ADVERTISEMENT

ದಾರಿ ಕಾಣದಾಗಿದೆ ಪರಮಾತ್ಮ

ಚಂದಾ‍ಪುರ ಮುಖ್ಯರಸ್ತೆ ಬದಿಯಲ್ಲೇ ವ್ಯಾಪಾರ, ಪಾದಚಾರಿ ಮಾರ್ಗ ಅಧ್ವಾನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:01 IST
Last Updated 29 ಡಿಸೆಂಬರ್ 2025, 5:01 IST
ಆನೇಕಲ್‌ ತಾಲ್ಲೂಕಿನ ಚಂದಾಪುರ ಮುಖ್ಯ ರಸ್ತೆಯ ಬದಿ ಮಳಿಗೆ ಮತ್ತು ಪಾದಚಾರಿ ಮಾರ್ಗದ ದುಸ್ಥಿತಿ
ಆನೇಕಲ್‌ ತಾಲ್ಲೂಕಿನ ಚಂದಾಪುರ ಮುಖ್ಯ ರಸ್ತೆಯ ಬದಿ ಮಳಿಗೆ ಮತ್ತು ಪಾದಚಾರಿ ಮಾರ್ಗದ ದುಸ್ಥಿತಿ   

ಆನೇಕಲ್: ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ತಾಲ್ಲೂಕಿನ ಹೃದಯಭಾಗ ಚಂದಾಪುರದ ಮುಖ್ಯರಸ್ತೆಗಳ ಬದಿಯಲ್ಲೇ ಮಳಿಗೆ ಹಾಕಿಕೊಂಡು ವ್ಯಾಪಾರ ಮಾಡಲಾಗುತ್ತಿದ್ದು ವಾಹನ ಸವಾರರು ಸಂಚರಿಸಲು ಪರದಾಡಬೇಕಿದೆ. ವಾಹನ ದಟ್ಟಣೆಯಲ್ಲಿ ಸಿಲುಕಿ ಸುಸ್ತಾಗುತ್ತಿದ್ದಾರೆ. ಇತ್ತ ಪಾದಚಾರಿ ಮಾರ್ಗವು ಅಧ್ವಾನಗೊಂಡಿರುವುದರಿಂದ ಪಾದಚಾರಿಗಳಿಗೆ ದಿಕ್ಕು ತೋಚಾದಂತಾಗಿದೆ.

ಚಂದಾಪುರ ಆನೇಕಲ್‌ ತಾಲ್ಲೂಕಿನ ಪ್ರಮುಖ ಪುರಸಭೆಯಾಗಿದ್ದು, ಬೆಂಗಳೂರು, ದೊಮ್ಮಸಂದ್ರ, ವರ್ತೂರು ಸೇರಿದಂತೆ ಆನೇಕಲ್‌ ತಾಲ್ಲೂಕಿನಿಂದ ಯಾವುದೇ ಸ್ಥಳಕ್ಕೆ ಹೋಗಬೇಕಾದರೂ ಚಂದಾಪುರದ ಮೂಲಕವೇ ಸಾಗಬೇಕು. ಆದರೆ ಚಂದಾಪುರದಲ್ಲಿ ಮುಖ್ಯರಸ್ತೆಗಳಲ್ಲಿಯೇ ವ್ಯಾಪಾರಿ ವಹಿವಾಟು ನಡೆಯುತ್ತದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಪಾದಚಾರಿ ಮಾರ್ಗ ಹದಗೆಟ್ಟು ಒಂದೂವರೆ ವರ್ಷ ಕಳೆದರೂ ಇದುವರಗೆ ದುರಸ್ತಿಗೊಳಿಸಿಲ್ಲ. ಯೋಗ್ಯವಿಲ್ಲದೆ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ನಡೆಯಬೇಕಿದೆ.

