ಆನೇಕಲ್: ‘ನಮ್ಮ ಕೆಲ ರಾಜಕೀಯ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಸಾಕ್ಷ್ಯ ಕೇಳುತ್ತಾರೆ. ಯುದ್ಧ ಮಾಡಿದಾಗ, ಬಾಂಬ್ ಹಾಕಿದಾಗ ಮತ್ತು ಶತ್ರು ದೇಶದ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದಾಗ ಸಾಕ್ಷ್ಯ ಕೇಳುತ್ತಾರೆ. ಯುದ್ಧ ಮಾಡುವ ಜತೆಗೆ ಛಾಯಾಚಿತ್ರ ತೆಗೆದು ಇಂತಹ ನಾಯಕರಿಗೆ ಕೊಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸರ್ಜಾಪುರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದಿಂದ ಶನಿವಾರ ಆಯೋಜಿಸಿದ್ದ ‘ಕಾರ್ಗಿಲ್‌ನಿಂದ ಸಿಂಧೂರವರೆಗಿನ ವೀರ ಕಥನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೇಶದ ಭದ್ರತೆ ವಿಷಯದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಭಾರತೀಯ ಸೇನೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸೇನೆ. ಸೈನಿಕರ ಸೇವೆ, ತ್ಯಾಗ ಸ್ಮರಿಸಬೇಕು. ರಾಜಕೀಯ ವ್ಯಕ್ತಿಗಳು ಬದಲಾಗಬೇಕು. ಆದರೆ, ಸೈನಿಕರ ಕೆಚ್ಚೆದೆ ಮತ್ತು ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಅಚಲ ವಿಶ್ವಾಸ ಎಂದಿಗೂ ಬದಲಾಗುವುದಿಲ್ಲ’ ಎಂದು ಹೇಳಿದರು.
‘ಆಪರೇಷನ್ ಕಾರ್ಗಿಲ್ ವಿಜಯ ಯಶಸ್ಸಿಗೆ 74 ದಿನ ಬೇಕಾದವು. ‘ಆಪರೇಷನ್ ಸಿಂಧೂರ್’ದಲ್ಲಿ ನಾಲ್ಕು ದಿನಗಳಲ್ಲಿಯೇ ಯಶಸ್ಸು ದೊರೆಯಿತು. ನಮ್ಮಲ್ಲಿನ ಯುದ್ಧ ತಂತ್ರ, ಕೌಶಲ ಬದಲಾಗಿದೆ. ಆದರೆ, ಪಾಕಿಸ್ತಾನ ಬುದ್ಧಿ ಮಾತ್ರ ಬದಲಾಗುತ್ತಿಲ್ಲ. ಕಾರ್ಗಿಲ್, ಆಪರೇಷನ್ ಸಿಂಧೂರ್‌ದಲ್ಲಿ ನಮ್ಮ ಗೆಲುವಿಗೆ ವೀರ ನಾರಿಯರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಗಡಿಯೊಳಗಿನ ನಾವೆಲ್ಲರೂ ಸೈನಿಕರಿಗೆ ಕೃತಜ್ಞರಾಗಿರಬೇಕು’ ಎಂದು ತಿಳಿಸಿದರು.
ಸಿನಿಮಾ ನಟ ನಟಿಯರ ಮತ್ತು ಚಿತ್ರಗಳ ಬಗ್ಗೆ ನಮ್ಮ ಯುವ ಸಮೂಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಾರೆ. ಆದರೆ ಸೈನಿಕರಿಗೆ ಎಲ್ಲಿಯೂ ಸ್ಥಾನ ನೀಡುತ್ತಿಲ್ಲಬಿ.ಎಲ್.ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.