ADVERTISEMENT

ಜನಾರ್ದನ ರೆಡ್ಡಿ ಅಕ್ರಮದ ಬಗ್ಗೆ ಬಿಜೆಪಿ ಮೌನವೇಕೆ: ಟಪಾಲ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 15:50 IST
Last Updated 24 ಜನವರಿ 2025, 15:50 IST
ಟಪಾಲ್‌ ಗಣೇಶ್
ಟಪಾಲ್‌ ಗಣೇಶ್   

ಬಳ್ಳಾರಿ: ‘ಶ್ರೀರಾಮುಲು ಅವರ ವಿಷಯ ಬಯಲು ಮಾಡುವುದಾಗಿ ಜನಾರ್ದನ ರೆಡ್ಡಿ ಹೇಳುತ್ತಿದ್ದಾರೆ. ಆದರೆ, ಗಣಿ ಅಕ್ರಮ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ವರದಿಯಲ್ಲಿ ರೆಡ್ಡಿ ಅವರ ಅಕ್ರಮಗಳು ಬಯಲಾಗಿವೆ. ಇಂಥವರ ಬಗ್ಗೆ ಬಿಜೆಪಿ ಮೌನವಾಗಿರುವುದು ಏಕೆ’ ಎಂದು ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಆರೋಪಿಸಿದ್ದಾರೆ. 

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿಯನ್ನು ಹತೋಟಿಗೆ ತೆಗೆದುಕೊಂಡಿದ್ದವರು ಯಾರು. ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಎಂಬ ಬಿರುದು ಕೊಡಿಸಿದ ವ್ಯಕ್ತಿಗಳು ಯಾರು’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಜನಾರ್ದನ ರೆಡ್ಡಿ ಒಡೆತನದ ಕಂಪನಿಗಳ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಎದುರು ‘ಅಮಿಕಸ್‌ ಕ್ಯೂರಿ‘ ವರದಿ ಸಲ್ಲಿಸಿದೆ. ಓಬಳಾಪುರ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ, ಗಡಿ ಧ್ವಂಸ, ಅರಣ್ಯ ಕಾಯ್ದೆ ಉಲ್ಲಂಘನೆ, ಗಣಿ ಕಾಯ್ದೆ ಉಲ್ಲಂಘನೆ, ಆಂಧ್ರದ ಪರ್ಮಿಟ್‌ನಲ್ಲಿ ₹884 ಕೋಟಿ ಮೌಲ್ಯದ ಕರ್ನಾಟಕದ 29 ಲಕ್ಷ ಟನ್‌ ಅದಿರು ಸಾಗಣೆ ಮಾಡಿರುವುದೂ ಸೇರಿದಂತೆ ಹಲವು ವಿಷಯಗಳು ವರದಿಯಲ್ಲಿ ಉಲ್ಲೇಖವಾಗಿವೆ’ ಎಂದು ಆರೋಪಿಸಿದ್ದಾರೆ. 

ADVERTISEMENT

‘ಕಳೆದ 12 ದಿನಗಳ ಹಿಂದೆ ಆಂಧ್ರ ಸರ್ಕಾರ ಓಬಳಾಪುರ ಮೈನಿಂಗ್‌ ಕಂಪನಿಗಳ ರದ್ಧತಿಗೆ ಶಿಫಾರಸು ಮಾಡಬೇಕು ಎಂದು ವರದಿಯನ್ನೂ ಸಲ್ಲಿಸಿದೆ. ‘ಅಮಿಕಸ್ ಕ್ಯೂರಿ’ ವರದಿ ಆಧಾರದಲ್ಲಿ ವಿಸ್ತೃತ ವರದಿ ನೀಡಲು ಕಾಲಾವಕಾಶ ಬೇಕು ಎಂದೂ ಆಂಧ್ರ ಸರ್ಕಾರ ಹೇಳಿದೆ. ಆದರೆ, ಇಂಥ ವರದಿಗಳನ್ನು ಬಿಜೆಪಿ ರಾಜ್ಯ, ಕೇಂದ್ರದ ನಾಯಕರು ನೋಡುವುದೇ ಇಲ್ಲ ಎಂಬುದೇ ದುರ್ದೈವ. ಜನಾದರ್ನ ರೆಡ್ಡಿ ಭ್ರಷ್ಟಾಚಾರಕ್ಕೆ ಬಿಜೆಪಿ ಮೌನವಾಗಿದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.