ADVERTISEMENT

ಹಾಲು ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:15 IST
Last Updated 10 ಫೆಬ್ರುವರಿ 2026, 4:15 IST
ಕೊನಘಟ್ಟದಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು
ಕೊನಘಟ್ಟದಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು   

ದೊಡ್ಡಬಳ್ಳಾಪುರ: ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ ₹5ರಿಂದ ₹7 ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸುಧಾರಣೆ ತರಲು ಬಮೂಲ್ ಕಾರ್ಯೋನ್ಮುಖವಾಗಿದೆ. ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯಿಂದ ಹಿಂದೆ ಸರಿಯಬಾರದು ಎಂದು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ.ಸುರೇಶ್ ಸಲಹೆ ನೀಡಿದ್ದಾರೆ.

ಕೊನಘಟ್ಟ ಗ್ರಾಮದಲ್ಲಿ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ, ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ, ಮಿಶ್ರ ತಳಿ ಕರು ಪ್ರದರ್ಶನ ಮತ್ತು ಡೇರಿ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು.

ಇಡೀ ದೇಶದಲ್ಲಿ ಹಾಲಿಗೆ ಲೀಟರಿಗೆ ₹5ಪ್ರೋತ್ಸಾಹ ಧನ ನೀಡುವ ಏಕೈಕ ರಾಜ್ಯ ಕರ್ನಾಟಕ. ಇತರ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಹಾಲಿಗೆ ಹೆಚ್ಚಿನ ದರ ಸಿಗುತ್ತದಾದರೂ, ಹೈನುಗಾರಿಕೆಯಲ್ಲಿ ನಷ್ಟದ ಸಮಸ್ಯೆಯಿಂದಾಗಿ ರೈತರು ಈ ವಲಯದಿಂದ ದೂರ ಸರಿಯುತ್ತಿದ್ದಾರೆ. ಬೇಸಿಗೆ ಮತ್ತು ಇತರ ಕಾರಣಗಳಿಂದಾಗಿ ಬಮೂಲ್‌ ಒಟ್ಟು ಹಾಲು ಉತ್ಪಾದನೆ 18 ಲಕ್ಷ ಲೀಟರ್‌ನಿಂದ 15ಲಕ್ಷ ಲೀಟರ್‌ಗೆ ಇಳಿದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಉತ್ಪಾದನೆ 1.80 ಲಕ್ಷ ಲೀಟರ್‌ನಿಂದ 1.05 ಲಕ್ಷ ಲೀಟರ್‌ಗೆ ಕುಸಿದಿದೆ ಎಂದರು.

ADVERTISEMENT

ಜಿಲ್ಲಾ ಸಹಕಾರಿ ಬ್ಯಾಂಕ್ ಮೂಲಕ ಹೊಸ ಹಸು ಖರೀದಿಗೆ ವಿಶೇಷ ಸಾಲ ಯೋಜನೆ ನೀಡಲಾಗುವುದು. ಪ್ರತಿ ಸಹಕಾರ ಸಂಘದ ವ್ಯಾಪ್ತಿಯಲ್ಲಿ 25 ಜನ ರೈತರಿಗೆ ವಾರ್ಷಿಕ ಶೇ3ಬಡ್ಡಿ ದರದಲ್ಲಿ ₹1.60 ಲಕ್ಷದಿಂದ ₹15 ಲಕ್ಷ ವರೆಗೆ ಸಾಲ ನೀಡಲಾಗುವುದು. ಹೆಣ್ಣು ಕರು ಜನನವನ್ನು ಪ್ರೋತ್ಸಾಹಿಸಲು ತಳಿ ಸುಧಾರಣಾ ಕಾರ್ಯಕ್ರಮ ಇದೆ.
ರೈತರಿಗೆ ಹಸಿ ಮೇವು, 1ಲಕ್ಷ ಮೇವು ಚೀಲಗಳು (ಕೌಮ್ಯಾಟ್) ಮತ್ತು ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವುದು ಎಂದರು.

ನಾಟಿ ತಳಿ ಹಸುಗಳ ಹಾಲಿಗೆ ಲೀಟರ್‌ಗೆ ₹90 ಬೆಲೆ ನೀಡುವುದು ಮತ್ತು ಅದರ ಸಂಗ್ರಹ ವ್ಯವಸ್ಥೆ ಆದ್ಯತೆ ನೀಡಲಾಗುವುದು. ಹಸುವಿಗೆ ಕರು ಹಾಕಿದ ನಂತರದ ಮೊದಲ 5 ದಿನಗಳ 'ಗಿಣ್ಣಿನ ಹಾಲು' (ಕೊಲಸ್ಟ್ರಮ್) ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಇದೆ ಎಂದು ಹಾಲಿನ ಉತ್ಪಾದನೆ ಹೆಚ್ಚಿಸಲು ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಅವರು ವಿವರಿಸಿದರು.

ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಹಾಲು ಟೆಟ್ರಾ ಪ್ಯಾಕ್ ಮತ್ತು ಇತರ ನಂದಿನಿ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪಿಸಲು 15 ಎಕರೆ ಜಮೀನನ್ನು ಖರೀದಿಸಲಾಗಿದೆ. ಈ ಘಟಕ ಸ್ಥಾಪನೆಗೆ ಬಮೂಲ್ ಅನುದಾನ ನೀಡಲಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿ ಎಂದು ಮನವಿ ಮಾಡಿದರು.

ಶಾಸಕ ಧೀರಜ್ ಮುನಿರಾಜು ಮಾತನಾಡಿ, ತಾಲೂಕಿನ ಕೂಗೇನಹಳ್ಳಿಯಲ್ಲಿ ಪ್ಯಾಕೇಜಿಂಗ್ ಘಟಕ ಸ್ಥಾಪನೆಗೆ ಬಮೂಲ್ ಅನುದಾನ ನೀಡಬೇಕೆಂದು ಮನವಿ ಮಾಡಿದರು.

 ಕೊನಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಮುನಿರಾಜು ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಟಿ.ಎ.ಪಿ.ಎಂಸಿ.ಎಸ್ ಅಧ್ಯಕ್ಷ ಸಿದ್ದರಾಮಯ್ಯ, ನಿರ್ದೇಶಕ ವಿಶ್ವಾಸ್ ಹನುಮಂತೇಗೌಡ, ಭಾರತ ಸೇವಾ ದಳದ ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀಪತಿ, ಕೊನಘಟ್ಟ ಎಂಪಿಸಿಎಸ್ ಉಪಾಧ್ಯಕ್ಷ ಅಂಬರೀಶ್, ಕಾರ್ಯನಿರ್ವಾಹಕ ಕೆ.ಆರ್.ಸುಬ್ಬೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.