ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ದೇವನಹಳ್ಳಿ ತಾಲ್ಲೂಕಿನಲ್ಲಿ 17 ಹುದ್ದೆ ಖಾಲಿ: 23 ಶಾಲೆಯಲ್ಲಿ ಮೈದಾನ ಇಲ್ಲ

ಎಂ.ಮುನಿನಾರಾಯಣ
Published 2 ಡಿಸೆಂಬರ್ 2022, 4:11 IST
Last Updated 2 ಡಿಸೆಂಬರ್ 2022, 4:11 IST
ವಿಜಯಪುರ ಪಟ್ಟಣದಲ್ಲಿ ಮೈದಾನವಿಲ್ಲದ ಗುರಪ್ಪನಮಠ ಸರ್ಕಾರಿ ಶಾಲೆ
ವಿಜಯಪುರ ಪಟ್ಟಣದಲ್ಲಿ ಮೈದಾನವಿಲ್ಲದ ಗುರಪ್ಪನಮಠ ಸರ್ಕಾರಿ ಶಾಲೆ   

ವಿಜಯಪುರ(ಬೆಂ.ಗ್ರಾಮಾಂತರ): ದೇವನಹಳ್ಳಿ ತಾಲ್ಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಹಾಗೂ ಕ್ರೀಡಾ ಮೈದಾನ ಕೊರತೆಯಿಂದ ಮಕ್ಕಳು ದೈಹಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದು ಸರ್ಕಾರಿ ಶಾಲೆಗಳಲ್ಲಿರುವ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ತೊಡಕಾಗಿದೆ.

ಮಕ್ಕಳ ಆಟೋಟಗಳಿಗೆ ಉತ್ತಮವಾದ ಸ್ಥಳಾವಕಾಶಗಳಿರಬೇಕು. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದರೆ ತಾಲ್ಲೂಕಿನಲ್ಲಿ ಒಟ್ಟು 23 ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ಮೈದಾನಗಳಿರುವ ಕಡೆ ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ.

ತಾಲ್ಲೂಕಿನಲ್ಲಿ 222 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ 25 ದೈಹಿಕ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಕೇವಲ ಎಂಟು ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 17 ಹುದ್ದೆ ಖಾಲಿ ಇವೆ. 17 ಪ್ರೌಢಶಾಲೆಗಳಿ 17 ಹುದ್ದೆ ಮಂಜೂರಾಗಿದೆ. ಎಂಟು ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂಬತ್ತು ಹುದ್ದೆ ಖಾಲಿಯಿವೆ.

ADVERTISEMENT

ಆಟದ ಮೈದಾನಗಳಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಕಾಡುತ್ತಿದೆ. ದೈಹಿಕ ಶಿಕ್ಷಕರು ಇಲ್ಲದ ಕಡೆ ಇತರೆ ಶಿಕ್ಷಕರೇ ತಮಗೆ ಗೊತ್ತಿರುವಷ್ಟು ಮಾರ್ಗದರ್ಶನ ಮಾಡುತ್ತಿದ್ದಾರೆ. ಇತ್ತಿಚೆಗೆ ನಡೆದ ಕ್ರೀಡಾಕೂಟಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನ ತೋರಿದರೂ ಅವರಿಗೆ ಮತ್ತಷ್ಟು ಪ್ರೋತ್ಸಾಹ ಮಾಡುವ ದೈಹಿಕ ಶಿಕ್ಷಕರ ಅವಶ್ಯಕತೆ
ಹೆಚ್ಚಾಗಿದೆ.

ಶಾಲೆ ಮತ್ತು ಮಕ್ಕಳ ಹಿತದೃಷ್ಟಿಯಿಂದ ಹಿಂದೆ, ಸ್ಥಳೀಯರು ಜಮೀನು ದಾನ ನೀಡಿ, ಶಾಲೆಗಳ ಕಟ್ಟಡ ನಿರ್ಮಾಣ, ಆಟದ ಮೈದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ, ಇತ್ತಿಚಿನ ದಿನಗಳಲ್ಲಿ ಅವರ ವಾರಸುದಾರರು ದಾನವಾಗಿ ಕೊಟ್ಟಿರುವ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಉದಾಹರಣೆಗಳು ಹೆಚ್ಚಿವೆ. ಈಗಾಗಲೇ ಶಾಲಾ ಜಾಗ ಮತ್ತು ಆಸ್ತಿ ದಾಖಲೆಗಳ ರಕ್ಷಣೆ, ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದ್ದು, ದೈಹಿಕ ಶಿಕ್ಷಕರನ್ನು ನೇಮಕ ಮಾಡಿದರೆ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುವುದು ಇಲ್ಲಿನ ಸ್ಥಳೀಯ ಅಭಿಮತ.

ಮಕ್ಕಳ ಕನಸಿಗೆ ಅಡ್ಡಿ

‘ರಾಜ್ಯದ ಕೆಲವಡೆ ಸರ್ಕಾರಿ ಶಾಲೆಗಳು ಉತ್ತಮ ಮೂಲ ಸೌಕರ್ಯವನ್ನು ಒಳಗೊಂಡಿದೆ. ಜತೆಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಹೀಗಾಗಿ ನಮ್ಮಂತಹ ಬಡವರು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದೇವೆ. ಇಲ್ಲಿ ಖಾಸಗಿ ಶಾಲೆಗಳಿಗಿಂತಲೂ ಚೆನ್ನಾಗಿ ಓದುತ್ತಾರೆ ಎಂಬ ನಂಬಿಕೆ ನಮ್ಮದು. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದೆ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆಯುತ್ತಿಲ್ಲ.ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಮಕ್ಕಳ ಕನಸಿಗೆ ಶಿಕ್ಷಕರ ಕೊರತೆ ಅಡ್ಡಿಯಾಗುತ್ತಿದೆ. ಇದು ಪೋಷಕರನ್ನು ಚಿಂತೆಗೀಡುಮಾಡಿದೆ’ ಎಂದು ಪೋಷಕಿ ವರಲಕ್ಷ್ಮಮ್ಮ ಹೇಳುತ್ತಾರೆ.

ಶೀಘ್ರ ನಿಯೋಜನೆ

‘400 ವಿದ್ಯಾರ್ಥಿಗಳಿಗೆ ಒಬ್ಬರಂತೆ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು. ಆದರೆ, ರಾಜ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. ಕೊರತೆಯಿರುವ ಕಡೆ ಅತಿಥಿ ಶಿಕ್ಷಕರನ್ನು ನೇಮಿಸಿದ್ದೇವೆ. ಸರ್ಕಾರದ ಹಂತದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿಯೋಜಿಸಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಡಿಡಿಪಿಐ ಶ್ರೀಕಂಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.