ADVERTISEMENT

ನೆಲಮಂಗಲ | ರ್‍ಯಾಗಿಂಗ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದ ಅರುಣ್‌, ಪೊಲೀಸ್ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 21:03 IST
Last Updated 21 ಜುಲೈ 2025, 21:03 IST
ಸಿ.ಅರುಣ್
ಸಿ.ಅರುಣ್   

ನೆಲಮಂಗಲ: ಎಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ರ್‍ಯಾಗಿಂಗ್‌ನಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕು ನಂದರಾಮಯ್ಯನ ಪಾಳ್ಯದ ನಿವಾಸಿಗಳಾದ ಚನ್ನಕೇಶವ– ತುಳಸಿ ದಂಪತಿ ಪುತ್ರ ಸಿ.ಅರುಣ್(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಅರುಣ್‌ ಅವರು ವಾಸ್ತುಶಿಲ್ಪ ವಿಭಾಗದಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದರು.

ಹಾಸನದ ಚನ್ನಕೇಶವ ಹಾಗೂ ತುಳಸಿ ದಂಪತಿ, ಮಗನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ನಂದರಾಮಯ್ಯನ ಪಾಳ್ಯಕ್ಕೆ ಬಂದು ನೆಲೆಸಿದ್ದರು. ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ADVERTISEMENT

ಶಾಲಾ– ಕಾಲೇಜಿನಲ್ಲೂ ಅತ್ಯುತ್ತಮ ಅಂಕ ಗಳಿಸಿ
ಪ್ರತಿಭಾನ್ವಿತರಾಗಿದ್ದ ಅರುಣ್‌ ಅವರಿಗೆ ಬಾಗಲೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಪ್ರವೇಶ ದೊರಕಿತ್ತು. ಜುಲೈ 11ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವಿಡಿಯೊ ಮಾಡಿ, ಸ್ನೇಹಿತರಿಗೆ ಕಳುಹಿಸಿದ್ದರು. ವಿಡಿಯೊವನ್ನು ಸ್ನೇಹಿತರು ಸೋಮವಾರ ಅರುಣ್ ಪೋಷಕರಿಗೆ ಕಳುಹಿಸಿದ್ದರು. ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಡಿಯೊದಲ್ಲಿ ಸ್ನೇಹಿತರ ಕಿರುಕುಳ, ಕೆಟ್ಟದಾಗಿ ಮಾತನಾಡಿ
ಕೊಳ್ಳುವ ಹಾಗೂ ರ್‍ಯಾಗಿಂಗ್‌ ಕುರಿತು ಹೇಳಿಕೊಂಡಿದ್ದಾರೆ. ವಿಡಿಯೊ ಕಾಲೇಜು ಸ್ನೇಹಿತರ ವಾಟ್ಸ್ಆ್ಯಪ್ ಗುಂಪಿನಲ್ಲಿ ಹರಿದಾಡುತ್ತಿದೆ’ ಎಂದು ಪೊಲೀಸರು ಹೇಳಿದರು.

ಅರುಣ್‌ ಅವರು ಐದೇ ನಿಮಿಷದಲ್ಲಿ ಭಾವಚಿತ್ರ, ವಿಭಿನ್ನ ಪಾರಂಪರಿಕ ಚಿತ್ರಗಳನ್ನು ಬಿಡಿಸುತ್ತಿದ್ದರು. ಸಿನಿಮಾ ತಾರೆಯರ ಭಾವಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದರು.

‘ಮಾದನಾಯಕನಹಳ್ಳಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ರ್‍ಯಾಗಿಂಗ್‌ ಮಾಡಿದವರ ವಿಚಾರಣೆ ನಡೆಸ ಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.