ಹೂವಿನಹಡಗಲಿ: ತಾಲ್ಲೂಕಿನ ಶಿವಲಿಂಗನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮದ ಜನರು ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಅಲೆಯುವಂತಾಗಿದೆ.
ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನಾಲ್ಕು ಕೊಳವೆ ಬಾವಿಗಳಿವೆ. ಮೋಟಾರ್ ದುರಸ್ತಿಯಿಂದ ಎರಡು ಕೊಳವೆಬಾವಿಗಳು ಬಂದ್ ಆಗಿವೆ. ಒಂದು ಕೊಳವೆ ಬಾವಿಯನ್ನು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಜೋಡಿಸಿದ್ದು, ಈ ಘಟಕವೂ ಕೆಟ್ಟಿರುವುದರಿಂದ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ‘ಚಾಲೂ ಇರುವ ಒಂದು ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇಡೀ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಜಾನುವಾರುಗಳಿಗೆ ನೀರು ಒದಗಿಸುವುದು ಕಷ್ಟವಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಉಪನಾಯಕನಹಳ್ಳಿ ರಸ್ತೆಯಲ್ಲಿರುವ ಕೊಳವೆ ಬಾವಿಗಳು ಅನೇಕ ದಿನಗಳಿಂದ ದುರಸ್ತಿಯಲ್ಲಿವೆ. ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ಸರಿಪಡಿಸುತ್ತಿಲ್ಲ. ಬಹುಗ್ರಾಮ ಯೋಜನೆಯಡಿ ಸರಬರಾಜಾಗುವ ನದಿ ನೀರು ಶುದ್ದೀಕರಣಗೊಳ್ಳದ ಕಾರಣ ಬಳಕೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಗ್ರಾಮಸ್ಥ ಹೊನ್ನಪ್ಪ ತಿಳಿಸಿದ್ದಾರೆ.
‘ಗ್ರಾಮದಲ್ಲಿ ಬೋರ್‌ವೆಲ್ ಮೋಟಾರ್ ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ತಿಳಿಸಿದ್ದೇವೆ. ಅವರು ತಮ್ಮ ವಿರುದ್ದದ ಅವಿಶ್ವಾಸ ಮಂಡನೆಯ ನೆಪ ಹೇಳಿ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಡಳಿತ ಮಂಡಳಿ ಕಡೆ ಬೆರಳು ತೋರಿಸುತ್ತಾರೆ, ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಸಂಘರ್ಷ ದೂರಿದ್ದಾರೆ.
ಬೇಸಿಗೆ ಎದುರಾಗಿರುವುದರಿಂದ ಕೂಡಲೇ ಮೋಟಾರ್‌ಗಳನ್ನು ದುರಸ್ತಿಗೊಳಿಸಿ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಬೋರ್‌ವೆಲ್‌ಗಳಿಗೆ ಹೊಸ ಮೋಟಾರ್ ಅಳವಡಿಸಲಿದ್ದೇವೆ. ಸದ್ಯ ಬಹುಗ್ರಾಮ ಯೋಜನೆಯಡಿ ನದಿಯಿಂದ ನೀರು ಪೂರೈಸುತ್ತಿದ್ದು, ನೀರಿನ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದೇವೆ’ ಎಂದು ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶಂಭುಲಿಂಗನಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.