ADVERTISEMENT

ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ 52 ಎಕರೆ ಜಮೀನು ಹಸ್ತಾಂತರ ತಂದ ಆತಂಕ

ನಟರಾಜ್ ನಾಗಸಂದ್ರ
Published 23 ಜನವರಿ 2025, 4:52 IST
Last Updated 23 ಜನವರಿ 2025, 4:52 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಬಂದಿರುವ ಬೃಹತ್‌ ಕಸದ ರಾಶಿ (ಸಂಗ್ರಹ ಚಿತ್ರ)
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪ ಬಿಬಿಎಂಪಿ ವ್ಯಾಪ್ತಿಯಿಂದ ಬಂದಿರುವ ಬೃಹತ್‌ ಕಸದ ರಾಶಿ (ಸಂಗ್ರಹ ಚಿತ್ರ)   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ಸ್ಥಳೀಯರ ಹಾಗೂ ವಿವಿಧ ಸಂಘಟನೆಗಳ ತೀವ್ರ ವಿರೋಧದಿಂದಾಗಿ 2014ರಲ್ಲಿ ಬಂದ್‌ ಆಗಿದ್ದ ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕ ಈಗ ಅಧಿಕೃತವಾಗಿ ಬಿಬಿಎಂಪಿ ಕೈವಶವಾಗುತ್ತಿರುವ ಸುದ್ದಿ ಸ್ಥಳೀಯರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.

ಇದಕ್ಕೆ ಕಾರಣ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕದ 52 ಎಕರೆ ಸರ್ಕಾರಿ ಜಮೀನನ್ನು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿಗೆ ಹಸ್ತಾಂತರಿಸುವ ಕುರಿತು ಕಂದಾಯ ಇಲಾಖೆ ಆಯುಕ್ತರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಡಿಸೆಂಬರ್‌ನಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪ್ರಥಮ ಹಂತದ ಸಭೆ ನಡೆಸಿರುವುದು. ಈ ಸಭೆ ನಡೆದಿರುವ ಕುರಿತಂತೆ ಕಂದಾಯ ಇಲಾಖೆ ಮೂಲಗಳಿಂದ ‘ಪ್ರಜಾವಾಣಿ’ಗೆ ಮಾಹಿತಿ ದೊರೆತಿದೆ.

ತಾಲ್ಲೂಕಿನ ಗುಂಡ್ಲಹಳ್ಳಿ ಗ್ರಾಮದ ಸಮೀಪ 2006ರಲ್ಲಿ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕ ಕಾರ್ಯಾರಂಭ ಮಾಡಿತ್ತು. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ಹಸಿ ಕಸವನ್ನು ಮಾತ್ರ ತಂದು ಎರೆಹುಳು ಗೊಬ್ಬರ ತಯಾರಿಸಿ ರೈತರಿಗೆ ನೀಡುವುದಾಗಿ ಹೇಳುವ ಮೂಲಕ ಪ್ರಾರಂಭಿಸಲಾಗಿತ್ತು. ಕಲವೇ ವರ್ಷಗಳಲ್ಲಿ ಬೃಹತ್‌ ಪ್ರಮಾಣದಲ್ಲಿ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿದ ಲಾರಿಗಳು ಬರಲಾರಂಭಿಸಿದ್ದವು. 

ADVERTISEMENT

2006ರಲ್ಲಿ ಅಂದು ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭವಾಯಿತು.  ಇದನ್ನು ವಿರೋಧಿಸಿ ಸ್ಥಳೀಯರ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಮುಖಂಡರಾಗಿದ್ದ ಟಿ.ವೆಂಕಟರಮಣಯ್ಯ ಹೋರಾಟಕ್ಕೆ ಬೆಂಬಲವಾಗಿ ನಿಂತರು. 2014ರಲ್ಲಿ ಟಿ.ವೆಂಕಟರಮಣಯ್ಯ ಶಾಸಕರಾಗಿ ಆಯ್ಕೆಯಾದ ನಂತರ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕ ಬಂದ್‌ ಮಾಡಿಸಿದರು.

ಆದರೆ, ಇದೇ ಸಮಯದಲ್ಲಿ ಹಸಿ ಕಸ ಮಾತ್ರ ಬಳಸಿ ಜಪಾನ್‌ ಮಾದರಿಯ ಯಂತ್ರಗಳಿಂದ ಎರೆಹುಳು ಗೊಬ್ಬರ ತಯಾರಿಸಿ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಭರವಸೆಯೊಂದಿಗೆ 2015ರಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಚಿಗರೇನಹಳ್ಳಿ ಸಮೀಪ ಸುಮಾರು 100 ಎಕರೆ ಪ್ರದೇಶದಲ್ಲಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಿದರು.

