
ಹೂವಿನಹಡಗಲಿ : ಕೇಂದ್ರ ಲೋಕ ಸೇವಾ ಆಯೋಗವು ನಡೆಸಿದ 2025ನೇ ಸಾಲಿನ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪಟ್ಟಣದ ಡಾ. ನಿಖಿಲ್ ಎಸ್.ಬೆಳವಡಿ 409ನೇ ರ‍್ಯಾಂಕ್ ಗಳಿಸಿದ್ದಾರೆ.
ಇಲ್ಲಿನ ಸರ್ಕಾರಿ ಆರ್ಯುವೇದಿಕ್ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಡಾ. ಕೊಟ್ರಮ್ಮ ಅವರ ಪುತ್ರ ಡಾ. ನಿಖಿಲ್ ಎಸ್.ಬೆಳವಡಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೇಂದ್ರದ ವೈದ್ಯಕೀಯ ಸೇವೆ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪಟ್ಟಣದ ದಾವಣಗೆರೆ ಕಾನ್ವೆಂಟ್ ನಲ್ಲಿ ಪ್ರಾಥಮಿಕ, ಎಂ.ಎಂ.ಪಾಟೀಲ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಕೆಎಲ್ಇ ಪ್ರೇರಣಾ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಬೆಂಗಳೂರಿನ ಬಿಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಸದ್ಯ, ಅವರು ವೈದ್ಯಕೀಯ ಶಿಕ್ಷಣ ಪೂರೈಸಿದ ಮೆಡಿಕಲ್ ಕಾಲೇಜಿನಲ್ಲೇ ಕ್ಯಾಶುಯೆಲ್ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
‘ವೈದ್ಯಕೀಯ ಶಿಕ್ಷಣ ಮುಗಿಸಿ, ಕೇಂದ್ರದ ಸೇವೆಗೆ ಸೇರಬೇಕೆಂಬ ಕನಸು ನನಸಾಗಿದೆ. ನನ್ನ ಶೈಕ್ಷಣಿಕ ಸಾಧನೆಗೆ ತಾಯಿಯ ಪ್ರೋತ್ಸಾಹ, ಬೆಂಬಲವೇ ಕಾರಣ’ ಎಂದು ಡಾ. ನಿಖಿಲ್ ಸಂತಸ ಹಂಚಿಕೊಂಡರು.
‘ಯುಪಿಎಸ್ ಸಿ (ಸಿಎಂಎಸ್) ಪರೀಕ್ಷೆ ಮತ್ತು ನೀಟ್ ಪಿಜಿಗೆ ಮ್ಯಾರೋ ಆನ್ ಲೈನ್ ಕೋಚಿಂಗ್ ಪಡೆದದ್ದು ಸಹಕಾರಿಯಾಯಿತು. ಯುಪಿಎಸ್ ಸಿ ಪರೀಕ್ಷೆಗಳಿಗೆ ಎಷ್ಟು ಗಂಟೆ ಓದುತ್ತೇವೆ ಎನ್ನುವುದಕ್ಕಿಂತ, ಅಧ್ಯಯನ ಎಷ್ಟು ಪರಿಣಾಮಕಾರಿ ಎಂಬುದು ಮುಖ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.