ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್‌ ನಿಯಮ: ರಾಮಲಿಂಗಾರೆಡ್ಡಿ ತರಾಟೆ

ಟ್ಯಾಕ್ಸಿ ಚಾಲಕರ ಜೊತೆ ಚರ್ಚೆ: ಓಲಾ, ಉಬರ್‌ ಟ್ಯಾಕ್ಸಿಗೆ ಅನುಕೂಲ ಇತರರಿಗೆ ಏಕಿಲ್ಲ: ರಾಮಲಿಂಗಾರೆಡ್ಡಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:20 IST
Last Updated 8 ಜನವರಿ 2026, 5:20 IST
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆಯಿಂದ ಉಂಟಾದ ಸಮಸ್ಯೆಗಳ ಕುರಿತು ಸ್ಥಳೀಯ ಟ್ಯಾಕ್ಸಿ ಚಾಲಕರೊಂದಿಗೆ ಚರ್ಚಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ ನೀಡಿ ಚರ್ಚಿಸಿದರು.
ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆಯಿಂದ ಉಂಟಾದ ಸಮಸ್ಯೆಗಳ ಕುರಿತು ಸ್ಥಳೀಯ ಟ್ಯಾಕ್ಸಿ ಚಾಲಕರೊಂದಿಗೆ ಚರ್ಚಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭೇಟಿ ನೀಡಿ ಚರ್ಚಿಸಿದರು.   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಾಕ್ಸಿ ನಿಲುಗಡೆಗೆ ರೂಪಿಸಿರುವ ಹೊಸ ಪಾರ್ಕಿಂಗ್‌ ನಿಯಮ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ವಿಮಾನ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿದ ಸಚಿವರು ಚಾಲಕರೊಂದಿಗೆ ಮಾತುಕತೆ ನಡೆಸಿದರು. ನೂತನ ವಾಹನ ನಿಲುಗಡೆ ವ್ಯವಸ್ಥೆಯಿಂದ ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಉಂಟಾಗಿರುವ ಸಮಸ್ಯೆ ಆಲಿಸಿದರು.

ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಓಲಾ, ಉಬರ್ ಸೇರಿದಂತೆ ಅಗ್ರಿಗೇಟರ್‌ ಟ್ಯಾಕ್ಸಿಗಳಿಗೆ ಟರ್ಮಿನಲ್‌ ಸಮೀಪದಲ್ಲೇ ನಿಲುಗಡೆಗೆ ಅವಕಾಶ ನೀಡಿ, ಸ್ಥಳೀಯ ಹಾಗೂ ಇತರ ಖಾಸಗಿ ಟ್ಯಾಕ್ಸಿಗಳಿಗೆ ಒಂದು ಕಿಲೋ ಮೀಟರ್‌ ದೂರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿರುವುದು ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ವಯಸ್ಸಾದವರು, ಸಣ್ಣ ಮಕ್ಕಳಿರುವ ಕುಟುಂಬಗಳು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುವ ಪ್ರಯಾಣಿಕರು ದೂರದ ಪಾರ್ಕಿಂಗ್‌ ಪ್ರದೇಶದಿಂದ ಲಗೇಜ್‌ ಹೊತ್ತು ಟ್ಯಾಕ್ಸಿ ಹುಡುಕಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೂತನ ಪಾರ್ಕಿಂಗ್ ವ್ಯವಸ್ಥೆ ಮೇಲ್ನೋಟಕ್ಕೆ ಖಾಸಗಿ ಅಗ್ರಿಗೇಟರ್‌ಗಳಿಗೆ ಪರೋಕ್ಷ ಸಹಕಾರ ನೀಡುವಂತೆ ಕಾಣುತ್ತಿದೆ ಎಂದು ಸಚಿವರು ಟೀಕಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಸ್ಥಳೀಯ ಚಾಲಕರು ಹಲವು ವರ್ಷಗಳಿಂದ ಕಡಿಮೆ ದರದಲ್ಲಿ ಸೇವೆ ನೀಡುತ್ತಿದ್ದಾರೆ. ಬಿಎಂಟಿಸಿ ಹವಾನಿಯಂತ್ರಿತ ಬಸ್‌ನಲ್ಲಿ ಬೆಂಗಳೂರಿಗೆ ₹300 ಟಿಕೆಟ್‌ ದರ ನಿಗದಿ ಪಡಿಸಲಾಗಿದೆ. ಆದರೆ ಹೊಸ ಪಾರ್ಕಿಂಗ್ ವ್ಯವಸ್ಥೆಯಿಂದ ಟ್ಯಾಕ್ಸಿ ಚಾಲಕರಿಗೂ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಈ ಸಮಸ್ಯೆಗೆ ವಿಮಾನ ನಿಲ್ದಾಣ ಪ್ರಾಧಿಕಾರವೇ ಸೂಕ್ತ ಪರಿಹಾರ ನೀಡಬೇಕು. ಈ ಕುರಿತು ಸಂಸದ ಡಾ. ಕೆ. ಸುಧಾಕರ್‌ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಾಗಿದೆ. ಕೇಂದ್ರ ವಿಮಾನಯಾನ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಎಂಟಿಸಿ ವಾಯು ವಜ್ರಕ್ಕೂ ಕುತ್ತು

ಬಿಎಂಟಿಸಿ ಬಸ್‌ ನಿಲುಗಡೆ ವ್ಯವಸ್ಥೆಯಲ್ಲೂ ಕಡಿತ ಮಾಡಿರುವುದನ್ನು ಉಲ್ಲೇಖಿಸಿದ ಸಚಿವ ರಾಮಲಿಂಗ ರೆಡ್ಡಿ ಈ ಹಿಂದೆ 14 ಬಸ್‌ ಬೇಗಳನ್ನು ನೀಡಲಾಗಿದೆ. ಇದೀಗ ಅದನ್ನು 7ಕ್ಕೆ ಇಳಿಸಲಾಗಿದೆ. ಇದರಿಂದ ದೂರದ ಟ್ಯಾಕ್ಸಿ ನಿಲುಗಡೆಗೆ ತೆರಳಲು ಸಾಧ್ಯವಾಗದ ಪ್ರಯಾಣಿಕರು ದುಬಾರಿ ಅಗ್ರಿಗೇಟರ್‌ ಟ್ಯಾಕ್ಸಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಈ ಅಸಮಾನತೆಯನ್ನು ನಿವಾರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಸಂಬಂಧಿಸಿದ ಪ್ರಾಧಿಕಾರಗಳೊಂದಿಗೆ ಪತ್ರವ್ಯವಹಾರ ನಡೆಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗ ರೆಡ್ಡಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.