ADVERTISEMENT

ಬಳ್ಳಾರಿ | ಭೂ ಪರಿವರ್ತನೆ ಒಪ್ಪದಿರಲು ಶಿಫಾರಸು: ವಿಐಎಸ್‌ಎಲ್‌ ಗಣಿಗೆ ವಿರೋಧ

30ಸಾವಿರ ಮರಗಳ ಕಡಿತಲೆ ಸಾಧ್ಯತೆ

ಆರ್. ಹರಿಶಂಕರ್
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
ವಿಐಎಸ್‌ಎಲ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಜಾಗ 
ವಿಐಎಸ್‌ಎಲ್‌ ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಜಾಗ    

ಬಳ್ಳಾರಿ: ಭದ್ರಾವತಿಯ ‘ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌)’ ಪುನಶ್ಚೇತನದ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ, ಅದೇ ಕಂಪನಿಯ ‘ರಮಣದುರ್ಗ ಕಬ್ಬಿಣದ ಅದಿರು ಗಣಿ’ಗಾಗಿ ಕಾಡಿನ ಜಾಗ ಪರಿವರ್ತಿಸುವುದನ್ನು ಅರಣ್ಯ ಇಲಾಖೆ ವಿರೋಧಿಸಿದೆ.    

ಸಂಡೂರು ತಾಲ್ಲೂಕಿನ ರಾಮನಮಲೆ (ರಾಮಗಢ) ಅರಣ್ಯ ಬ್ಲಾಕ್‌ನ 150 ಎಕರೆ (60.70 ಹೆಕ್ಟೇರ್) ದಟ್ಟ ಕಾಡನ್ನು ಗಣಿಗಾರಿಕೆ ಉದ್ದೇಶಕ್ಕೆ ಪರಿವರ್ತಿಸಬೇಕು ಎಂದು ಕೋರಿ ವಿಐಎಸ್‌ಎಲ್‌ ಪರವಾಗಿ ‘ಭಾರತೀಯ ಉಕ್ಕು ಪ್ರಾಧಿಕಾರವು (ಎಸ್‌ಎಐಎಲ್‌–ಸೈಲ್‌)’ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯನ್ನು ಯೋಜನಾ ಪರಿಶೀಲನಾ ಸಮಿತಿ‌ಯು ಸ್ಥಳ ಪರಿಶೀಲನೆಗಾಗಿ ಅರಣ್ಯ ಇಲಾಖೆಗೆ ರವಾನಿಸಿತ್ತು. ಅದರಂತೆ, 2025ರ ಸೆ.25 ಮತ್ತು ನ.25ರಂದು ಸ್ಥಳ ಪರಿಶೀಲನೆ ನಡೆಸಿರುವ ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌), ಹಲವು ಕಾರಣಗಳನ್ನು ಉಲ್ಲೇಖಿಸಿ ‘ಸೈಲ್‌’ನ ಪ್ರಸ್ತಾವನೆ ತಿರಸ್ಕರಿಸುವಂತೆ ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ 2025ರ ಡಿ.1ರಂದು ಶಿಫಾರಸು ಮಾಡಿದ್ದಾರೆ.

ADVERTISEMENT

ಶಿಫಾರಸಿನಲ್ಲಿ ಏನಿದೆ: ‘ಗಣಿಗಾರಿಕೆಗೆ ಪ್ರಸ್ತಾಪಿಸಲಾಗಿರುವ ಜಾಗವು ಜೀವವೈವಿಧ್ಯದಿಂದ ಸಮೃದ್ಧವಾಗಿ ರುವ ದಟ್ಟ ಕಾಡು (ವರ್ಜಿನ್‌ ಅರಣ್ಯ). ಒಂದು ವೇಳೆ ಇಲ್ಲಿ ಗಣಿ ಕಾರ್ಯಾಚರಣೆ ನಡೆದರೆ 29,400 ಮರಗಳನ್ನು ಕಡಿಯಬೇಕಾಗುತ್ತದೆ’ ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.  

‘ಈ ಸ್ಥಳವು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳಂತಹ ಸಂರಕ್ಷಿತ ಪ್ರದೇಶಗಳಿಂದ ಹೊರಗಿರಬಹುದು. ಆದರೆ, ಚಿರತೆ, ಕರಡಿ, ತೋಳ, ನಾಲ್ಕು ಕೊಂಬಿನ ಹುಲ್ಲೆ ಮತ್ತು ಅಪರೂಪದ ಹಳದಿ ಗಂಟಲಿನ ಬುಲ್‌ಬುಲ್‌ ಪಕ್ಷಿ ಸೇರಿದಂತೆ 160ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿಗೆ ಆಶ್ರಯ ತಾಣವಾಗಿದೆ. ಜಲ ಮೂಲಗಳು, ಸಸ್ಯವರ್ಗ, ವಿವಿಧ ಸರೀಸೃಪ, ಉಭಯಚರಗಳು ಮತ್ತು ಕೀಟಗಳನ್ನು ಈ ಕಾಡು ಪೋಷಿಸುತ್ತಿದೆ ಎಂಬುದು ಸ್ಥಳ ಪರಿಶೀಲನೆ ವೇಳೆ ತಿಳಿದು ಬಂದಿದೆ’ ಎಂದು ಹೇಳಲಾಗಿದೆ.  

