂದಾಗಿದ್ದಾರೆ.

ನದಿ ಬಳಿ ಮೀನುಗಾರರ ಅನೇಕ ಕುಟುಂಬಗಳು ವಾಸಿಸುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.