
ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಪ್ರತಿ ವರ್ಷವು ನಡೆಯುತ್ತಿರುವ ದನಗಳ ಜಾತ್ರೆಗೆ ಜೋಡಿ ಹೋರಿಗಳೊಂದಿಗೆ ರೈತರು ಆಗಮಿಸುತ್ತಿದ್ದು, ಶುಕ್ರವಾರದಿಂದ ತುಂಬು ಜಾತ್ರೆ ಸೇರುವ ನಿರೀಕ್ಷೆ ಇದೆ.
ಬ್ರಹ್ಮರಥೋತ್ಸವಕ್ಕೂ ಮುನ್ನ ನಡೆಯುವ ಐತಿಹಾಸಿಕ ದನಗಳ ಜಾತ್ರೆಯು ಡಿ.18 ರವರೆಗೂ ನಡೆಯಲಿದೆ. ಕೃಷಿ ಕೆಲಸಕ್ಕೆ ಅಗತ್ಯ ಇರುವ ಎತ್ತುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ರಾಜ್ಯ ಹಾಗೂ ಹೊರ ರಾಜ್ಯದಿಂದಲೂ ನೂರಾರು ಜನ ರೈತರು ಜಾತ್ರೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ ಬೆಳೆಯಾಗಿರುವ ಹಿನ್ನೆಲೆಯಲ್ಲಿ ಎತ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯುವ ವಿಶ್ವಾಸದಲ್ಲಿ ರೈತರು ಇದ್ದಾರೆ.
ಘಾಟಿ ಕ್ಷೇತ್ರದಲ್ಲಿ ರಾಸುಗಳ ಜಾತ್ರೆ ಸಮಯದಲ್ಲಿ ವಿಶೇಷ ದೀಪಾಲಂಕಾರ, ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ,ರಾಸುಗಳಿಗೆ ರೋಗಗಳು ಹರಡದಂತೆ ಪಶು ವೈದ್ಯರ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ತಿಂಡಿ ಮತ್ತು ಊಟ ನೀಡುವುದನ್ನು ಬುಧವಾರದಿಂದ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ವತಿಯಿಂದ ಆರಂಭಿಸಲಾಗಿದೆ. ಜಾತ್ರೆ ಮುಗಿಯುವವರೆಗೂ ಅನ್ನದಾಸೋಹ ಪ್ರತಿ ದಿನವು ಮುಂದುವರೆಯಲಿದೆ ಎಂದು ಘಾಟಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್ ತಿಳಿಸಿದ್ದಾರೆ.
‘ಪ್ರತಿ ವರ್ಷವು ಹತ್ತಾರು ಜೋಡಿ ಎತ್ತುಗಳೊಂದಿಗೆ ಜಾತ್ರೆಗೆ ಬಂದು ಮಾರಾಟ ಮಾಡಿಕೊಂಡುವ ಹೋಗುವ ಪದ್ಧತಿಯನ್ನು ನಮ್ಮ ಹಿರಿಯರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಅದೇ ಪದ್ಧತಿಯನ್ನು ನಾವು ಸಹ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ 10 ಜೋಡಿ ಹಳ್ಳಿಕಾರ್ ತಳಿಯ ಹೋರಿಗಳೊಂದಿಗೆ ಜಾತ್ರೆಗೆ ಬರಲಾಗಿದೆ’ ಎಂದು ತಾಲ್ಲೂಕಿನ ಆಲಹಳ್ಳಿ ಗ್ರಾಮದ ಯುವ ರೈತ ಯಶವಂತ್ ತಿಳಿಸಿದರು.
