ADVERTISEMENT

ದೇಶಕ್ಕೆ ಗ್ರಾಮೀಣರ ಕೊಡುಗೆ ಹಿರಿದು: ಪ್ರೊ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 7:01 IST
Last Updated 9 ಅಕ್ಟೋಬರ್ 2022, 7:01 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಬೀಡಿಗೆರೆ ಗ್ರಾಮದಲ್ಲಿ ಕೊನಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪ್ರಾಧ್ಯಾಪಕ ಪ್ರೊ.ನಾಗರಾಜ್ ಮಾತನಾಡಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಬೀಡಿಗೆರೆ ಗ್ರಾಮದಲ್ಲಿ ಕೊನಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಪ್ರಾಧ್ಯಾಪಕ ಪ್ರೊ.ನಾಗರಾಜ್ ಮಾತನಾಡಿದರು   

ದೊಡ್ಡಬಳ್ಳಾಪುರ: ‘ದೇಶದ ಯುವ ಸಮುದಾಯ ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಜ್ಜುಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಪ್ರಾಧ್ಯಾಪಕ ಪ್ರೊ.ನಾಗರಾಜ್ ಹೇಳಿದರು.

ತಾಲ್ಲೂಕಿನ ಬೀಡಿಗೆರೆ ಗ್ರಾಮದಲ್ಲಿ ಕೊನಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಶನಿವಾರ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜೀವನಾನುಭವ ಹೊಂದಿರುವ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹೆಚ್ಚಿರುತ್ತದೆ. ಗ್ರಾಮೀಣ ಪ್ರತಿಭೆಗಳು ದೇಶಕ್ಕೆ ನೀಡಿರುವ ಕೊಡುಗೆ ದೊಡ್ಡದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಗ್ರಾಮೀಣರೇ ಮುಂದಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದರು.

ADVERTISEMENT

ಕೊನಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ದಯಾನಂದ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯಗಳ ಅಗತ್ಯ ಮತ್ತು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅರಿಯಬೇಕಾಗಿದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆಗಮಾತ್ರ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ನಾಗರಿಕ ಪ್ರಜ್ಞೆ ಬೆಳೆಯುತ್ತದೆ. ಯುವಶಕ್ತಿಯಿಂದ ಸದೃಢ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು
ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಮಾತನಾಡಿ, ಸಾರ್ವಜನಿಕರು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಗೆ ಪಠ್ಯ ವಿಷಯದಷ್ಟೇ ಪಠ್ಯೇತರ ಚಟುವಟಿಕೆಗಳು ಸಹಕಾರಿ ಆಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಮೆಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ಎನ್. ಗೌರೀಶ್, ನಾಗರಾಜು, ಮುನೇಗೌಡ, ಸತ್ಯನಾರಾಯಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ, ಮುಖ್ಯಶಿಕ್ಷಕಿ ಮಂಗಳಗೌರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾಗಪ್ಪಗೌಡ, ಕೊನಘಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.