ADVERTISEMENT

ಮರಿಯಮ್ಮನಹಳ್ಳಿ | ಮುಳ್ಳಿನ ಪಾರಿಬೇಲಿಯಿಂದ ಮುಚ್ಚಿದ ಗ್ರಾಮ

ಎಚ್.ಎಸ್.ಶ್ರೀಹರಪ್ರಸಾದ್
Published 26 ಜನವರಿ 2026, 6:01 IST
Last Updated 26 ಜನವರಿ 2026, 6:01 IST
ಮರಿಯಮ್ಮನಹಳ್ಳಿ ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ 11ವರ್ಷದ ಬಳಿಕ ನಡೆಯುತ್ತಿರುವ ಉಡುಸಲಮ್ಮ ದೇವಿ ಜಾತ್ರೆಯ ಅಂಗವಾಗಿ 9ದಿನಗಳ ಕಾಲ ಗ್ರಾಮಕ್ಕೆ ಮುಳ್ಳಿನ ಪಾರಿಬೇಲಿ ಹಾಕಿ, ಅಗಸಿ ಬಾಗಿಲ ಮುಂದೆ ಗ್ರಾಮಸ್ಥರು ಕಾವಲು ನಿಂತಿರುವ ದೃಶ್ಯ.
ಮರಿಯಮ್ಮನಹಳ್ಳಿ ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ 11ವರ್ಷದ ಬಳಿಕ ನಡೆಯುತ್ತಿರುವ ಉಡುಸಲಮ್ಮ ದೇವಿ ಜಾತ್ರೆಯ ಅಂಗವಾಗಿ 9ದಿನಗಳ ಕಾಲ ಗ್ರಾಮಕ್ಕೆ ಮುಳ್ಳಿನ ಪಾರಿಬೇಲಿ ಹಾಕಿ, ಅಗಸಿ ಬಾಗಿಲ ಮುಂದೆ ಗ್ರಾಮಸ್ಥರು ಕಾವಲು ನಿಂತಿರುವ ದೃಶ್ಯ.   

ಮರಿಯಮ್ಮನಹಳ್ಳಿ: ಬ್ಯಾಲಕುಂದಿ ಗ್ರಾಮದಲ್ಲಿ 11 ವರ್ಷದ ಬಳಿಕ ಮಂಗಳವಾರ ಹಾಗೂ ಬುಧವಾರ ನಡೆಯುತ್ತಿರುವ ಗ್ರಾಮದೇವತೆ ಉಡುಸಲಮ್ಮ ದೇವಿ ಜಾತ್ರೆಯ ಕಳೆಗಟ್ಟಿದ್ದು, ಗ್ರಾಮದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ಜಾತ್ರೆಯ ಪೂಜಾಕೈಕಂರ್ಯಗಳು ಕಳೆದ ಮಂಗಳವಾರದಿಂದ ಆರಂಭವಾಗಿದ್ದು, ಗ್ರಾಮದಲ್ಲಿ ಒಟ್ಟು ಐದು ಮನೆಗಳಲ್ಲಿ ಈಗಾಗಲೇ ಘಟ ಸ್ಥಾಪನೆ ಮಾಡಿದ್ದಾರೆ. ಜಾತ್ರೆಯ ಅಂಗವಾಗಿ 9ದಿನಗಳ ಕಾಲ ಮುಳ್ಳಿನ ಪಾರಿಬೇಲಿ ಹಾಕಿ, ಒಂದು ರೀತಿಯಲ್ಲಿ ಇಡೀ ಗ್ರಾಮಕ್ಕೆ ದಿಗ್ಬಂಧನ ಹಾಕಿರುವುದು ಈ ಜಾತ್ರೆ ವಿಶೇಷವಾಗಿದೆ.

ಸುಮಾರು 1500ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಅಂದಾಜು 400ಮನೆಗಳಿದ್ದು, ಇಡೀ ಗ್ರಾಮಕ್ಕೆ ಮುಳ್ಳಿನ ಪಾರಿಬೇಲಿ ಹಾಕಿ ಮುಚ್ಚಲಾಗಿದೆ. ಇದರಲ್ಲಿ ಗ್ರಾಮದ ಸರ್ಕಾರಿ ಶಾಲೆಯೂ ಹೊರತಾಗಿಲ್ಲ.