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ 2022 ರಿಂದ ಹೋರಾಟ ನಡೆಸಿದ್ದ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳಿಗೆ ಬೆಂಬಲವಾಗಿ ಬಿಜೆಪಿ ಮುಖಂಡರು, ಹಾಲಿ ಶಾಸಕ ಧೀರಜ್‌ ಮುನಿರಾಜ್‌ ಬೆಂಬಲ ನೀಡಿದ್ದರು.

ಧಿರಜ್‌ ಶಾಸಕರಾಗಿರುವ ಅವಧಿಯಲ್ಲಿ ಮತ್ತೆ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕದ ಜಮೀನು ಅಧಿಕೃತವಾಗಿ ಬಿಬಿಎಂಪಿ ಪಾಲಾಗುತ್ತಿರುವ ಕುರಿತಂತೆ ಕಂದಾಯ ಇಲಾಖೆ ಮೂಲಗಳಿಂದ ಮಾಹಿತಿಗಳು ಕೇಳಿಬರತ್ತಿವೆ.

ಶಾಸಕ ಕ್ಷೇತ್ರದ ಜನರ ಪರವಾಗಿ ನಿಲ್ಲುತ್ತಾರಾ ಅಥವಾ ಈ ಹಿಂದಿನ ಶಾಸಕರರಂತೆ ಕಸ ವಿಲೇವಾರಿ ಘಟಕ ಆರಂಭಕ್ಕೆ ಅವಕಾಶ ನೀಡುತ್ತಾರ ಎನ್ನುವ ಚರ್ಚೆಗಳು ಜೋರಾಗಿವೆ. 

ಗುಂಡ್ಲಹಳ್ಳಿ ಗ್ರಾಮದ ಸಮೀಪ ಘನತ್ಯಾಜ್ಯ ನಿರ್ವಹಣೆ ಮಾಡಲು ಬಿಬಿಎಂಪಿಗೆ 52 ಎಕರೆ ಸರ್ಕಾರಿ ಜಮೀನು ಸಹ್ತಾಂತರ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು
ಎನ್‌.ದುರ್ಗಶ್ರೀ ಉಪವಿಭಾಗಾಧಿಕಾರಿ
ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕದಲ್ಲಿ ಸರ್ಕಾರಿ ಜಮೀನಿನಲ್ಲಿ 52 ಎಕರೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲು ನಮ್ಮ ವಿರೋಧ ಇದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಕ್ಷೇತ್ರದ ಜನರ ಆರೋಗ್ಯ ಪರಿಸರ ಉಳಿಸುವುದಕ್ಕೆ ಪ್ರಥಮ ಆದ್ಯತೆ.
ಧೀರಜ್‌ ಮುನಿರಾಜು ಶಾಸಕ

ಹೈ ಕೋರ್ಟ್‌ ಮೊರೆ

ಸರ್ಕಾರದ ವಿರುದ್ಧ ಹೋರಾಟ ಚಿಗರೇನಹಳ್ಳಿ ಸಮೀಪದ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಪರಿಸರ ಇಲಾಖೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವ ಕುರಿತಂತೆ ಹೈಕೋರ್ಟ್‌ ಮೋರೆ ಹೋಗಲಾಗಿದೆ. ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಇ-ಖಾತೆ ಮಾಡಿಕೊಡುವಂತೆ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

ಕಸ ವಿಲೇವಾರಿ ಘಟಕಕ್ಕೆ ಅಗತ್ಯ ಇರುವ ಯಾವುದೇ ಅನುಮತಿ ಇ-ಖಾತೆಗಳನ್ನು ಮಾಡಿಕೊಡದಂತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಲಾಗಿದೆ. ಗುಂಡ್ಲಹಳ್ಳಿ ಟೆರ್ರಾ ಫಾರ್ಮ್‌ ಕಸ ವಿಲೇವಾರಿ ಘಟಕಕ್ಕೆ ಜಮೀನು ಮಂಜೂರು ಮಾಡುವ ಬಗ್ಗೆ ಮಾಹಿತಿ ಕೇಳಿ ಬರುತ್ತಿವೆ. ನಮ್ಮ ಉಳಿವಿಗಾಗಿ ಸರ್ಕಾದ ಈ ಕ್ರಮದ ವಿರುದ್ಧ ಹೋರಾಟ ನಡೆಸಲಾಗುವುದು. ಸಿದ್ದಲಿಂಗಯ್ಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡಬಳ್ಳಾಪುರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.