ಮುಖ್ಯರಸ್ತೆ ಬದಿಯೇ 50ಕ್ಕೂ ಹೆಚ್ಚು ಹೂವಿನ ಅಂಗಡಿ, ಹಣ್ಣಿನ ಅಂಗಡಿ, ಗೋಬಿ ಸೇರಿದಂತೆ ಹಲವು ಅಂಗಡಿಗಳಿವೆ. ಇದರಿಂದ ವಸ್ತು ಖರೀದಿ, ಫಾಸ್ಟ್‌ಫುಡ್‌ ತಿನ್ನಲು ಬರುವವರು ರಸ್ತೆಗಳಲ್ಲಿಯೇ ವಾಹನ ನಿಲ್ಲಿಸುತ್ತಾರೆ. ಇದರಿಂದ ರಸ್ತೆ ಕಿರಿದಾಗುತ್ತದೆ. ಐದಾರು ವಾಹನ ಓಡಾಡುವ ಜಾಗದಲ್ಲಿ ಒಂದೆರೆಡು ವಾಹನ ಓಡಾಡುವಂತಾಗುತ್ತದೆ. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ನಿಧನವಾಗಿ ಚಲಿಸಬೇಕಿದೆ. ಐದು ನಿಮಿಷ ಹಿಡಿಯುವ ಸಂಚಾರ 20–30 ನಿಮಿಷ ಹಿಡಿಯುತ್ತದೆ.

ADVERTISEMENT

ಇದು ಒಂದೆರೆಡು ದಿನದ ಸಮಸ್ಯೆಯಲ್ಲ ಹಲವು ವರ್ಷಗಳ ಸಮಸ್ಯೆ. ಈಗ ವಾಹನ ಸಂಖ್ಯೆಯೊಂದಿಗೆ ಅಂಗಡಿಗಳು ಏರಿಕೆಯಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.

ಚಂದಾಪುರದ ಪಾದಚಾರಿ ಮಾರ್ಗದ ದುಸ್ಥಿತಿ
ಚಂದಾಪುರ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ಇಲ್ಲದಂತಿದೆ. ಇಲ್ಲಿ ಯಾರು ಓಡಾಡುವುದಿಲ್ಲ. ಚಂದಾಪುರ ಪ್ರಮುಖ ವೃತ್ತದ ಮುಖ್ಯ ರಸ್ತೆಯಲ್ಲಿಯೇ ಪಾದಚಾರಿ ರಸ್ತೆಯು ಸೂಕ್ತ ನಿರ್ವಹಣೆಯಿಲ್ಲದೇ ಗಬ್ಬುನಾರುತ್ತಿದೆ. ಸುಸಜ್ಜಿತ ಪಾದಚಾರಿ ರಸ್ತೆಯನ್ನು ಕಲ್ಪಿಸಬೇಕು ಕೀರ್ತಿಕುಮಾರ್ ಸ್ಥಳೀಯ ನಿವಾಸಿ
ಕೀರ್ತಿಕುಮಾರ್, ಸ್ಥಳೀಯ ನಿವಾಸಿ
ಚಂದಾಪುರ ಮುಖ್ಯ ರಸ್ತೆಯಲ್ಲಿನ ಬೀದಿ ಬದಿಯ ಅಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬೀದಿ ಬದಿಯ ಅಂಗಡಿಗಳಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ಅವರಿಗೆ ನಿಗದಿತ ಜಾಗ ಕಲ್ಪಿಸಬೇಕು.
ಸುದರ್ಶನ್‌ ರೆಡ್ಡಿ, ಚಂದಾಪುರ ನಿವಾಸಿ
ಚಂದಾಪುರ ಪುರಸಭೆಯು ಪಾದಚಾರಿ ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಅದರ ನಿರ್ವಹಣೆಯನ್ನೂ ಮಾಡಲಾಗುವುದು.
ಮಂಜುನಾಥ್‌, ಮುಖ್ಯಾಧಿಕಾರಿ ಚಂದಾಪುರ ಪುರಸಭೆ

ಬೀದಿಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಚಂದಾಪುರ- ಆನೇಕಲ್‌ ಮುಖ್ಯ ರಸ್ತೆಯ ಸೂರ್ಯಸಿಟಿ ಮುಖ್ಯ ರಸ್ತೆವರೆಗೂ ರಸ್ತೆ ಬದಿಯ ಅಂಗಡಿಗಳಿವೆ. ಇಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ಪರ್ಯಾಯ ಸ್ಥಳ ಕಲ್ಪಿಸಬೇಕು. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಬೇಕು. ಅಲ್ಲಿಯವರೆಗೆ ತಾತ್ಕಲಿಕವಾಗಿ ಒಂದು ಬಯಲು ಪ್ರದೇಶದಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಜನ ಸೇರುವ ಪ್ರದೇಶ ಗುರುತಿಸಿಬೇಕು. ಇದರಿಂದ ರಸ್ತೆಗಳ ಬದಿ ಖಾಲಿಯಾಗುತ್ತದೆ. ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಪ್ರಜ್ಞಾವಂತರು ಸಲಹೆ ನೀಡಿದ್ದಾರೆ. ಏಕಾಏಕಿ ತೆರವು ಬೇಡ ಬೀದಿಬದಿ ವ್ಯಾಪಾರಿಗಳು ತಮ್ಮ ಹೊಟ್ಟೆಪಡಿಗೆ ವ್ಯಾಪಾರವನ್ನೇ ನಂಬಿಕೊಂಡಿದ್ದಾರೆ. ಅವರಿಗೆ ಚಂದಾಪುರ ಪುರಸಭೆಯು ಅವರಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡಬೇಕು. ಸರ್ಕಾರಿ ಜಾಗಗಳಲ್ಲಿ ಅವರಿಗೆ ಅಂಗಡಿ ತೆರಯಲು ಅನುಕೂಲ ಮಾಡಿಕೊಡಬೇಕು. ಏಕಾಏಕಿಯಾಗಿ ಮಳಿಗೆ ತೆರವುಗೊಳಿಸಿದರೆ ತೊಂದರೆಯಾಗುತ್ತದೆ ಎನ್ನುತ್ತಾರೆ ಎಂದು ಸಿಪಿಐಎಂ ಪಕ್ಷದ ಮಹದೇಶ್‌. ಫುಡ್‌ಸ್ಟ್ರೀಟ್‌ ಆರಂಭಕ್ಕೆ ಚಿಂತನೆ ಚಂದಾಪುರ ಪುರಸಭೆಯ ವ್ಯಾಪ್ತಿಯ ಬೀದಿಬದಿ ವ್ಯಾಪಾರಕ್ಕೆ ನಿಗದಿತ ಜಾಗ ಗುರುತಿಸಲಾಗುವುದು. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಆಹಾರ ಸಂಬಂಧಿತ ಅಂಗಡಿಗಳಿಗಾಗಿಯೇ ಪ್ರತ್ಯೇಕ ಫುಡ್‌ಸ್ಟ್ರೀಟ್‌ ಆರಂಭಿಸಲು ಚಿಂತನೆ ನಡೆಸಲಾಗುವುದು. ಇದರಿಂದ ಬಹುತೇಕ ಅಂಗಡಿಗಳು ರಸ್ತೆ ಬದಿಯಲ್ಲಿ ಕಡಿಮೆಯಾಗಲಿವೆ ಶಾರದ ವರದರಾಜು ಚಂದಾಪುರ ಪುರಸಭಾ ಅಧ್ಯಕ್ಷೆ

ನಿತ್ಯ ಸರ್ಕಸ್‌ ಸವಾರ ಚಾಲಕರ ಜಗಳ ಸಾಮಾನ್ಯ  ಚಂದಾಪುರದಿಂದ ಇಗ್ಗಲೂರು ಗೇಟ್‌ವರೆಗಿನ ಸಂಚಾರ ಸಾಹಸ ಮಾಡಿದಂತೆ. ಗುಂಡಿ ಬಿದ್ದ ರಸ್ತೆಗಳು ಅಲ್ಲಲ್ಲಿ ಅಗೆದಿರುವ ರಸ್ತೆಯಲ್ಲಿ ಸಾಗುವುದೇ ಕಷ್ಟ. ಇದರ ನಡುವೆ ರಸ್ತೆ ಬದಿ ಅಂಗಡಿಗಳು ಮತ್ತು ಅಂಗಡಿಗಳ ಮುಂದೆ ನಿಲ್ಲಿಸಿರುವ ವಾಹನ ಕಾಟ. ಇದರ ನಡುವೆ ಸಾಗುವುದು ಸರ್ಕಸ್‌ ಮಾಡಿದಂತೆ. ಇಲ್ಲಿ ನಿತ್ಯ ದ್ವಿಚಕ್ರ ವಾಹನ ಮತ್ತು ಕಾರು ಚಾಲಕರ ನಡುವೆ ವಾಗ್ವಾದ ಜಗಳ ನಡೆಯವುದು ಸಾಮಾನ್ಯವಾಗಿ ಬಿಟ್ಟಿದೆ. ರಸ್ತೆ ಬದಿಯ ಅಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಇಲ್ಲಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಚಂದಾಪುರ ನಿವಾಸಿಗಳು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.