ADVERTISEMENT

ಗ್ರಾಮದ ಅಗಸಿ ಬಾಗಿಲಿಂದ ಮಾತ್ರ ಪ್ರತಿಯೊಬ್ಬರು ಒಳಕ್ಕೆ ಹಾಗೂ ಹೊರಕ್ಕೆ ಬರಬೇಕಿದೆ. ಹಣ, ಮೊಬೈಲು ಸೇರಿದಂತೆ ಹೊರಗಡೆಯಿಂದ ತೆಗೆದುಕೊಂಡು ಹೋದ ಯಾವುದೇ ಸಾಮಾಗ್ರಿಗಳನ್ನು ಮಾತ್ರ ಮತ್ತೆ ಹೊರ ತರುವುದಕ್ಕೆ ಅವಕಾಶ ಇಲ್ಲ. ದ್ವಿಚಕ್ರ ವಾಹನ ಸೇರಿದಂತೆ ಅಗತ್ಯ ವಸ್ತಗಳನ್ನು ಅಗಸಿ ಬಾಗಿನ ಹೊರಕ್ಕೆ ಇಟ್ಟು ಒಳ ಹೋಗಬೇಕಿದೆ.

ಇದಕ್ಕಾಗಿ ಈಗಾಗಲೇ ಇಬ್ಬರು ಕಾವಲುಗಾರರನ್ನು ನೇಮಿಸಿದ್ದು, ಅವರು ಹಗಲುರಾತ್ರಿ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಬಿಡುವುದು ಜಾತ್ರೆಯ ವೈಶಿಷ್ಟವಾಗಿದೆ. ಅಲ್ಲದೆ 9 ದಿನಗಳ ಕಾಲ ಗ್ರಾಮದಲ್ಲಿ ರೊಟ್ಟಿ ತಟ್ಟುವುದು, ಬೀಸುವುದು, ಕುಟ್ಟುವುದು ಸೇರಿದಂತೆ ಇತರೆ ಕೆಲಸಕಾರ್ಯ ಮಾಡುವಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

‘ನೋಡ್ರಿ ಗ್ರಾಮದಲ್ಲಿ ಯಾವುದೇ ರೀತಿಯ ರೋಗರುಜಿಗಳು, ವಿಘ್ನಗಳು ಬಾರದಂತೆ ಹಿರಿಯರು ಗ್ರಾಮದೇವತೆಯ ಜಾತ್ರೆಯನ್ನು ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಸುಮಾರು 200ವರ್ಷಗಳ ಇತಿಹಾಸ ಇರುವ ಈ ಜಾತ್ರೆ ಹಿಂದೆ 9ವರ್ಷಕ್ಕೊಮ್ಮೆ ನಡೆಯುತ್ತಿತ್ತು. ಬರದಿಂದಾಗಿ ಎರಡು ವರ್ಷ ಮುಂದಕ್ಕೆ ಹೋಗಿದೆ’ ಎನ್ನುತ್ತಾರೆ ಗ್ರಾಮದ ಸಿದ್ಧರಾಮಪ್ಪ, ಬಣಕಾರ ಶಿವಕುಮಾರ್, ಈ.ಶ್ರೀನಿವಾಸ, ಗುರಿಕಾರ ಅಂಜಿನಪ್ಪ, ಈ.ರಮೇಶ್, ವೆಂಕಟೇಶ್, ಸೋಮಣ್ಣ, ಹನುಮಂತ, ನಿಂಗಪ್ಪ, ಕೊಟ್ರೇಶ್ ಹೇಳುತ್ತಾರೆ.

ಮರಿಯಮ್ಮನಹಳ್ಳಿ ಸಮೀಪದ ಬ್ಯಾಲಕುಂದಿ ಗ್ರಾಮದಲ್ಲಿ 11ವರ್ಷಗಳ ಬಳಿಕ ನಡೆಯುತ್ತಿರುವ ಉಡುಸಲಮ್ಮ ದೇವಿ ಜಾತ್ರೆಯ ಅಂಗವಾಗಿ 9ದಿನಗಳ ಕಾಲ ಮುಳ್ಳಿನ ಪಾರಿಬೇಲಿ ಹಾಕಿರುವ ದೃಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.