ಆನೇಕಲ್: ದಿನಗೂಲಿ ನೌಕರರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕೆಂದು ಪಟ್ಟಣದಲ್ಲಿ ಶಾಸಕ ಬಿ.ಶಿವಣ್ಣ ಅವರಿಗೆ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಂಘದ ವೆಂಕಟೇಶ್ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿನ ದಿನಗೂಲಿ ನೌಕರರನ್ನು 2014ರಲ್ಲಿ ಕಾಯಂಗೊಳಿಸುವಂತೆ ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಅನುಷ್ಠಾನಗೊಂಡಿಲ್ಲ. ದಿನಗೂಲಿ ನೌಕರರಿಗೆ ದೊರೆಯುವ ಸೌಲಭ್ಯಗಳು ಕೂಡ ದೊರೆಯುತ್ತಿಲ್ಲ ಎಂದು ತಿಳಿಸಿದರು.
ಆರೋಗ್ಯ ಸಂಜೀವಿನಿ ಸೇರಿದಂತೆ ಸರ್ಕಾರದ ಕಾರ್ಯಕ್ರಮಗಳು ದಿನಗೂಲಿ ನೌಕರರಿಗೆ ದೊರೆಯಬೇಕು. ಜೀವನ ನಿರ್ವಹಣೆ ಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಅವಶ್ಯಕ ಸೌಲಭ್ಯ ದೊರೆಯಬೇಕು. ರಾಜ್ಯದಲ್ಲಿ ಸುಮಾರು 13 ಸಾವಿರ ದಿನಗೂಲಿ ನೌಕರರಿದ್ದಾರೆ. ಈ ಪೈಕಿ ಶೇ.80ರಷ್ಟು ದಿನಗೂಲಿ ನೌಕರರು ನಿವೃತ್ತರಾಗಿದ್ದಾರೆ. ಉಳಿದ 20ರಷ್ಟು ಮಂದಿಗಾದರೂ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ಇಂಡ್ಲವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆದೂರು ಪ್ರಕಾಶ್, ದಿನಗೂಲಿ ನೌಕರರ ಪೈಕಿ ಅರಣ್ಯ ಇಲಾಖೆಯಲ್ಲಿ ಹೆಚ್ಚಿನ ನೌಕರರಿದ್ದಾರೆ. ಅವರ ಬದುಕು ಕಷ್ಟವಾಗಿದೆ. ಕಾಡಿನೊಂದಿಗೆ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಕೆಲಸ ಮಾಡುತ್ತಾರೆ. ನಿವೃತ್ತಿ ಅಂಚಿನಲ್ಲಿರುವ ದಿನಗೂಲಿ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.
ಸಂಘದ ಪದಾಧಿಕಾರಿಗಳಾದ ಮಾರಪ್ಪ, ಶ್ರೀನಿವಾಸ್, ಶಿವರಾಮಯ್ಯ, ಕಬ್ಬಾಳ, ಶಿವಪ್ಪ, ಸಿ.ರಮೇಶ್, ಚಿಕ್ಕರಾಮು, ತಿಮ್ಮರಾಯಪ್ಪ, ರಾಮಯ್ಯ, ನಾಗರಾಜ ರಾವ್, ಬಸಪ್ಪ, ಮಲ್ಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.