
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ ವಿವಿಧ ಭಾಗಗಳಿಗೆ ಕೊತ್ತಂಬರಿ ಸಾಗಣೆಯ ಪ್ರಮಾಣ ಹೆಚ್ಚಾಗಿದೆ.
ಇದೇ ಜೂನ್‌ನಿಂದ ನವೆಂಬರ್‌ವರೆಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಒಟ್ಟು 5,904 ಮೆಟ್ರಿಕ್ ಟನ್ ಕೊತ್ತಂಬರಿ ಸೊಪ್ಪನ್ನು ದೇಶದ ಬೇರೆ ಬೇರೆ ನಗರಗಳಿಗೆ ಸಾಗಿಸಲಾಗಿದೆ.
ಕಳೆದ ವರ್ಷಕ್ಕೆ ಹೊಲಿಸಿದರೇ ಈ ವರ್ಷ ಕೊತ್ತಂಬರಿ ಸಾಗಣೆ ಶೇ 13 ರಷ್ಟು ಹೆಚ್ಚಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಕೊತ್ತಂಬರಿಗೆ ಬೇಡಿಕೆ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ.
ಈ ಮೂಲಕ ಕೊತ್ತಂಬರಿ ಸೊಪ್ಪಿನಂತಹ ತಾಜಾ ಕೃಷಿ ಉತ್ಪನ್ನಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸುವಲ್ಲಿ ಪ್ರಮುಖ ಕೇಂದ್ರವಾಗಿ ಬೆಂಗಳೂರು ರೂಪುಗೊಳ್ಳುತ್ತಿದೆ.
ಐದು ತಿಂಗಳಲ್ಲಿ ಕೊತ್ತಂಬರಿ ಸೊಪ್ಪನ್ನು ದೇಶದ 22 ನಗರಗಳಿಗೆ ಸರಬರಾಜು ಮಾಡಲಾಗಿದೆ. ಕೋಲ್ಕತ್ತಾ, ದೆಹಲಿ, ರಾಂಚಿ ಮತ್ತು ಪಟ್ನಾ ಕಡೆಗೆ ಹೆಚ್ಚು ಸಾಗಣೆ ನಡೆದಿದ್ದು, ಲಖನೌ, ವಾರಾಣಸಿ ಹಾಗೂ ಜೈಪುರ ಕಡೆಗೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಕಳುಹಿಸಲಾಗಿದೆ.
ಇದಕ್ಕೂ ಹೆಚ್ಚಾಗಿ ಅಗರ್ತಲಾ, ಆಗ್ರಾ, ನಾಗಪುರ, ಅಮೃತಸರ ಮತ್ತು ಪೋರ್ಟ್ ಬ್ಲೇರ್‌ಗೆ ಮೊದಲ ಬಾರಿಗೆ ಕೊತ್ತಂಬರಿ ಸಾಗಣೆ ಆರಂಭಿಸಲಾಗಿದೆ. ಇದರಿಂದ ತಾಜಾ ಸೊಪ್ಪು ರಫ್ತು ಮಾಡಲು ರೈತರು ಮತ್ತು ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾದಂತಾಗಿದೆ.
ಕೊತ್ತಂಬರಿ ಸೊಪ್ಪು ಬೇಗ ಹಾಳಾಗುವ ಬೆಳೆ. ರಸ್ತೆ ಮಾರ್ಗದಲ್ಲಿ ದೂರದ ಮಾರುಕಟ್ಟೆಗೆ ಕಳುಹಿಸಿದರೆ ಗುಣಮಟ್ಟ ಕುಸಿಯುವ ಸಾಧ್ಯತೆ ಹೆಚ್ಚು. ಆದರೆ ವಿಮಾನ ಮಾರ್ಗದ ಮೂಲಕ ಕಡಿಮೆ ಸಮಯದಲ್ಲಿ ಉತ್ಪನ್ನ ತಲುಪುವುದರಿಂದ ತಾಜಾತನ ಉಳಿಯುತ್ತದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಕೃಷಿ ತಜ್ಞರ ಪ್ರಕಾರ, ರೈತರು ಗುಂಪಾಗಿ ಅಥವಾ ಎಫ್‌ಪಿಒಗಳ ಮೂಲಕ ಕೊತ್ತಂಬರಿ ಸಂಗ್ರಹಿಸಿ, ವಿಂಗಡಣೆ ಮಾಡಿ, ಬೆಂಗಳೂರು ಮೂಲಕ ನೇರವಾಗಿ ಬೇರೆ ರಾಜ್ಯಗಳ ಮಾರುಕಟ್ಟೆಗಳಿಗೆ ಕಳುಹಿಸಿದರೆ ಲಾಭ ಹೆಚ್ಚಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕೊತ್ತಂಬರಿಯ ಜೊತೆಗೆ ಇತರೆ ತರಕಾರಿಗಳಿಗೂ ಇದೇ ಮಾದರಿಯ ಅವಕಾಶ ಹೆಚ್ಚಾಗುವ ಸಾಧ್ಯತೆ ಇದೆ.
ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ನಡೆಯುತ್ತಿರುವ ಈ ಸಾಗಣೆ ರಾಜ್ಯದ ರೈತರಿಗೆ ದೇಶದ ದೊಡ್ಡ ಮಾರುಕಟ್ಟೆ ಅವಕಾಶಗಳನ್ನುನ ತೆರೆದಿಡುವ ನಿರೀಕ್ಷೆ ಇದೆ ಎಂದು ವಿಮಾನ ನಿಲ್ದಾಣದ ಮೂಲಗಳು
ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.