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿನ ವಾರ್ಷಿಕ ಕಬ್ಬಿಣ ಅದಿರು ಉತ್ಪಾದನೆಯು 35 ದಶಲಕ್ಷ ಟನ್‌ ದಾಟುವಂತಿಲ್ಲ. ಸಂಡೂರಿನಲ್ಲಿ ಸದ್ಯ ಇರುವ ಗಣಿಗಳ ಅದಿರು ಉತ್ಪಾದನೆಯು ಸೂಚಿತ ಮಿತಿ ಮೀರಿದೆ. ಇಂಥ ಸನ್ನಿವೇಶದಲ್ಲಿ ಹೊಸ ಗಣಿ ಗುತ್ತಿಗೆಗಳಿಗೆ ಅನುಮತಿ ನೀಡುವುದು ನ್ಯಾಯಸಮ್ಮತವಲ್ಲ’ ಎಂದೂ ತಿಳಿಸಲಾಗಿದೆ. 

‘ದಟ್ಟ ಅರಣ್ಯದಲ್ಲಿ ಹೊಸ ಗಣಿ ಗುತ್ತಿಗೆಗಳಿಗೆ ಅನುಮತಿ ನೀಡಬಾರದು ಎಂದು 2016ರ ಮಾರ್ಚ್‌ 23ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈಗಾಗಲೇ ನಿರ್ಧಾರಿಸಲಾಗಿದೆ. ವಿಐಎಸ್‌ಎಲ್‌ನ ಗಣಿಗೆ ಅರಣ್ಯ ಭೂಮಿಯನ್ನು ಪರಿವರ್ತಿಸುವುದು 2016ರ ನಿಲುವಿಗೆ ವಿರುದ್ಧವಾಗಲಿದೆ’ ಎಂದು ಪ್ರತಿಪಾದಿಸಲಾಗಿದೆ. 

ಕೆಐಒಸಿಎಲ್‌ನ ದೇವದಾರಿ ಗಣಿ ವಿಚಾರದಲ್ಲಿ ಕೇಂದ್ರ ಉಕ್ಕು ಸಚಿವಾಲಯ ಈಗಾಗಲೇ ಹಿನ್ನಡೆ ಅನುಭವಿಸಿದೆ. ಹೀಗಿರುವಾಗಲೇ ವಿಐಎಸ್‌ಎಲ್‌ನ ರಮಗದುರ್ಗ ಗಣಿ ವಿಚಾರದಲ್ಲಿ ಮತ್ತೊಂದು ಹಿನ್ನಡೆ ಎದುರಾಗಿದೆ. 

ದಟ್ಟ ಕಾಡಿನಲ್ಲಿ ಹೊಸ ಗಣಿಗೆ ಅನುಮತಿ ನೀಡಬಾರದು ಎಂದು 2016ರಲ್ಲಿ ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ. ಇದರ ಜತೆಗೆ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಶಿಫಾರಸು ಮಾಡಲಾಗಿದೆ 
ಬಸವರಾಜ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಳ್ಳಾರಿ ವಿಭಾಗ
ಹವಾಮಾನ ಬದಲಾವಣೆ ಪ್ರಕೃತಿ ವಿಕೋಪ ಬೆಟ್ಟಗಳ ಕುಸಿತದಂಥ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ
ಟಿ.ಎಂ.ಶಿವಕುಮಾರ್ ಜನಸಂಗ್ರಾಮ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ

ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಹಿನ್ನಡೆ

  ‘ವಿಶ್ವೇಶರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ’ಯ ಪುನಶ್ಚೇತನಕ್ಕೆ ಭಾರತೀಯ ಉಕ್ಕು ಪ್ರಾಧಿಕಾರ ನಿರ್ಧರಿಸಿದೆ. ₹5000 ಕೋಟಿ ಹಣಕಾಸು ನೆರವು ನೀಡಲಾಗುವುದು ಎಂದು ಕೇಂದ್ರ ಉಕ್ಕು ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಇತ್ತೀಚೆಗೆ ಘೋಷಿಸಿದ್ದರು. ಇದಕ್ಕೆ ₹5 ಕೋಟಿ ನೀಡುವುದಾಗಿ ಸಿರಿಗೆರೆಯ ತರಳಬಾಳು ಮಠದ ಶಿವಾಚಾರ್ಯ ಸ್ವಾಮೀಜಿ ಅವರೂ ವಾಗ್ದಾನ ನೀಡಿದ್ದರು. ಆದರೆ ಗಣಿಯೇ ಇಲ್ಲದೇ ಕಾರ್ಖಾನೆ ಪುನಶ್ಚೇತನ ಹೇಗೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.