
ವಿಜಯಪುರ (ದೇವನಹಳ್ಳಿ): ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದಿಂದ 2025ನೇ ಸಾಲಿನ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ 4ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಂಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಸಮುದಾಯದ ಹಿರಿಯ ಮುಖಂಡ ಜಿ.ಎನ್.ವೇಣುಗೋಪಾಲ್, ಗಾಣಿಗ ಸಮುದಾಯದ ಏಳಿಗೆಗೆ ಶಿಕ್ಷಣ ಮಾತ್ರ ದಾರಿದೀಪವಾಗಿದೆ. ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ ಶಿಕ್ಷಣ ಪಡೆಯುವುದು ಅಗತ್ಯ. ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ತಿಳಿಸಿದರು.
ಸಣ್ಣ ಸಮುದಾಯವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಮೀನು, ನಿವೇಶನ ಮಂಜೂರು ಮಾಡಿಕೊಡಬೇಕು. ಇದಕ್ಕೆ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರು ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗಾಣಿಗ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಅಖಿಲ ಕರ್ನಾಟಕ ಜ್ಯೋತಿನಗರ ವೈಶ್ಯ ಗಾಣಿಗರ ಸಂಘ ಅಧ್ಯಕ್ಷ ಪೇರೆಸಂದ್ರ ವಿಜಯ್‍ಕುಮಾರ್ ಹೇಳಿದರು.
ಸಮುದಾಯದ ಪ್ರತಿಯೊಬ್ಬರ ಭವಿಷ್ಯ ಅವರ ಕೈಯಲ್ಲೇ ಇದ್ದು, ಜೀವನದ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿದೆ ಎಂದು ವಿಜಯಪುರ ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ವಸಂತಕುಮಾರ್ ತಿಳಿಸಿದರು.
ಯಾವುದೇ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣದ ಜತೆ ಸಂಘಟನೆಯನ್ನು ಬಲಗೊಳಿಸುವುದು ಸಹ ಅಗತ್ಯ. ಇಂದು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಸಂಘದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜಯಪುರ ಗಾಣಿಗ ಸೇವಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಧ್ಯಕ್ಷ ಜಿ.ರಾಜಗೋಪಾಲ್ ಹೇಳಿದರು.
ಸಮುದಾಯದ ಹಿರಿಯ ಮುಖಂಡರಿಗೆ ಸಂಘದ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಕಾರ್ಯದರ್ಶಿ ಗಗನ್, ಖಜಾಂಚಿ ಮಂಜುನಾಥ್, ಮುಖಂಡರಾದ ರಾಮು ಭಗವನ್, ಅಂಜಿನಪ್ಪ, ರಮೇಶ್, ಶಿವಕುಮಾರ್, ಜೈಪಾಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.