ADVERTISEMENT

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ಮಾಫಿಯಾಕ್ಕೆ ಆರೋಗ್ಯ ಹಾಳು

ಪ್ರತಿದಿನ 4,500 ಮೆಟ್ರಿಕ್‌ ಟನ್‌ ತ್ಯಾಜ್ಯ ವಿಲೇವಾರಿ l ಹೋರಾಟಕ್ಕೆ ಸಿದ್ಧರಾಮ ಚೈತನ್ಯ ಸ್ವಾಮೀಜಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 6:29 IST
Last Updated 30 ನವೆಂಬರ್ 2021, 6:29 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರನೇಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಸೋಮವಾರ ಅರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಘೋಷಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರನೇಹಳ್ಳಿ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಸೋಮವಾರ ಅರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಘೋಷಿಸಿದರು   

ದೊಡ್ಡಬಳ್ಳಾಪುರ: ‘ಬೆಂಗಳೂರು ನಗರದಿಂದ ಕಸ ಹೊರಗೆ ಹೋಗಬೇಕು ಎನ್ನುವುದಷ್ಟೇತ್ಯಾಜ್ಯ ವಿಲೇವಾರಿಯ ಟೆಂಡರ್‌ ಪಡೆದವರ ಏಕೈಕ ಉದ್ದೇಶವಾಗಿದೆ. ಕಸದ ರಾಶಿ ಹಾಕುವ ಪ್ರದೇಶದಲ್ಲಿನ ಜನರ ಆರೋಗ್ಯದ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಕುಣಿಗಲ್ ತಾಲ್ಲೂಕಿನ ಕಿತ್ನಾಮಂಗಲ-ಕಾಡುಮತ್ತಿಕೆರೆಯ ಅರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ದೂರಿದರು.

ತಾಲ್ಲೂಕಿನ ಚಿಗರನೇಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಗ್ರಾಮಸ್ಥರು ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

ಅವೈಜ್ಞಾನಿಕ ಕಸ ವಿಲೇವಾರಿಯಿಂದ ಇಲ್ಲಿನ ಗ್ರಾಮಗಳ ಜನರ ಬದುಕು ನರಕಮಯವಾಗಿದೆ. ಈ ಕುರಿತು ಹಲವಾರು ಬಾರಿ ಪ್ರತಿಭಟನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವಕಾಶ ನೀಡಿದ್ದಾರೆ. ಆದರೂ, ತಪ್ಪು ತಿದ್ದಿಕೊಂಡಿಲ್ಲ. ಹೀಗಾಗಿ ಕಸ ಇಲ್ಲಿಗೆ ಬರುವುದನ್ನು ನಿಲ್ಲಿಸುವವರೆಗೂ ಧರಣಿ ಮುಂದುವರಿಸಬೇಕು ಎಂದರು.

ADVERTISEMENT

ನವ ಬೆಂಗಳೂರು ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ವಿ. ಸತ್ಯಪ್ರಕಾಶ್ ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಸಿದ್ದಲಿಂಗಯ್ಯ ಮಾತನಾಡಿ, ‘2015ರಿಂದ ಕಸ ವಿಲೇವಾರಿಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ದಿನಕ್ಕೆ 400 ಮೆಟ್ರಿಕ್ ಟನ್ ಕಸ ವಿಲೇವಾರಿ ಮಾಡುವುದಾಗಿ ಹೇಳಲಾಗಿತ್ತು. ಈಗ ದಿನಕ್ಕೆ 4,500 ಸಾವಿರ ಮೆಟ್ರಿಕ್ ಟನ್ ಕಸವನ್ನು ಇಲ್ಲಿಗೆ ತಂದು ಸುರಿಯಲಾಗುತ್ತಿದೆ ಎಂದು ದೂರಿದರು.

ಗ್ರಾಮಗಳಿಗೆ ಬಿಬಿಎಂಪಿ ನೀಡುವ ಸೌಲಭ್ಯ ನಮಗೆ ಬೇಕಿಲ್ಲ. ಎಂಎಸ್‌ಜಿಪಿ ಘಟಕವನ್ನು ಇಲ್ಲಿಂದ ಎತ್ತಂಗಡಿ ಮಾಡಿ ನಮ್ಮ ಬದುಕನ್ನು ಉಳಿಸಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್. ಪ್ರದೀಪ್, ಮುಖಂಡರಾದ ಅಶ್ವತ್ಥನಾರಾಯಣ, ದೇವರಾಜಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಲತಾ, ಪ್ರಸನ್ನ ಸೇರಿದಂತೆ ಗ್ರಾಮಸ್ಥರುಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.