ADVERTISEMENT

ಪಾರ್ಕಿಂಗ್‌ ಜಾಗವಾದ ಆನೇಕಲ್‌ ಮೈದಾನ: ನಿರ್ವಹಣೆ, ಸ್ವಚ್ಛತೆ ಕೊರತೆ

ಹೆಚ್ಚಿದ ಹಾವುಗಳ ಕಾಟ । ಬಲಯ ಶೌಚವಾಗಿ ಮಾರ್ಪಟ್ಟ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:32 IST
Last Updated 2 ಆಗಸ್ಟ್ 2025, 4:32 IST
ಆನೇಕಲ್‌ನ ಎಎಸ್‌ಬಿ ಮೈದಾನ
ಆನೇಕಲ್‌ನ ಎಎಸ್‌ಬಿ ಮೈದಾನ   

ಆನೇಕಲ್: ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗ ಉಪಯೋಗ ಆಗಬೇಕಿದ್ದ ಆನೇಕಲ್‌ ಎಎಸ್‌ಬಿ ಮೈದಾನ ನಿರ್ವಹಣೆ ಮತ್ತು ಸ್ವಚ್ಛತೆ ಇಲ್ಲದೇ ವಾಹನ ನಿಲುಗಡೆ ಸ್ಥಳವಾಗಿದೆ.

ಆಟ, ಕ್ರೀಡಾ ಅಭ್ಯಾಸ ಮತ್ತು ಕ್ರೀಡೆ ಗೆಲುವಿನ ಸಂಭ್ರಮ ಕೇಳಿ ಬರಬೇಕಿದ್ದ ಮೈದಾನದಲ್ಲಿ ಈಗ ವಾಹನಗಳ ಕರ್ಕಶ ಶಬ್ದ ಕೇಳಿಸುತ್ತಿದೆ. ಶಬ್ದ ಮಾಲಿನ್ಯದೊಂದಿಗೆ ವಾಯು ಮಾಲಿನ್ಯವು ಆಗುತ್ತಿದೆ.

ಎಎಸ್‌ಬಿ ಪ್ರೌಢ ಶಾಲೆ, ಕಾಲೇಜು ಮತ್ತು ಕೆಪಿಎಸ್‌ ಶಾಲೆ, ಹೊಸ ಮಾಧ್ಯಮಿಕ ಶಾಲೆಗಳಿಗೆ ಈ ಮೈದಾನ ಮೀಸಲಾಗಿದೆ. ಆದರೆ ಶಾಲೆಗೆ ವಿದ್ಯಾರ್ಥಿಗಳು ಬಂದ ನಂತರ ಮೈದಾನಕ್ಕೆ ಬೀಗ ಹಾಕದೇ ಇರುವುದರಿಂದ ಮೈದಾನವು ವಾಹನ ನಿಲುಗಡೆಯ ಸ್ಥಳವಾಗುತ್ತಿದೆ.

ADVERTISEMENT

ಮೈದಾನದ ಸುತ್ತಲೂ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಿದ್ಯಾರ್ಥಿಗಳ ಕ್ರೀಡೆಗಳಿಗೂ ತೊಂದರೆ ಆಗುತ್ತದೆ. ತಾಲ್ಲೂಕು ಪಂಚಾಯಿತಿ, ನ್ಯಾಯಾಲಯ, ಲೋಕೋಪಯೋಗಿ ಇಲಾಖೆಗಳ ಕೆಲಸ ಕಾರ್ಯಗಳಿಗೆ ಬರುವ ಬಹುತೇಕರು ತಮ್ಮ ವಾಹನಗಳನ್ನು ಎಎಸ್‌ಬಿ ಮೈದಾನದಲ್ಲಿ ನಿಲ್ಲಿಸುತ್ತಿದ್ದಾರೆ.

ಮೈದಾನದ ಹಲವು ಭಾಗಗಳಲ್ಲಿ ಸ್ವಚ್ಛತೆಯೇ ಇಲ್ಲ. ಸ್ವಚ್ಛತೆ ಕೊರತೆಯಿಂದ ಗಿಡ ಗಂಟಿಗಳು ಬೆಳೆದಿವೆ. ಇದರಿಂದ ಹಾವುಗಳ ಕಾಟವು ಹೆಚ್ಚಾಗಿದೆ. ಮೈದಾನವು ಸಾರ್ವಜನಿಕ ಶೌಚಾಲಯದಂತಾಗಿದೆ. ಮೂತ್ರ ವಿಸರ್ಜನೆಗೆ ಸಾರ್ವಜನಿಕರು ಬಳಸುತ್ತಿದ್ದಾರೆ. 

