ADVERTISEMENT

ಎಸ್ .ಎಂ.ಕೃಷ್ಣ ಅವರು ಉಪಚುನಾವಣೆಗೆ ಬಂದಿರುವುದು ಆನೆ ಬಲಬಂದಂತಾಗಿದೆ: ಯಡಿಯೂರಪ್ಪ

ಸೋತ ಬಚ್ಚೇಗೌಡಗೆ ಸಂಸದ ಸ್ಥಾನ– ಶೋಭಾ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 16:45 IST
Last Updated 27 ನವೆಂಬರ್ 2019, 16:45 IST
ಹೊಸಕೋಟೆಯಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಸ್. ಎಮ್.ಕೃಷ್ಣ, ಸಚಿವ ಅಶೋಕ್ ಹಾಗೂ ಇತರರು ಭಾಗವಹಿಸಿದ್ದರು.
ಹೊಸಕೋಟೆಯಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಸ್. ಎಮ್.ಕೃಷ್ಣ, ಸಚಿವ ಅಶೋಕ್ ಹಾಗೂ ಇತರರು ಭಾಗವಹಿಸಿದ್ದರು.   

ಹೊಸಕೋಟೆ: ಉಪಚುನಾವಣೆಗೆ ಎಸ್.ಎಂ. ಕೃಷ್ಣ ಬಂದಿರುವುದು ಆನೆಯಬಲ ಬಂದಂತಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ರಾಜ್ಯದ ಉಪಚುನಾವಣೆಯಲ್ಲಿ ಎಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಅಭಿವೃದ್ಧಿಯ ಮಾತನಾಡುತ್ತಿಲ್ಲ. ಬದಲಾಗಿ ಸಾರ್ವತ್ರಿಕ ಚುನಾವಣೆಯ ಮಾತನಾಡುತ್ತಿದ್ದಾರೆ. ಇದು ಎಂಟಿಬಿ ಚುನಾವಣೆಯಲ್ಲ; ಬದಲಾಗಿ ಕಾರ್ಯಕರ್ತರ ಚುನಾವಣೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಎಲ್ಲರ ವಿಕಾಸಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ತಾಲ್ಲೂಕಿಗೆ ಮೆಟ್ರೊ, ಕಾವೇರಿ ನೀರು, ಕುಂಬಳಹಳ್ಳಿಯ ಬಳಿ ಅಂಬೇಡ್ಕರ್ ಆವಾಸ್ ಯೋಜನೆಗಾಗಿ ಜಾಗ, ಕೊರಳೂರು ರೈಲ್ವೆ ಮೇಲ್ಸೇತುವೆ ಹೀಗೆ ಹಲವಾರು ಕೆಲಸಗಳನ್ನು ಮಾಡಬೇಕಿದ್ದು ಅದಕ್ಕಾಗಿ ಎಂಟಿಬಿ ನಾಗರಾಜ್ ಅವರನ್ನು ಬೆಂಬಲಿಸಿ ಎಂದರು. ತಾಲ್ಲೂಕಿನಲ್ಲಿ ಗೂಂಡಾಗಿರಿ ನಡೆಯಲು ಬಿಡುವುದಿಲ್ಲ ಎಂದು ಖಾಜಿಹೊಸಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದರು.

ADVERTISEMENT

ಸೋತ ಬಚ್ಚೇಗೌಡರಿಗೆ ಸಂಸದ ಸ್ಥಾನ

ಶರತ್ ಬಚ್ಚೇಗೌಡರಿಗೆ ಪಕ್ಷ ಯಾವುದೇ ಮೋಸ ಮಾಡಿಲ್ಲ. ಸೋತು ಮನೆಯಲ್ಲಿದ್ದ ಅವರ ತಂದೆ ಬಚ್ಚೇಗೌಡರನ್ನು ಕರೆದು ಶಾಸಕರನ್ನಾಗಿ ಮಾಡಿದೆವು. ಅನಂತರ ಸೋತವರನ್ನು ಸಂಸದರನ್ನಾಗಿ ಮಾಡಿದ್ದೇವೆ. ಇದಕ್ಕೆಲ್ಲ ಕಾರಣರಾದ ಯಡಿಯೂರಪ್ಪನವರು ತಮ್ಮ ಕ್ಷೇತ್ರಕ್ಕೆ ಬಂದಾಗ ತಾವು ವೇದಿಕೆಗೆ ಬರಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಬಚ್ಚೇಗೌಡರನ್ನು ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ತಾಲ್ಲೂಕಿಗೆ ಶಾಂತಿ, ನೆಮ್ಮದಿ, ಅಭಿವೃದ್ಧಿ ಬೇಕೆಂದರೆ ಎಂಟಿಬಿಯವರಿಗೆ ಮತ ಹಾಕಿ. ಯಡಿಯೂರಪ್ಪನವರ ರಾಜ್ಯ ಸರ್ಕಾರವನ್ನು ಬೆಂಬಲಿಸಿ ಎಂದು ಹೇಳಿದರು.

