
ದೇವನಹಳ್ಳಿ: ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವೇಳೆ ಟೋಲ್ ರಸ್ತೆಯನ್ನು ತಪ್ಪಿಸಿದ್ದನ್ನು ಪ್ರಶ್ನಿಸಿದ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ 31 ವರ್ಷದ ಕ್ಯಾಬ್ ಚಾಲಕನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.
ಕೇರಳದ ತ್ರಿಶೂರು ನಿವಾಸಿ ಪಿ.ಎಸ್.ಅಜಾಸ್ ಬಂಧಿತ. ಪಶ್ಚಿಮ ಬಂಗಾಳದ ಮೂಲದ ವಿದ್ಯಾರ್ಥಿನಿ ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯೊಂದರಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದು, ಅಕ್ಟೋಬರ್ 20ರಂದು ಮುಂಜಾನೆ ಊರಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು.
‘ಪ್ರಯಾಣದ ವೇಳೆ ಚಾಲಕ ಟೋಲ್ ರಸ್ತೆ ಬದಲು ಬೇಗೂರು ಜಂಕ್ಷನ್ ಮಾರ್ಗವಾಗಿ ಕ್ಯಾಬ್ ಚಾಲನೆ ಮಾಡುತ್ತಿರುವುದನ್ನು ಸಂತ್ರಸ್ತೆ ಪ್ರಶ್ನಿಸಿದ್ದಾರೆ. ಚಾಲಕ ಸಮರ್ಪಕ ಉತ್ತರ ನೀಡದ ಕಾರಣ ವಿದ್ಯಾರ್ಥಿನಿ ವಾಹನ ನಿಲ್ಲಿಸಿ ಈಗಾಗಲೇ ಟೋಲ್ ಶುಲ್ಕ ಪಾವತಿಸಿದ್ದೇನೆ. ಟೋಲ್ ಮಾರ್ಗವಾಗಿ ಸಾಗುವಂತೆ ತಾಕೀತು’ ಮಾಡಿದ್ದಾರೆ.
ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ನಂತರ ವಿದ್ಯಾರ್ಥಿನಿ ಕ್ಯಾಬ್‌ನಿಂದ ಇಳಿದು ಮತ್ತೊಂದು ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ ಹತ್ತಲು ಯತ್ನಿಸುತ್ತಿದ್ದಾಗ ಚಾಲಕ ಹಲ್ಲೆ ನಡೆಸಿದ್ದಾರೆ. ಭಯಗೊಂಡ ವಿದ್ಯಾರ್ಥಿನಿ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾರೆ. ಇದರಿಂದ ವಿಚಲಿತನಾದ ಚಾಲಕ ಅಲ್ಲಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
- ಮದ್ಯಪಾನ ಮಾಡಿದ್ದ ಚಾಲಕ ಅಜಾಸ್
ಕೇವಲ ಎರಡು ದಿನಗಳ ಹಿಂದೆಷ್ಟೇ ಬೆಂಗಳೂರಿಗೆ ಬಂದಿದ್ದ. ಯಶವಂತಪುರದ ಒಂದು ಟ್ರಾವೆಲ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಘಟನೆ ಹಿಂದಿನ ರಾತ್ರಿ ಚಾಲಕ ಮದ್ಯಪಾನ ಮಾಡಿದ್ದ ಎಂಬ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟು ಮಾಡುವ ಅಥವಾ ಹಿಂಸಾತ್ಮಕ ವರ್ತನೆ ತೋರಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ ನಾಗರಿಕರು ಕ್ಯಾಬ್ ಸೇವೆ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ಅಸಭ್ಯ ವರ್ತನೆ ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.