ಮೈದಾನದಲ್ಲಿ ಬೆಳಗಿನಿಂದ ಸಂಜೆಯವರೆಗೂ ನಿರಂತವಾಗಿ ಕ್ರೀಡೆ, ವಾಯು ವಿಹಾರ ನಡೆಯುತ್ತದೆ. ಕಾಲೇಜು ಮತ್ತು ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಭ್ಯಾಸಕ್ಕೆ ಇದೇ ಮೈದಾನವನ್ನು ಬಳಸುತ್ತಾರೆ. ತಾಲ್ಲೂಕು ಮಟ್ಟದ ಕ್ರೀಡೆಗಳು ಇಲ್ಲಿಯೇ ನಡೆಯುತ್ತಿವೆ. ಆದರೆ ಸೌಲಭ್ಯಗಳ ಕೊರತೆ ಇದೆ.

ಮೈದಾನದ ಆವರಣದಲ್ಲಿರುವ ಹಳೆಯ ಕಟ್ಟಡ ನೆಲಸಮಗೊಳಿಸಿ ಕ್ರೀಡಾಂಗಣವಾಗಿ ಮೇಲ್ದರ್ಜೇಗೇರಿಸಬೇಕು. ಎಎಸ್‌ಬಿ ಮೈದಾನದಲ್ಲಿ ಕ್ರೀಡೆಗಳಿಗೆ ಪೂರಕವಾದ ವಾತವಾರಣ ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯಿಸಿದ್ದಾರೆ.

ಪಾಲನೆಯಾಗದ ಸೂಚನೆ

ಮೈದಾನದ ಗೇಟ್‌ಗೆ ಪೊಲೀಸ್‌ ಇಲಾಖೆಯಿಂದ ಶಾಲಾ–ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಫಲಕವಿದೆ. ಆದರೆ ಫಲಕದಲ್ಲಿರುವ ಸೂಚನೆಯನ್ನು ಯಾರು ಪಾಲಿಸುತ್ತಿಲ್ಲ. ಪೊಲೀಸರು ಸಹ ಇತ್ತ ತಲೆ ಹಾಕುವುದಿಲ್ಲ. 

ಎಎಸ್‌ಬಿ ಮೈದಾನದಲ್ಲಿ ವಾಹನ ನಿಲ್ಲಿಸುವುದರಿಂದ ಇಲ್ಲಿ ಆಟವಾಡಲು ಕಷ್ಟವಾಗುತ್ತದೆ. ಕ್ರಿಕೆಟ್‌ ಬಾಲ್‌ ವಾಹನಗಳಿಗೆ ತಗಲುವ ಭಯ ಇರುತ್ತದೆ. ಹಾಗಾಗಿ ಎಎಸ್‌ಬಿ ಮೈದಾನದಲ್ಲಿ ಆಟವಾಡುವುದನ್ನೇ ಬಿಟ್ಟಿದ್ದೇವೆ
-ಮಹೇಶ್‌, ವಿದ್ಯಾರ್ಥಿ
ಇಲ್ಲಿ ಎರಡು ಮೂರು ಶಾಲಾ ಕಾಲೇಜುಗಳಿವೆ. ಕ್ರೀಡಾಸಕ್ತರು ವಾಯು ವಿಹಾರಿಗಳು ಓಡಾಡುತ್ತಿರುತ್ತಾರೆ. ಮೈದಾನಕ್ಕೆ ಪೊಲೀಸರು ಆಗಾಗ್ಗೆ ಭೇಟಿ ನೀಡಬೇಕು. ವಾಹನ ನಿಲುಗಡೆಗೆ ನಿಷೇಧಿಸಬೇಕು
-ದಿವಾಕರ್‌, ಆನೇಕಲ್‌ ನಿವಾಸಿ
ಆನೇಕಲ್‌ ಎಎಸ್‌ಬಿ ಮೈದಾನವನ್ನು ಅಭಿವೃದ್ಧಿ ಪಡಿಸಲು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಮೈದಾನ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು.
-ಬಿ.ಶಿವಣ್ಣ, ಶಾಸಕ
ಮೈದಾನದಲ್ಲಿ ವಾಹನ ನಿಲುಗಡೆ
ಮೈದಾನದಲ್ಲಿ ಗಿಡಗೆಂಟಿ ಸ್ವಚ್ಛತೆಯಿಲ್ಲದ ಎಎಸ್‌ಬಿ ಮೈದಾನ
ಸಾರ್ವಜನಿಕ ವಾಹನಗಳಿಗ ಪ್ರವೇಶ ಇಲ್ಲ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.