ಬಹಳ ಜನ ಎಂಟಿಬಿ ನಾಗರಾಜ್ ಅವರಿಂದ ವಿವಿಧ ಸಹಾಯ ಪಡೆದು ಈಗ ಬೇರೆ ಕಡೆಯಿರುವವರು ಬರುವ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯ ಮಾಡಬೇಕೆಂದರು.

‘ಅಪವಿತ್ರ ಮೈತ್ರಿ ಮಾಡಿಕೊಂಡು 14 ತಿಂಗಳು ಸರ್ಕಾರ ಮಾಡಿದ್ದೇ ಮೈತ್ರಿ ಸರ್ಕಾರದ ಸಾಧನೆ’ ಎಂದು ಮುಖಂಡ ಎಸ್.ಎಂ ಕೃಷ್ಣ ಆರೋಪಿಸಿದರು. ‘ಅಪವಿತ್ರ ಮೈತ್ರಿಯಿಂದ ರಚನೆಯಾದ ಸರ್ಕಾರ ಯಾವುದೇ ದಿಕ್ಕು, ಗುರಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಅಧಿಕಾರ ನಡೆಸಿತು. ನನಗೂ ಹೊಸಕೋಟೆಗೂ ಬಚ್ಚೇಗೌಡರ ತಂದೆಯ ಕಾಲದಿಂದಲೂ ಸಂಬಂಧವಿದೆ. ಆದರೆ ಈಗ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಎಂಟಿಬಿ ನಾಗರಾಜ್ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಜನತೆ ಮತ ಕೊಟ್ಟು ಬೆಂಬಲಿಸಬೇಕು ಎಂದರು.

ಎಂಟಿಬಿ ನಾಗರಾಜ್ ಮಾತನಾಡಿ, ‘ನನಗೆ 2004ರಲ್ಲಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ಟಿಕೆಟ್ ಕೊಟ್ಟರು. ನಮ್ಮ ಮನೆಯಲ್ಲಿ ಬೇಡವೆಂದರೂ ನಾನು ಇಲ್ಲಿ ಬಂದು ಚುನಾವಣೆಗೆ ನಿಂತೆ ಆಗಿನಿಂದಲೂ ಕ್ಷೇತ್ರದ ಅಭಿವೃದ್ದಿಗೆ ಕೆಲಸ ಮಾಡುತ್ತಿದ್ದೇನೆ’ ಎಂದರು.

ಕಾಂಗ್ರೆಸ್ ಗೆ ಜೈ ಎಂದ ಎಂಟಿಬಿ

ಮಾತಿನ ಕೊನೆಯಲ್ಲಿ ಎಂಟಿಬಿ ನಾಗರಾಜ್ ಜೈ ಹಿಂದ್– ಜೈ ಕಾಂಗ್ರೆಸ್ ಎಂದು ಹೇಳಿ ವೇದಿಕೆಯ ಮೇಲಿದ್ದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. 40 ವರ್ಷ ಅದೇ ಪಕ್ಷದಲ್ಲಿ ಇದ್ದೆ. ಅದಕ್ಕಾಗಿ ಹಾಗೆ ಹೇಳಿದೆ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಯಲಹಂಕ ಶಾಸಕ ವಿಶ್ವನಾಥ್, ಸಂಸದ ಮುನಿಸ್ವಾಮಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬೆಂಗಳೂರು ಗ್ರಾಮಂತರ ಜಿಲ್ಲಾಬಿಜೆಪಿ ಅಧ್ಯಕ್ಷ ರಾಜಣ್ಣ, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.