ಆನೇಕಲ್: ಆನೇಕಲ್-ಚಂದಾಪುರ ರಸ್ತೆ ಎಂದರೆ ವಾಹನ ಸವಾರರಲ್ಲಿ ಒಂದು ರೀತಿಯ ಭಯ!. ಚಂದಾಪುರ ರಸ್ತೆಯ ಮರುಸೂರು ಗೇಟ್‌ನಿಂದ ಒಂದು ಕಿಲೋಮೀಟರ್ ರಸ್ತೆ ಸಮೀಪಿಸುತ್ತಿದ್ದಂತೆ ವಾಹನ ಸವಾರರಲ್ಲಿ ಸರ್ಕಸ್ ಕೌಶಲ್ಯ ಜಾಗೃತಗೊಳ್ಳುತ್ತದೆ!
ಚಂದಾಪುರ ರಸ್ತೆಯ ಮರಸೂರು ಗೇಟ್‌ನಿಂದ ರಾಮಕೃಷ್ಣಪುರ ಗೇಟ್ ವರಗಿನ ರಸ್ತೆಯು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಇಲ್ಲಿ ಸಂಚರಿಸಬೇಕಾದರೆ ಸರ್ಕಸ್‌ನಲ್ಲಿ ನೈಪುಣ್ಯ ಸಾಧಿಸಿರಲೇ ಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ರಸ್ತೆಯಲ್ಲಿ ಗುಂಡಿ ಇದಿಯೋ, ಗುಂಡಿಯೊಳಗೆ ರಸ್ತೆ ಇದಿಯೋ ಎಂಬುದು ತಿಳಿದು ಸಂಚಾರ ಮಾಡಬೇಕು. ಇಲ್ಲಿನ ಒಂದು ಕಿ.ಮೀ ರಸ್ತೆ ಸಂಚಾರಕ್ಕೆ 15–20 ನಿಮಿಷ ತೆಗೆದುಕೊಳ್ಳುತ್ತದೆ. ಇದರಿಂದ ನಿತ್ಯ ಈ ರಸ್ತೆಯಲ್ಲಿ ವಾಹನ ದಟ್ಟಣೆ ಕಾಯಂ ಆಗಿರುತ್ತದೆ.
ಇಲ್ಲಿ ಪ್ರತಿದಿನ ಸಂಚರಿಸುವವರು ಸರ್ಕಸ್ ಮಾಡುತ್ತಾ, ನೋವು ನುಂಗಿ ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.
ಆನೇಕಲ್‌ನಿಂದ ಚಂದಾಪುರಕ್ಕೆ, ಮರಸೂರು ಶೆಟ್ಟಹಳ್ಳಿಯಿಂದ ಚಂದಾಪುರಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆನೇಕಲ್-ಚಂದಾಪುರ ರಸ್ತೆಯಲ್ಲಿ ಗಾರ್ಮೆಂಟ್ಸ್‌ಗಳು ಹೆಚ್ಚಾಗಿರುವುದರಿಂದ ಬೆಳಗ್ಗೆ ಸಂಜೆ ಈ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಸಾವಾಹನಗಳು ಸಂಚರಿಸುತ್ತವೆ. ಆದರೆ ಹದಗೆಟ್ಟಿರುವ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ರಸ್ತೆ ಯಾವುದೋ ಗುಂಡಿ ಯಾವುದೋ ತಿಳಿಯದಾಗಿದೆ. ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಿದೆ. ಗುಂಡಿಗಳಲ್ಲಿ ಒಮ್ಮೊಮ್ಮೆ ಕಾರುಗಳು ಸಿಕ್ಕಿ ಅಲ್ಲಿಯೇ ನಿಲ್ಲುವುದು ಸಾಮಾನ್ಯವಾಗಿದೆ.
ಶೀಘ್ರವೇ ಇಲ್ಲಿ ಹೊಸದಾಗಿ ರಸ್ತೆ ನಿರ್ಮಿಸಬೇಕು. ಅಲ್ಲಿಯವರೆಗೆ ತಾತ್ಕಲಿವಾಗಿ ಗುಂಡಿಗಳನ್ನು ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸವಾರರು ಒತ್ತಾಯಿಸಿದ್ದಾರೆ.
ಆನೇಕಲ್ ಚಂದಾಪುರ ದ್ವಿಪಥ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಸತತ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಮಳೆ ಬಿಡುವು ಕೊಟ್ಟರೆ ಅಭಿವೃದ್ಧಿಗೆ ವೇಗ ನೀಡಲಾಗುವುದು. ಗುಂಡಿಗಳನ್ನು ಮುಚ್ಚಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದುಬಿ.ಶಿವಣ್ಣ ಶಾಸಕ
ಮರಸೂರು ಗೇಟ್‌ನಿಂದ ರಾಮಕೃಷ್ಣಪುರ ಗೇಟ್ ವರೆಗೆ ಒಂದು ಕಿ.ಮೀ. ಸಂಚರಿಸುವುದು ಅತ್ಯಂತ ಕಷ್ಟ. ಗುಂಡಿಗಳ ಮಧ್ಯೆ ರಸ್ತೆ ಹುಡುಕಬೇಕು. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕುಅನಿಲ್ ರೆಡ್ಡಿ ಸ್ಥಳೀಯ
ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ತಂಬಿಕೊಂಡಿದೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಒಳಗಾಗುತಿದ್ದಾರೆ. ಸಂಜೆಯಾದರೆ ವಾಹನ ದಟ್ಟಣೆ ಸಹ ಹೆಚ್ಚಾಗುತ್ತಿದೆ.ಸಿಂಚನ ಗಾರ್ಮೆಂಟ್ಸ್ ಉದ್ಯೋಗಿ
ಒಂದು ಕಿ.ಮೀ ವರೆಗೂ ವಾಹನ ದಟ್ಟಣೆ:
ಆನೇಕಲ್ ಚಂದಾಪುರ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವಾಹನಗಳ ಓಡಾಟ ಹೆಚ್ಚಿರುತ್ತದೆ. ರಸ್ತೆ ಗುಂಡಿಗಳನ್ನು ತಪ್ಪಿಸಿ ಸಲು ಅತ್ತಿಂದಿತ್ತ ಓಡಾಡುವ ವಾಹನಗಳಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ಸಂಜೆ 6ರ ನಂತರ ಒಂದು ಕಿಲೋಮೀಟರುಗೂ ಹೆಚ್ಚು ದೂರ ಉದ್ದನೆಯ ವಾಹನಗಳ ಸಾಲು ನಿಂತಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.