ADVERTISEMENT

ದೇವನಹಳ್ಳಿ | ಬಮೂಲ್‌ನಿಂದ ಶೀಘ್ರ ಕಾಲ್‌ಸೆಂಟರ್: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 1:54 IST
Last Updated 6 ಜುಲೈ 2025, 1:54 IST
<div class="paragraphs"><p>ವಿಜಯಪುರ ಹಾಲು ಶೀಥಲೀಕರಣ ಕೇಂದ್ರಕ್ಕೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು</p></div>

ವಿಜಯಪುರ ಹಾಲು ಶೀಥಲೀಕರಣ ಕೇಂದ್ರಕ್ಕೆ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು

   

ವಿಜಯಪುರ (ದೇವನಹಳ್ಳಿ): ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಬಮೂಲ್ ಒಕ್ಕೂಟದಿಂದ ಶೀಘ್ರವಾಗಿ ಕಾಲ್‌ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ಚಿಕ್ಕನಹಳ್ಳಿ ಗ್ರಾಮದ ಬಳಿಯಿರುವ ವಿಜಯಪುರ ಹಾಲು ಶೀಥಲೀಕರಣ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದರು.

ADVERTISEMENT

ಹೈನುಗಾರಿಕೆ ಉದ್ಯಮವನ್ನು ಉಳಿಸುವುದು ನಿಮ್ಮೆಲ್ಲರ ಕೈಯಲ್ಲಿದೆ. ರೈತರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಒಕ್ಕೂಟವನ್ನು ಬಲಪಡಿಸಬೇಕು. ಮದುವೆ, ನಾಮಕಾರಣ ಇತರೆ ವಿಶೇಷ ಕಾರ್ಯಕ್ರಮಗಳಿಗೆ ರೈತರು ಸಹ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡಬೇಕು ಎಂದರು.

ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಮೇಲೆ ಭೂಮಿಯ ಬೆಲೆ ಗಗನಕ್ಕೇರಿದ್ದು, ಹೈನುಗಾರಿಕೆ ಕುಂಠಿತಗೊಂಡಿದೆ. ರೈತರು ಎಷ್ಟೇ ಹಾಲು ಉತ್ಪಾದನೆ ಮಾಡಿದರೂ, ಅದಕ್ಕೆ ಮಾರುಕಟ್ಟೆಯ ಸೌಲಭ್ಯ ಒದಗಿಸಿಕೊಡುವ ಕೆಲಸವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಕ್ಷೀರ ಕ್ಷೇತ್ರದಲ್ಲಿ ಬದಲಾವಣೆಯನ್ನು ಕಾಣಲು ನಾವೆಲ್ಲರೂ ತವಕಿಸುತ್ತಿದ್ದೇವೆ. ಕನಕಪುರದಲ್ಲಿ ₹1,500 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗಿದೆ ಎಂದರು.

ಬಮೂಲ್ ನಿರ್ದೇಶಕ ಎಸ್.ಪಿ ಮುನಿರಾಜು ಮಾತನಾಡಿ, 2019ರಲ್ಲಿ ನಡೆದ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೇವಲ 9 ಮತಗಳ ಅಂತರದಲ್ಲಿ ಸೋತಿದೆ. ಈ ಬಾರಿ ಎಲ್ಲರ ಸಹಕಾರದಿಂದ ಗೆಲುವು ಸಾಧಿಸಿದ್ದೇನೆ. ಹಾಲು ಉತ್ಪಾದಕರ ಹಿತ ಕಾಪಾಡಲು ಬದ್ಧನಾಗಿದ್ದು, ರೈತರ ಪರವಾಗಿ ಶ್ರಮಿಸಲಾಗುವುದು ಎಂದರು.

ಒಕ್ಕೂಟದ ಉಪಾಧ್ಯಕ್ಷ ರಾಜಣ್ಣ, ಬಯಪ್ಪ ಅಧ್ಯಕ್ಷ ಶಾಂತಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಪ್ರಸನ್ನಕುಮಾರ್, ಎಸ್.ಆರ್.ರವಿಕುಮಾರ್, ನಾಗೇಗೌಡ, ಜಗನ್ನಾಥ್, ಸತೀಶ್ ಗೌಡ ಮತ್ತಿತರರು ಇದ್ದರು.

ಮಾರುಕಟ್ಟೆ ವ್ಯವಸ್ಥೆ: ಹಲವು ಬದಲಾವಣೆ
ಒಕ್ಕೂಟದಲ್ಲಿ ಹೊಸ ಬದಲಾವಣೆ ತರುವ ದೃಷ್ಟಿಯಿಂದ ಈಗಾಗಲೇ ಚಿಂತನೆ ನಡೆಸಿದ್ದು, ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಲು ಕಾಲ್ ಸೆಂಟರ್‌ ಸ್ಥಾಪನೆ, ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲ ಸಹಕಾರಿ ಸಂಘಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆ, ಹಾಲು ಸರಬರಾಜು ವಾಹನಗಳಿಗೆ ಜಿಪಿಎಸ್ ಅಳವಡಿಕೆ, ವೈದ್ಯರು, ಪಶು ಆಹಾರ ನಿಗದಿತ ಸಮಯಕ್ಕೆ ಸಿಗುವಂತೆ ಮಾಡುವುದು, ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಸಹ ಹಲವು ಬದಲಾವಣೆ ತರಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.