ADVERTISEMENT

ಗಣಿ ಲೂಟಿಕೋರರಿಗೆ ಸಿ.ಎಂ ಬೆಂಬಲ: ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 4:41 IST
Last Updated 26 ಜನವರಿ 2021, 4:41 IST
ಸಭೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯಕ್ ಮಾತನಾಡಿದರು
ಸಭೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್‌ನಾಯಕ್ ಮಾತನಾಡಿದರು   

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದನ್ನು ಹಿಂಪಡೆಯಬೇಕು ಹಾಗೂ ಎಂ.ಇ.ಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ಜ.30 ರಂದು ರಾಜ್ಯದಾದ್ಯಂತ ರೈಲು ತಡೆ ಚಳವಳಿ ರೂಪಿಸಲಾಗಿದ್ದು ಕನ್ನಡಕ್ಕಾಗಿ ಜೈಲಿನಲ್ಲಿರಲೂ ಸಿದ್ಧ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬೆಳಗಾವಿಯಲ್ಲಿ ರಾಜಕೀಯ ಮುಖಂಡರು ಮರಾಠಿಗರ ಹಾಗೂ ಶಿವಸೇನೆ ಏಜೆಂಟರಂತೆ ಕೆಲಸ ಮಾಡುತ್ತಿ
ದ್ದಾರೆ. ಎಂ.ಇ.ಎಸ್, ಶಿವಸೇನೆ ಬೆಳಗಾವಿಯಿಂದ ರಾಜ್ಯದಲ್ಲಿ ಬೇರೂರಲು ಬಿಡಬಾರದು. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಖಂಡನೀಯ. ಇದರ ವಿರುದ್ದ ರಾಜದಾದ್ಯಂತ ಹೋರಾಟ ನಡೆಸಲಾಗುವುದು ಎಂದರು.

ADVERTISEMENT

ಗಣಿ ಲೂಟಿಕಾರರಿಗೆ ಸಿಎಂ ಬೆಂಬಲ: ಶಿವಮೊಗ್ಗದ ಗಣಿಯಲ್ಲಿ ನಡೆದ ಸ್ಫೋಟ ಕುರಿತಂತೆ ಅಕ್ರಮ ಸಕ್ರಮ ಮಡುವಂತೆ ಮುಖ್ಯಮಂತ್ರಿ ಬಾಲಿಶ ಹೇಳಿಕೆ ನೀಡಿರುವುದು ಶೋಭೆಯಲ್ಲಿ. ರಾಜ್ಯದಲ್ಲಿ ಹಿಂದೆ ಗಣಿ ದಣಿಗಳಿಂದಲೇ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದರು. ಗಣಿ ಸ್ಫೋಟದಲ್ಲಿ ಮೃತಪಟ್ಟ ಕುಟುಂಬದವರಿಗೆ ₹5ಲಕ್ಷ ಸಾಲದು. ಹೆಚ್ಚಿನ ಪರಿಹಾರ ನೀಡಬೇಕಿದೆ ಎಂದರು.

ರೈತರ ಹೋರಾಟಕ್ಕೆ ಬೆಂಬಲ: ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಿದೆ. ರಾಜ್ಯದಲ್ಲಿ ರೈತರ, ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದರು.

ರಾಜ್‍ಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷ ಸಾ.ರ ಗೋವಿಂದು ಮಾತನಾಡಿ, ಈಚೆಗೆ ಮಹಾರಾಷ್ಟ ಮುಖ್ಯಮಂತ್ರಿ ನೀಡಿದ್ದ ಹೇಳಿಕೆಗೆ ವಿರೋಧಿಸುವ ರಾಜಕಾರಣಿಗಳು, ಮರಾಠ ಅಭಿವೃದ್ಧಿ ನಿಗಮ ಹಾಗೂ ಎಂ.ಇ.ಎಸ್ ನಿಷೇಧಕ್ಕೆ ಏಕೆ ಒತ್ತಾಯಿಸುವುದಿಲ್ಲ. ಹಿಂದಿ ರಾಷ್ಟ್ರ ಭಾಷೆ, ಅದರ ನಿರ್ಲಕ್ಷ್ಯ ಬೇಡ ಎಂದು ಹೇಳಿರುವ ಸಾಹಿತಿ ದೊಡ್ಡರಂಗೇಗೌಡ ಅವರ ಹೇಳಿಕೆ ಖಂಡನೀಯ. ಈ ಹೇಳಿಕೆಗೆ ಅವರು ಹಿಂಪಡೆಯಬೇಕು ಇಲ್ಲವೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಬಿಡಬೇಕು. ರಾಜ್ಯ ಸರ್ಕಾರ ಹೋರಾಟ ಹತ್ತಿಕ್ಕಿ ಹಿಟ್ಲರ್ ಸಂಸ್ಕೃತಿ ಮೆರೆಯುತ್ತಿದ್ದು, ಹೋರಾಟಗಾರರು ಇದಕ್ಕೆ ಹೆದರಬಾರದು ಎಂದು ಹೇಳಿದರು.

ಕನ್ನಡಪರ ಹೋರಾಟಗಾರರಾದ ಗಿರೀಶ್‌ಗೌಡ, ಅಮಿತ್ ಚಂದ್ರು, ಟಿ.ಎನ್.ಪ್ರಭುದೇವ್,ಸಂಜೀವ್ ನಾಯಕ್, ಸು.ನರಸಿಂಹಮೂರ್ತಿ, ಡಿ.ಪಿ.ಆಂಜನೇಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.