ಪ್ರಾತಿನಿಧಿಕ ಚಿತ್ರ
ಹೊಸಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆಯೋ ಅಥವಾ ದಮನಿತ ಪರವಾಗಿ ಕೆಲಸ ಮಾಡುತ್ತಿದೆಯೋ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಹರಿಂದ್ರ ಹೇಳಿದರು.
ಹಾಸನನದಲ್ಲಿ ನಡೆಯುವ ಸಿಐಟಿಯು ಸಮ್ಮೇಳನ ಪ್ರಯುಕ್ತ ಸಹಿ ಸಂಗ್ರಹ ಅಭಿಯಾನ ಹಾಗೂ ಧ್ವಜ ದಿನಾಚರಣೆಯಲ್ಲಿ ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ಒಂದೆಡೆಯಾದರೆ ಸರ್ಕಾರಗಳು ಕಾರ್ಮಿಕ ವರ್ಗದ ಪರವಾಗಿದ್ದ ಕಾನೂನುಗಳನ್ನು ಬಂಡಾವಳಶಾಹಿಗಳ ಪರವಾಗಿ ರೂಪಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ 8 ಗಂಟೆ ಕಾರ್ಯಾವಧಿಗೆ ಬದಲಿಯಾಗಿ 12 ಗಂಟೆ ಕೆಲಸದ ಅವಧಿ ನಿಗದಿ ಮಾಡುತ್ತಿದೆ. ಆದರೆ ಅವರಿಗೆ ಕನಿಷ್ಠ ₹15,000 ಇರುವ ವೇತನವನ್ನು ಗರಿಷ್ಠ ₹36,000ಕ್ಕೆ ಏರಿಸುವ ಬಗ್ಗೆ ಸರ್ಕಾರಗಳು ಕ್ರಮ ಕೈಗೊಂಡಿಲ್ಲ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ, ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಉಚಿತ ಆರೋಗ್ಯ ದೇಶದ ಜನತೆಗೆ ಮರಿಚೀಕೆಯಾಗಿದೆ. ಇದನ್ನು ಜನರಿಗೆ ತಿಳಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾರ ಪರ ಕೆಲಸ ಮಾಡುತ್ತಿವೆ ಎಂಬುದನ್ನು ಜನರಿಗೆ ತಿಳಿಸುವ ಸಲುವಾಗಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲೂ ಕನಿಷ್ಠ 6 ಸಾವಿರ ಮನೆಗಳಿಗೆ ತೆರಳಿ ಸಹಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಿನವಾರದಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಹಾಸನದಲ್ಲಿ ನಡೆಯುವ ಸಮ್ಮೇಳನಕ್ಕೆ ಹಾಗೂ ಡಿ.21 ರಂದು ಸಿಪಿಐ(ಎಂ) ಪಕ್ಷ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಜನಾಂದೋಲನ ಬೃಹತ್ ಪ್ರತಿಭಟನಾ ಬಹಿರಂಗಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಚಂದ್ರತೇಜಸ್ವಿ, ಮುನಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.