
ಆನೇಕಲ್: ಪಟ್ಟಣದ ಜ್ಞಾನಜ್ಯೋತಿಯ ಸಮಗ್ರ ಗ್ರಾಮೀಣ ಸಮೃದ್ಧಿ ಕೇಂದ್ರದಿಂದ ಅಂತರ್ಧರ್ಮಿಯ ಸಂವಾದ ಮತ್ತು ಕ್ರಿಸ್‌ಮಸ್ ಸಹ ಮಿಲನ ಕಾರ್ಯಕ್ರಮ ನಡೆಯಿತು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಧರ್ಮ ಗುರುಗಳು ಪಾಲ್ಗೊಂಡಿದ್ದರು.
ಮೂರು ಧರ್ಮಗಳ ಧರ್ಮಗಳು ಸಂವಿಧಾನದ ಮಹತ್ವ ಸಾರಿ ಸಮ ಸಮಾಜ ನಿರ್ಮಾಣ, ಸಾಮರಸ್ಯ, ಶಾಂತಿ, ಸಹೋದರತೆ ಮತ್ತು ಭಾತೃತ್ವದ ಮಂತ್ರ ಪಠಿಸಿದರು.
ಬೆಂಗಳೂರು ಬೇಲಿ ಮಠದ ಶಿವರುದ್ರ ಸ್ವಾಮೀಜಿ ಸಮಾಜದ ಪರಿವರ್ತನೆಗೆ ಎಲ್ಲಾ ಸಮುದಾಯಗಳು ಒಗ್ಗೂಡಬೇಕಿದೆ. ಸಮ ಸಮಾಜದ ನಿರ್ಮಾಣ ಸಂವಿಧಾನದ ಮೂಲ ಗುರಿಯಾಗಿದೆ. ದ್ವೇಷ ರಹಿತ ಸಮಾಜ ನಿರ್ಮಾಣ ಎಲ್ಲಾ ಧರ್ಮಗಳ ಗುರಿಯಾಗಿದೆ. ಈ ರೀತಿ ಸಾಮರಸ್ಯ ಬೇಸಯುವ ಅಂತರ್ಧರ್ಮಿಯ ಸಂವಾದ ಮತ್ತು ಸಮಾವೇಶಗಳು ಎಲ್ಲೆಡೆ ಹೆಚ್ಚಾಗಬೇಕು. ಇದರಿಂದಾಗಿ ಧರ್ಮ ಧರ್ಮಗಳ ನಡುವಿನ ಕಂದಕ ಕಡಿಮೆಯಾಗುತ್ತದೆ ಎಂದು ಹೇಳಿದರು.
ಅಂತರ್ಧರ್ಮಿಯ ಸಂವಾದವು ಮಾನವೀಯತೆ, ಸಮಾನತೆ ಮತ್ತು ಪ್ರೀತಿ ಗೌರವವನ್ನು ಹೆಚ್ಚು ಮಾಡುತ್ತದೆ. ನಾವೆಲ್ಲರೂ ಮನುಷ್ಯರು ಹೊಂದಾಣಿಕೆ ಪ್ರೀತಿ ಮತ್ತು ಸಹೋದರತ್ವದಿಂದ ಜೀವನ ನಡೆಸಬೇಕು ಎಂದು ಏಸುಕ್ರಿಸ್ತರು ಸಂದೇಶ ನೀಡಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ತನ್ವೀರ್ ಅಹಮದ್, ಅಂತರ್ಧರ್ಮಿಯ ಸಂವಾದದ ಮೂಲಕ ಜನರನ್ನ ಒಂದುಗೂಡಿಸುವುದರ ಜೊತೆಗೆ ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವ ಉತ್ತಮ ಕಾರ್ಯಕ್ರಮವಾಗಿದೆ. ಮುಂದಿನ ಪೀಳಿಗೆಗೆ ಸಹೋದರತೆ ಮತ್ತು ಸಹಬಾಳ್ವೆಯ ಪಾಠವನ್ನು ಕಲಿಸುತ್ತದೆ ಎಂದರು.
ಆನೇಕಲ್ ಚರ್ಚ್‌ನ ಫಾದರ್ ವಿನಯ್ ಕುಮಾರ್ ಮಾತನಾಡಿ, ಎಲ್ಲಾ ಧರ್ಮಗಳ ತತ್ವವು ಪ್ರೀತಿ, ನಂಬಿಕೆ ಮತ್ತು ವಿಶ್ವಾಸವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಣ್ಣಪುಟ್ಟ ವ್ಯತ್ಯಾಸಗಳಿಂದ ಅಸಮಾನತೆ ಉಂಟಾಗಿದೆ. ಸಮ ಸಮಾಜದ ನಿರ್ಮಾಣಕ್ಕೆ ಅಂತರ್ಧರ್ಮಿಯ ಸಂವಾದ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.
ಸಮಗ್ರ ಗ್ರಾಮೀಣ ಸಮೃದ್ಧಿ ಕೇಂದ್ರದ ನಿರ್ದೇಶಕ ಫಾದರ್ ಅರ್ವಿನ್ ಇದ್ದರು. ಅಂತರ್ಧರ್ಮಿಯ ಸಾಮರಸ್ಯದ ಕುರಿತು ಕಿರು ನಾಟಕ, ನೃತ್ಯ ಪ್ರದರ್ಶನ ನಡೆಯಿತು.
ಆನೇಕಲ್ ತಾಲ್ಲೂಕಿನಲ್ಲಿ ಐಕ್ಯತೆಯ ಹೊಸ ಅಧ್ಯಾಯ ಬರೆಯುವ ಸಲುವಾಗಿ ಸಂವಾದ ಮತ್ತು ಕ್ರಿಸ್ಮಸ್ ಸಹಮಿಲನ ಕಾರ್ಯಕ್ರಮ ರೂಪಿಸಲಾಗಿದೆ.ವಿನಯ್ ಕುಮಾರ ಫಾದರ್ ಆನೇಕಲ್ ಚರ್ಚ್
ಕ್ರಿಸ್ಮಸ್ ಹಬ್ಬವು ಪ್ರೀತಿ ತ್ಯಾಗ ಸೇವೆ ಮತ್ತು ಕ್ಷಮೆಯ ಪಾಠವನ್ನು ಕಲಿಸುತ್ತದೆ. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಧರ್ಮ ಗ್ರಂಥಗಳ ಮಹತ್ವವನ್ನು ತಿಳಿಯಬೇಕು. ವಿಭಿನ್ನ ದೇವರುಗಳನ್ನು ಆರಾಧಿಸಿ ವಿಭಿನ್ನ ಗ್ರಂಥಗಳನ್ನು ಓದಿದರು ನಮ್ಮ ಹುಡುಕಾಟ ಶಾಂತಿ ಪ್ರೀತಿ ಮತ್ತು ಸತ್ಯವಾಗಿದೆ ಎಂದು ಆನೇಕಲ್ ಚರ್ಚ್‌ನ ಫಾದರ್ ವಿನಯ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.