ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ನಾರಾಯಣದೇವರಕೆರೆ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪರೂಪದ ಬಾನಾಡಿಗಳು ಬೇಟೆಗಾರರ ಪಾಲಾಗುತ್ತಿವೆ.
ಹಿನ್ನೀರು ಪ್ರದೇಶದಲ್ಲಿ ದೊರೆಯುವ ಇಷ್ಟವಾದ ಮೀನು, ಹುಳ ಹುಪ್ಪಟೆಗಳ ಆಹಾರ ಅರಸಿ ಬರುವ ಕರಿತಲೆಯ ಕೆಂಬರಲು(ಬ್ಲಾಕ್ ಹೆಡೆಡ್ ಐಬೀಸ್), ಬೂದುಬಕ(ಗ್ರೆಹೆರಾನ್), ನದಿರೀವ (ರಿವರ್‍ಟರ್ನ್) ಸೇರಿದಂತೆ ಹಲವು ಪಕ್ಷಿಗಳು ಬಲಿಯಾಗಿವೆ.
ಬೇಟೆಯಾಡಿ ತಿನ್ನದೇ ಉಳಿದಿರುವ ಪಕ್ಷಿಗಳ ತಲೆ, ಕಾಲು ಮತ್ತು ಪುಚ್ಚಗಳು ಹಿನ್ನೀರು ಪ್ರದೇಶದ ಬಯಲಿನಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಬಿಎನ್‍ಎಚ್‍ಎಸ್ ಸಂಶೋಧಕರು ಮತ್ತು ಗ್ರೀನ್ ಎಚ್‍ಬಿಎಚ್ ತಂಡ ಈಚೆಗೆ ಪ್ರದೇಶಕ್ಕೆ ಭೇಟಿ ನೀಡಿದಾಗ ಪಕ್ಷಿಗಳ ಕಳೇಬರಗಳನ್ನು ಪ್ರತ್ಯಕ್ಷವಾಗಿ ಕಂಡಿದ್ದು, ಬೇಟೆಗಾರರಿಂದಲೇ ಸಾವಾಗಿರುವುದನ್ನು ಖಚಿತಪಡಿಸಿದ್ದಾರೆ.
ಜಲಾಶಯಕ್ಕೆ ಬರುವ ಮೀನುಗಾರರು ಬೀಸಿದ ಬಲೆಗಳಲ್ಲಿಯೂ ಪಕ್ಷಿಗಳು ಸುಲಭವಾಗಿ ಸೆರೆಯಾಗಿ ಜೀವ ಕಳೆದುಕೊಂಡಿವೆ. ಈ ಕುರಿತಂತೆ ಪಕ್ಷಿಪ್ರೇಮಿಗಳು ಮೀನುಗಾರರು ಮತ್ತು ಬೇಟೆಗಾರರಿಗೆ ಹಲವು ಬಾರಿ ತಿಳಿವಳಿಕೆ ನೀಡಿದ್ದರೂ ಅಪರೂಪದ ಬಾನಾಡಿಗಳ ಬೇಟೆ ಮಾತ್ರ ಕಡಿಮೆ ಆಗಿಲ್ಲ.
ತಾಲ್ಲೂಕಿನ ರಾಮ್‍ಸಾರ್ ತಾಣ ಖ್ಯಾತಿಯ ಅಂಕಸಮುದ್ರ ಪಕ್ಷಿಧಾಮದಲ್ಲಿ ವಾಸ್ತವ್ಯ ಹೂಡಿರುವ ಹಲವು ಬಾನಾಡಿಗಳು ಆಹಾರಕ್ಕಾಗಿ ಹಿನ್ನೀರು ಪ್ರದೇಶವನ್ನು ಆಯ್ಕೆ ಮಾಡಿಕೊಂಡಿವೆ. 168 ಪ್ರಭೇದಗಳ 50 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಈಚೆಗೆ ನಡೆಸಿದ ಗಣತಿಯಲ್ಲಿ ಪತ್ತೆಯಾಗಿದ್ದವು.
ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟಾರ್ಕ್), ಓಪನ್ ಬಿಲ್ ಸ್ಟಾರ್ಕ್(ಬಾಯ್ಕಳಕ), ಮಿಂಚು ಕೆಂಬರಲು (ಗ್ಲೋಸಿ ಐಬೀಸ್) ಸಾವಿರಾರು ಸಂಖ್ಯೆಯಲ್ಲಿವೆ. ದೇಶವಿದೇಶಗಳಿಂದ ವಲಸೆ ಬರುವ ಅತಿಥಿ ಬಾನಾಡಿಗಳಿಗೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರಕ್ಷಣೆ ದೊರೆಯಬೇಕು ಎನ್ನುವುದು ಇಲ್ಲಿನ ಪಕ್ಷಿಪ್ರೇಮಿಗಳ ಒತ್ತಾಸೆಯಾಗಿದೆ.
ಈ ಸ್ಥಳ ತುಂಗಭದ್ರಾ ಬೋರ್ಡ್‍ಗೆ ಸೇರಿದೆ ಅರಣ್ಯ ಇಲಾಖೆಗೆ ಒಳಪಡುವ ಪ್ರದೇಶಗಳಲ್ಲಿ ಬೇಟೆ ಆಡಿದಲ್ಲಿ ಕ್ರಮ ಜರುಗಿಸಲಾಗುವುದು ಈ ಕುರಿತಂತೆ ಗಮನ ಹರಿಸಲಾಗುವುದು-ಭರತ್‍ರಾಜ್, ವಲಯ ಅರಣ್ಯ ಅಧಿಕಾರಿ ಹೊಸಪೇಟೆ ವಲಯ
ಅರಣ್ಯ ಇಲಾಖೆ ಅಧಿಕಾರಿಗಳು ಹಿನ್ನೀರು ಪ್ರದೇಶದಲ್ಲಿ ಪಕ್ಷಿ ಬೇಟೆಯಾಡುವುದನ್ನು ತಡೆಯಲು ಸಿಬ್ಬಂದಿ ನಿಯೋಜಿಸಬೇಕು ಅಲ್ಲಲ್ಲಿ ಎಚ್ಚರಿಕೆಯ ಬೋರ್ಡ್ ಹಾಕಬೇಕು-ಇಟ್ಟಿಗಿ ವಿಜಯಕುಮಾರ್ ಆನಂದ್‍ಬಾಬು ಗ್ರೀನ್ ಎಚ್‍ಬಿಎಚ್ ತಂಡದ ಸದಸ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.