ADVERTISEMENT

World Environment Day: ‘ಗುಂಡಾ‘ ಕ್ಷೇತ್ರದಲ್ಲಿ ಸಸ್ಯ ಸಂಕುಲ

ವಿವಿಧ ಜಾತಿಯ ಎರಡು ಲಕ್ಷಕ್ಕೂ ಅಧಿಕ ಸಸಿಗಳು, ರೈತರಿಗೆ ವಿತರಣೆ

ಎಚ್.ಎಸ್.ಶ್ರೀಹರಪ್ರಸಾದ್
Published 5 ಜೂನ್ 2025, 6:16 IST
Last Updated 5 ಜೂನ್ 2025, 6:16 IST
ಮರಿಯಮ್ಮನಹಳ್ಳಿಯ ಸಮೀಪದ ಗುಂಡಾ ಸಸ್ಯ ಕ್ಷೇತ್ರದ ಪ್ರಾದೇಶಿಕ ಅರಣ್ಯ ವಲಯ ವಿಭಾಗದಲ್ಲಿ ಬೆಳೆಸಲಾದ ವಿವಿಧ ಜಾತಿಯ ಸಸಿಗಳು
ಮರಿಯಮ್ಮನಹಳ್ಳಿಯ ಸಮೀಪದ ಗುಂಡಾ ಸಸ್ಯ ಕ್ಷೇತ್ರದ ಪ್ರಾದೇಶಿಕ ಅರಣ್ಯ ವಲಯ ವಿಭಾಗದಲ್ಲಿ ಬೆಳೆಸಲಾದ ವಿವಿಧ ಜಾತಿಯ ಸಸಿಗಳು   

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ– 50ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಗುಂಡಾ ಸಸ್ಯ ಕ್ಷೇತ್ರ ಹಾಗೂ ವಿತರಣ ಕೇಂದ್ರದಲ್ಲಿ ಸಾಮಾಜಿಕ ಅರಣ್ಯ ವಲಯ ವಿಭಾಗ ಮತ್ತು ಪ್ರಾದೇಶಿಕ ಅರಣ್ಯ ವಲಯ ವಿಭಾಗದಲ್ಲಿ ಒಟ್ಟು 2 ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳಸಲಾಗಿದೆ.

ಈ ಬಾರಿ ಮುಂಗಾರು ಆಗಮನ ಚೆನ್ನಾಗಿ ಆಗಿರುವುದರಿಂದ ವಿವಿಧೆಡೆ ನಾಟಿ ಸೇರಿದಂತೆ ರೈತರಿಗೆ ವಿತರಣೆ ಮಾಡಲು ಸಸ್ಯ ಕ್ಷೇತ್ರದಲ್ಲಿ ಆಲ, ಅರಳಿ, ತೇಗ, ಶ್ರೀಗಂಧ, ಹುಣಸೆ, ಕರಿಬೇವು, ಬೇವು, ನೇರಳೆ, ಹೊಂಗೆ, ಮಾಗನಿ, ಸೀತಾಫಲ, ರಕ್ತ ಚಂದನ, ಬಿದಿರು ಸೇರಿದಂತೆ 40 ಜಾತಿಯ ಸಸಿಗಳನ್ನು ಬೆಳಸಲಾಗಿದೆ.

ಪ್ರಾದೇಶಿಕ ಅರಣ್ಯ ವಲಯ ವಿಭಾಗದಲ್ಲಿ ಡಿಡಿಎಫ್ ಯೋಜನೆ, ಹಸಿರು ಕರ್ನಾಟಕ, ಕೆಎಂಇಆರ್‌ಸಿ (ಸಿಎ), ಕೆಎಂಇಆರ್‌ಸಿ, ಡಿಡಿಎಫ್ ಹಾಗೂ ಆರ್‌ಎಸ್‍ಪಿಡಿ ಯೋಜನೆ ಅಡಿಯಲ್ಲಿ ಒಟ್ಟು 2,18,069 ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.

ADVERTISEMENT

ಅದರಲ್ಲಿ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ₹3 ಮತ್ತು ₹6ರ ದರದಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಉಳಿದ ಸಸಿಗಳನ್ನು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡುತೋಪು, ನರೇಗಾ, ರಸ್ತೆ ಬದಿ ಬೆಳೆಸಲು ಮುಂದಾಗಿದೆ ಎಂದು ಆರ್‌ಎಫ್‍ಒ ಭರತ್‍ಕುಮಾರ್ ತಿಳಿಸಿದರು.

‘ಸಾಮಾಜಿಕ ಅರಣ್ಯ ವಲಯ ವಿಭಾಗದಲ್ಲಿ ಒಟ್ಟು 28,320 ಸಸಿಗಳನ್ನು ಬೆಳಸಲಾಗಿದೆ. ರಸ್ತೆಬದಿ, ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ಬೆಳಸಲು ಮುಂದಾಗಿದ್ದು, 3,500 ಸಸಿಗಳನ್ನು ರೈತರ ಮಾರಾಟಕ್ಕೆ ಇಡಲಾಗಿದೆ’ ಎಂದು ಆರ್‌ಎಫ್‍ಒ ಕೆ.ಎಂ.ನಾಗರಾಜ್ ಅವರು ‘ಪ್ರಜಾವಾಣಿ’ ತಿಳಿಸಿದರು.

ಇನ್ನು ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲು ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.

ಮರಿಯಮ್ಮನಹಳ್ಳಿಯ ಸಮೀಪದ ಗುಂಡಾ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾದ ವಿವಿದ ಜಾತಿಯ ಸಸಿಗಳನ್ನು ವಿವಿದೆಡೆ ಬೆಳೆಸಲು ವಾಹನದಲ್ಲಿ ಸಾಗಿಸುತ್ತಿರುವ ದೃಶ್ಯ.
ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿಯ ಸಸಿಗಳಿಗೆ ಬೇಡಿಕೆ ಇದ್ದು ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ಬೆಳಸಲಾಗಿದೆ.
– ಕೆ.ಎಂ.ನಾಗರಾಜ್, ಆರ್‌ಎಫ್‌ಒ ಸಾಮಾಜಿಕ ಅರಣ್ಯ ವಲಯ ಹೊಸಪೇಟೆ
ಈ ಭಾರಿ ಶಾಲಾ ಮಕ್ಕಳನ್ನು ಭಾಗಿ ಮಾಡಿಕೊಂಡು ಜೂನ್‌ 5ರಿಂದ ಒಂದು ವಾರ ವಿವಿಧೆಡೆಗಳಲ್ಲಿ ವಿಶೇಷ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
– ಭರತ್‍ಕುಮಾರ್, ಆರ್‌ಎಫ್‍ಒ ಪ್ರಾದೇಶಿಕ ಅರಣ್ಯ ವಲಯ ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.