ADVERTISEMENT

ದೆಹಲಿ ಮಾದರಿ ಪಟಾಕಿ ನಿಷೇಧಕ್ಕೆ ಚಿಂತನೆ: ಗೃಹ ಸಚಿವ ಪರಮೇಶ್ವರ

ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 14:05 IST
Last Updated 18 ಅಕ್ಟೋಬರ್ 2023, 14:05 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪಟಾಕಿ ದುರಂತದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪಟಾಕಿ ದುರಂತದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಆನೇಕಲ್: ಅತ್ತಿಬೆಲೆ ಪಟಾಕಿ ದುರಂತ ಸರ್ಕಾರಕ್ಕೆ ಒಂದು ಪಾಠ. ಕಾನೂನು ಸಮಗ್ರವಾಗಿ ಪರಿಶೀಲಿಸಿ ಹೊಸ ಕಾನೂನು ರೂಪಿಸುವ ಅವಶ್ಯ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಗ್ನಿ ಅವಘಡ ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಪಟಾಕಿ ನಿಷೇಧಿಸುವ ಚಿಂತನೆ ನಡೆದಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಬೆಂಗಳೂರು ನಗರದಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡುವ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಅತ್ತಿಬೆಲೆ ಪಟಾಕಿ ದುರಂತದಲ್ಲಿ ಕಂದಾಯ, ಪೊಲೀಸ್‌, ಅಗ್ನಿಶಾಮಕ ಮತ್ತು ಸಾರಿಗೆ ಇಲಾಖೆ ವೈಫಲ್ಯ ಕಂಡು ಬಂದಿದೆ. ಪಟಾಕಿಗಳನ್ನು ಹೊರ ರಾಜ್ಯದಿಂದ ತರುವ ಸಂದರ್ಭದಲ್ಲಿ ಗಡಿಯಲ್ಲಿ ಸಾರಿಗೆ ಇಲಾಖೆ ಚೆಕ್‌ಫೋಸ್ಟ್‌ಗಳಲ್ಲಿ ಪರಿಶೀಲನೆ ನಡೆಸಬೇಕಾಗಿತ್ತು. ಅವರ ಬಳಿ ಸ್ಫೋಟಕಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಎಲ್‌ಇ 7 ಪರವಾನಗಿ ಇರಲಿಲ್ಲ. ಆದರೆ, ರಾಜಾರೋಷವಾಗಿ ಸಾಗಣಿಕೆ ಮಾಡಿದ್ದಾರೆ. ಅಂಗಡಿಗೆ ಪರವಾನಗಿ ನೀಡುವಾಗ ಒಂದು ಸಾವಿರ ಕೆ.ಜಿ ಪಟಾಕಿ ಸಂಗ್ರಹಕ್ಕೆ ಪರವಾನಗಿ ನೀಡಲಾಗಿದೆ. ಆದರೆ, 50 ಸಾವಿರ ಕೆಜಿ ಪಟಾಕಿ ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾರು ಪರಿಶೀಲನೆ ನಡೆಸಿಲ್ಲ. ಹಾಗಾಗಿ ನಾಲ್ಕು ಇಲಾಖೆಗಳು ಪರವಾನಗಿ, ಪರಿಶೀಲನೆ ಮಾಡುವಲ್ಲಿ ವಿಫಲವಾಗಿವೆ. ಇದರಿಂದಾಗಿ 17 ಮಂದಿ ಮೃತಪಟ್ಟಿದ್ದಾರೆ ಎಂದರು.

ಪಟಾಕಿ ಪರವಾನಗಿ ಪಡೆದಿದ್ದ ರಾಮಸ್ವಾಮಿರೆಡ್ಡಿ ಅವರ ಪರವಾನಗಿ ಅಕ್ಟೋಬರ್‌ 2022ಕ್ಕೆ ಮುಗಿದಿದೆ. ಮತ್ತೆ ಪರವಾನಗಿ 2023ರ ಸೆಪ್ಟೆಂಬರ್‌ನಲ್ಲಿ ಪಡೆದಿದ್ದಾರೆ. ಸುಮಾರು 11 ತಿಂಗಳ ಅವಧಿಯಲ್ಲಿ ಪರವಾನಗಿ ಇಲ್ಲದೇ ನಕಲಿ ಪರವಾನಗಿ ಬಳಸಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ.

ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿದೆ. ಸರ್ಕಾರ ಮ್ಯಾಜಿಸ್ಟ್ರೇಟ್‌ ತನಿಖೆಗೂ ಆದೇಶ ನೀಡಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಿದೆ. ವರದಿ ಕೈ ಸೇರಿದ ನಂತರ ಕ್ರಮ ಕೈಗೊಳ್ಳಲಾಗುವುದು. ನಿರ್ದಿಷ್ಟ ಮಾನದಂಡ ಅಳವಡಿಸಿ ಹೊಸ ಕಾನೂನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದರು.

ಕಾಂಗ್ರೆಸ್‌ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆ ಈಡೇರಿಸಿದೆ. ಜನರಿಗೆ ಒಳ್ಳೆಯ ಆಡಳಿತ ನೀಡುವುದು ಗುರಿಯಾಗಿದೆ. ರಾಜ್ಯದಲ್ಲಿ ಶಾಂತಿ, ನೆಮ್ಮದಿ ಕಾಪಾಡಿಕೊಳ್ಳುವುದು ಬದ್ಧತೆಯಾಗಿದೆ ಎಂದರು.

ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ ಪಂತ್‌, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ರವಿ.ಡಿ.ಚನ್ನಣ್ಣನವರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌, ಎಎಸ್ಪಿ ಎಂ.ಎಲ್‌.ಪುರುಷೋತ್ತಮ್‌, ತಹಶೀಲ್ದಾರ್‌ ಶಿವಪ್ಪ.ಎಚ್.ಲಮಾಣಿ, ಅತ್ತಿಬೆಲೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌, ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಇದ್ದರು.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಪಟಾಕಿ ದುರಂತದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು

ಅಧಿಕಾರಿಗಳಿಗೆ ಹುದ್ದೆ: ಸಿ.ಎಂ ತೀರ್ಮಾನ

ಐಎಎಸ್‌ ಅಧಿಕಾರಿಗಳಿಗೆ ಹುದ್ದೆ ನಿಯೋಜನೆ ಸಂಬಂಧ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲೇ ಕೆಲಸ ಮಾಡಿದರೂ ವೇತನ ಸಿಗಲಿದೆ. ಹಾಗಾಗಿ ನಿರ್ದಿಷ್ಟ ಜಾಗದಲ್ಲಿಯೇ ಕೆಲಸ ಮಾಡಬೇಕೆಂಬ ನಿಯಮಗಳಿಲ್ಲ. ಕೇಂದ್ರ ಸರ್ಕಾರಕ್ಕೆ ನಿಯೋಜನೆ ಮಾಡಲು ಹಲವು ಶಿಷ್ಟಾಚಾರಗಳಿವೆ. ಅದರಂತೆ ನಿಯೋಜನೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಹಾಗಾಗಿ ಅವರಿಗೆ ಅನುಭವವಿದೆ. ಯಾವ ಅಧಿಕಾರಿಯನ್ನು ಯಾವ ಇಲಾಖೆಗೆ ನಿಯೋಜಿಸಬೇಕೆಂಬ ಅರಿವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.