ADVERTISEMENT

ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರವಾಸಿಗರ ಕಲರವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 4:50 IST
Last Updated 2 ಜನವರಿ 2026, 4:50 IST
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಪ್ರಯುಕ್ತ ಭೇಟಿ ನೀಡಿದ್ದ ಪ್ರವಾಸಿಗರು
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಪ್ರಯುಕ್ತ ಭೇಟಿ ನೀಡಿದ್ದ ಪ್ರವಾಸಿಗರು   

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಮಾಯಿಸಿದ್ದರು. ಗುರುವಾರ ಬನ್ನೇರುಘಟ್ಟ ಉದ್ಯಾನಕ್ಕೆ ಒಟ್ಟು 25 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಬನ್ನೇರುಘಟ್ಟ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಬನ್ನೇರುಘಟ್ಟ ಜೈವಿಕ ಉದ್ಯಾನವು ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವುದರಿಂದ ನಗರ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಹೊಸ ವರ್ಷದ ಮೊದಲ ದಿನ ಜಮಾಯಿಸಿದ್ದರು. ಉದ್ಯಾನದ ಮೂಲೆ ಮೂಲೆಗಳಲ್ಲಿಯೂ ಜನಸಾಗರವೇ ಹರಿದಿತ್ತು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಪ್ರಾಣಿಗಳ ಸಂಕಿರ್ಣದ ಬಳಿ ಫೋಟೋ ಕ್ಲಿಕ್ಕಿಸಿ ಪ್ರವಾಸಿಗರು ಸಂಭ್ರಮಿಸಿದರು. ಸಫಾರಿ ವಾಹನಗಳು ಮತ್ತು ಉದ್ಯಾನವನ್ನುನ ವೀಕ್ಷಿಸಲು ಬಳಸುವ ವಿದ್ಯುತ್‌ ಚಾಲಿನ ವಾಹನಗಳು ಪ್ರವಾಸಿಗರಿಂದ ತುಂಬಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಉದ್ಯಾನ ವೀಕ್ಷಿಸಲು ಆಗಮಿಸಿದ್ದರು.

ADVERTISEMENT

ಟಿಕೆಟ್‌ ಕೌಂಟರ್‌ ಬಳಿ ಟಿಕೆಟ್‌ ಪಡೆಯಲು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತಿದ್ದರು. ಗಂಟೆಗಟ್ಟಲೆ ಕಾದು ಟಿಕೆಟ್‌ ಪಡೆದು ಉದ್ಯಾನವನ್ನು ವೀಕ್ಷಿಸಿದರು. ಸಂಜೆ 3ಗಂಟೆಯಾದರೂ ಟಿಕೆಟ್‌ ಕೌಂಟರ್‌ನಲ್ಲಿ ಪ್ರವಾಸಿಗರ ಸಾಲು ಕಡಿಮೆಯಾಗಿರಲಿಲ್ಲ. ಸಾಮಾನ್ಯ ದಿನಗಳಲ್ಲಿ ವಾರಾಂತ್ಯದಲ್ಲಿ 12-13 ಸಾವಿರ ಮತ್ತು ವಾರದ ದಿನಗಳಲ್ಲಿ 5-6 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಗುರುವಾರ ಹೊಸ ವರ್ಷದ ಹಿನ್ನೆಲೆಯಲ್ಲಿ 25 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ದೇಗುಲಗಳಲ್ಲಿ ಭಕ್ತರ ದಂಡು ಹೊಸ ವರ್ಷದ ಪ್ರಯುಕ್ತ ದೇವಾಲಯಗಳಲ್ಲಿ ಭಕ್ತರ ದಂಡು ಹೆಚ್ಚಾಗಿತ್ತು. ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯ ಬನ್ನೇರುಘಟ್ಟ ಚಂಪಕಧಾಮ ಸ್ವಾಮಿ ದೇವಾಲಯ ಆನೇಕಲ್‌ನ ಕಂಬದ ಗಣಪತಿ ಚೌಡೇಶ್ವರಿ ದೇವಾಲಯದಲ್ಲಿ ಭಕ್ತರು ದಂಡು ಕಂಡು ಬಂತು. ಹೊಸ ವರ್ಷದ ಆಚರಣೆಯಲ್ಲಿ ಬೇಕರಿಗಳ ಮುಂದೆ ಕೇಕ್‌ ಸಿಹಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.