₹4.30 ಲಕ್ಷ ದಿಂದ ₹90 ಸಾವಿರದವರೆಗೂ ಒಂದು ಜೋಡಿ ಹೋರಿಗಳ ಬೆಲೆ ಇದೆ. ಜಾತ್ರೆಗಾಗಿಯೇ ಒಂದು ತಿಂಗಳಿಂದಲೂ ಪ್ರತಿ ದಿನವು ಹೋರಿಗಳ ಮೈ ತೊಳೆದು, ಉತ್ತಮ ಆಹಾರ ನೀಡಿ, ಕಾಲುಗಲ್ಲಿನ ಗೊರಸುಗಳನ್ನು ಸ್ವಚ್ಛಗೊಳಿಸಿ ಲಾಳ ಕಟ್ಟಿಸಲಾಗಿದೆ. ಇದರಿಂದ ಡಾಂಬರು ರಸ್ತೆಯಲ್ಲಿ ಹೋರಿಗಳು ನಡೆದರು ಸಹ ಕಾಲುಗಳು ಸವೆಯುವುದಿಲ್ಲ. ಹಾಗೆಯೇ ಕೊಂಬುಗಳನ್ನು (ಕೋಡು) ಜೀಬಿ ಅಂದಗೊಳಿಸಲಾಗಿದೆ. ಹೋರಿಗಳು ಆಕರ್ಷಕವಾಗಿ ಕಾಣಲು ನೀಳಾಕಾರದ ಕೊಂಬುಗಳು ಮುಖ್ಯ. ಹಾಗಾಗಿಯೇ ಜಾತ್ರೆಯಲ್ಲಿ ಕೊಂಬುಗಳಿಗೆ ಬಣ್ಣ ಬಣ್ಣದ ಟೇಪು,ಹೂವುಗಳನ್ನು ಕಟ್ಟಿ ಶೃಂಗಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೃಹತ್ ಪೆಂಡಾಲ್‌ಗಳು
ಘಾಟಿ ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಳ್ಳಿಕಾರ್ ಅಮೃತ್ ಮಹಲ್ ತಳಿಯ ಹೋರಿಗಳು ಮಲಗಲು ಮೆತ್ತನೆಯ ಹುಲ್ಲಿನ ಹಾಸಿಗೆ ಬಿಸಿಲು ಬೀಳದಂತೆ ಎತ್ತುಗಳನ್ನು ಕಟ್ಟಲು ಸಾವಿರಾರು ರೂಪಾಯಿ ಖರ್ಚು ಮಾಡಿ ಬೃಹತ್ ಪೆಂಡಾಲ್‌ಗಳನ್ನು ರೈತರು ಹಾಕಿಸಿದ್ದಾರೆ. ಘಾಟಿ ಜಾತ್ರೆಯಲ್ಲಿ ಒಂದಕ್ಕಿಂತಲು ಒಂದು ಪೆಂಡಾಲ್‌ಗಳು ಎತ್ತುಗಳೊಂದಿಗೆ ಕುಟುಂಬದವರು ನಿಂತುಕೊಂಡಿರುವ ಬೃಹತ್ ಬ್ಯಾನರ್‌ಗಳು ರಾರಾಜಿಸುತ್ತಿವೆ. ಸುರಕ್ಷತೆ ಪರಿಶೀಲಿಸಿದ ಪೊಲೀಸರು ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳು ಬರುವುದರಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಅವರು ಬುಧವಾರ ಜಾತ್ರೆಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ಇದ್ದರು.
25ಕ್ಕೆ ರಥೋತ್ಸವ
ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಡಿ.25 ರಂದು ಜರುಗಲಿದೆ. ಈ ಬಾರಿ ವಿಶೇಷವಾಗಿ ಪುಷ್ಪಲಂಕಾರ ದೀಪ ಅಲಂಕಾರಗಳು ಇರಲಿವೆ. ಭಕ್ತಾದಿಗಳ ಅನುಕೂಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ದೇವರ ದರ್ಶನಕ್ಕೆ ಸಾಲಿನಲ್ಲಿ ಸಾಗುವ ವ್ಯವಸ್ಥೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲು ದೇವಾಲಯದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.