
ದೇವನಹಳ್ಳಿ: ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರಿಂದ ಬುಧವಾರ ಒಟ್ಟು ₹6.51 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ಜಪ್ತಿ ನಡೆದಿದೆ. ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ಪ್ರಕರಣದಲ್ಲಿ ಪ್ರಯಾಣಿಕನ ಚೆಕ್-ಇನ್ ಲಗೇಜ್ ಪರಿಶೀಲಿಸಿದಾಗ 5.55 ಕೆ.ಜಿ ತೂಕದ ಹೈಡ್ರೋಫೋನಿಕ್ ಗಾಂಜಾವನ್ನು ಮುಚ್ಚಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಿರುವುದು ಪತ್ತೆಯಾಯಿತು. ಇದರ ಮೌಲ್ಯ ₹1.94 ಕೋಟಿ ಎಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಲಗೇಜ್ ಬ್ಯಾಗ್‌ನೊಳಗೆ ಪದರ ಪದರವಾಗಿ ಅಂಟಿಸಿ ಸುಲಭವಾಗಿ ಗುರುತಿಸಲು ಆಗದಂತೆ 13.06 ಕೆ.ಜಿ ತೂಕದ ಗಾಂಜಾವನ್ನು ಅಡಗಿಸಲಾಗಿತ್ತು. ಪರಿಶೀಲನೆ ವೇಳೆ ₹4.57 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿಯಾಗಿದೆ.
ಇಬ್ಬರ ಮೇಲೂ ಮಾದಕ ವಸ್ತುಗಳ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಧಿಕಾರಿಗಳು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.