ADVERTISEMENT

ದೇವನಹಳ್ಳಿ | ಪುನರ್ವಸತಿ ಕೇಂದ್ರ: ವಿಶೇಷ ಮಕ್ಕಳ ಆಶಾಕಿರಣ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 12 ಡಿಸೆಂಬರ್ 2025, 2:45 IST
Last Updated 12 ಡಿಸೆಂಬರ್ 2025, 2:45 IST
ಮಗುವೊಂದು ಥೆರಪಿ ಸಾಮಾಗ್ರಿ ಹಿಡಿದು ಮಾತಿನ ಚಿಕಿತ್ಸೆ ಪಡೆಯುತ್ತಿರುವುದು
ಮಗುವೊಂದು ಥೆರಪಿ ಸಾಮಾಗ್ರಿ ಹಿಡಿದು ಮಾತಿನ ಚಿಕಿತ್ಸೆ ಪಡೆಯುತ್ತಿರುವುದು   

ವಿಜಯಪುರ (ದೇವನಹಳ್ಳಿ): ‘ನಮ್ಮ ಮಗುವಿಗೆ ಎರಡು ವರ್ಷ. ಡಿ ಮೈಲಿನಿಷನ್ ಎಂಬ ನ್ಯೂನತೆಯಿಂದ ಬಳಲುತ್ತಿದೆ. (ನರಗಳ ಸುತ್ತಲಿರುವ ಮೈಲಿನ್ ರಕ್ಷಣಾತ್ಮಕ ಪದರ ಹಾನಿಯಾಗುವುದು ಅಥವಾ ಕಡಿಮೆಯಾಗುವುದು) ಇದರಿಂದ ಚಲನವಲನೆಗೆ, ಸಮತೋಲನ ನಡೆದಾಟಕ್ಕೆ ತೊಂದರೆಯಾಗುತ್ತಿತ್ತು. ಆರಂಭದಲ್ಲಿ ಈ ಕೇಂದ್ರಕ್ಕೆ ಬಂದಾಗ ನನ್ನ ಕಣ್ಣೀರು ನೋವಿನಿಂದ ಕೂಡಿತ್ತು. ಆದರೆ ಈಗ ಸಂತೋಷದ ಕಣ್ಣೀರು ಬರುತ್ತಿದೆ...’

–ಹೀಗೆ ಆನಂದ ಬಾಷ್ಪ ಸುರಿಸುತ್ತಾ ಮಗು ಬೆಳವಣಿಗೆ ಸಂತಸ ಹಂಚಿಕೊಂಡಿದ್ದು ಭವ್ಯಾ. 

ಭವ್ಯಾ ಅವರು ವಿಜಯಪುರದಲ್ಲಿ ತೆರೆದಿರುವ ಹೋಬಳಿ ಮಟ್ಟದ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ತಮ್ಮ ಮಗುವನ್ನು ಸೇರಿಸಿದ್ದಾರೆ. ಕೇಂದ್ರದಲ್ಲಿ ನೀಡಲಾಗುವ ಥೆರಪಿಯಿಂದ ಮಗು ಬೆಳವಣಿಗೆಯಲ್ಲಿ ಸಾಕಷ್ಟು ಬದಲಾಣೆ ಬಂದಿರುವುದು ಅವರಲ್ಲಿ ಸಂತಸ ಮೂಡಿಸಿದೆ.

ADVERTISEMENT

ಇದು ಕೇವಲ ಒಬ್ಬ ತಾಯಿಯ ಆನಂದ ಬಾಷ್ಪ ಅಲ್ಲ. 150ಕ್ಕೂ ಹೆಚ್ಚಿನ ಪೋಷಕರ ಸಂತಸದ ಕಣ್ಣೀರು...

‘ನಿರಂತರ ಫಿಜಿಯೋಥೆರಪಿಯಿಂದ ಮಗು ಈಗ ಯಾರ ಸಹಾಯವು ಇಲ್ಲದೆ ಎದ್ದು ನಿಲ್ಲುತ್ತದೆ. ಓಡಾಡುತ್ತದೆ. ಈ ಕೇಂದ್ರ ಇಲ್ಲಿ ಇಲ್ಲದಿದ್ದರೆ ಮಗುವಿಗೆ ಫಿಸಿಯೋಥೆರಪಿ ಹಾಗೂ ಮಾತಿನ ಚಿಕಿತ್ಸೆ ಕೊಡಿಸಲು ನಮಗೆ ಬಹಳ ಕಷ್ಟವಾಗುತ್ತಿತ್ತು. ಈಗ ಮಗುವಿನ ಚಲನವಲನ ಬೆಳವಣಿಗೆ ಉತ್ತಮವಾಗಿದೆ’ ಎಂದು ಭವ್ಯಾ ಸಂತಸ ಹಂಚಿಕೊಂಡರು.

ಒಂಬತ್ತು ವರ್ಷದೊಳಗಿನ ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿಜಯಪುರದಲ್ಲಿ ತೆರೆದಿರುವ ಹೋಬಳಿ ಮಟ್ಟದ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ ಈಗ ಅಂಗವಿಕಲ ಮಕ್ಕಳ ಆಶಾಕಿರಣವಾಗಿದೆ. ಈವರೆಗೆ 160ಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕೇಂದ್ರದ ಒಳಗೆ ಕಾಲು ಇಡುತ್ತಿದ್ದಂತೆ ಚಿಣ್ಣರ ಚಿಲಿಪಿಲಿ, ಮೃದು ಆಟಿಕೆಗಳು, ಥೆರಪಿ ಸಲಕರಣೆ, ಸಂತಸದಿಂದ ಆಟವಾಡುತ್ತಿರುವ ಮಕ್ಕಳು ಕಾಣುತ್ತಾರೆ. ಮಕ್ಕಳ ಆ ನಗುವಿನಲ್ಲಿ ಸವಾಲು ಮೀರಿ ಹೆಜ್ಜೆ ಇಡುವ ಛಲ ಅಡಗಿರುತ್ತದೆ.

ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಅನುಷ್ಠಾನ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆ ಸಹಯೋಗದಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಹೋಬಳಿ ಮಟ್ಟದಲ್ಲಿ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರವನ್ನು ವಿಜಯಪುರ ಪಟ್ಟಣದಲ್ಲಿ ಆರಂಭಿಸಿದೆ.

0-9 ವರ್ಷದ ಪುಟಾಣಿಗಳು ಬೌದ್ಧಿಕ ವಿಕಲತೆ, ಚಲನವಲನ ವಿಕಲತೆ, ಡೌನ್ ಸಿಂಡ್ರೋಮ್, ಸ್ವಲೀನತೆ, ಆಟಿಸಂ, ಭಾಷಾ ಮತ್ತು ಮಾತಿನ ತೊಂದರೆ, ಕಲಿಕಾ ನ್ಯೂನತೆ, ಎಡಿಎಚ್‌ಡಿ ಹೊಂದಿರುವವರು ಇಲ್ಲಿಗೆ ಸೇರುತ್ತಿದ್ದಾರೆ.

ಕೇಂದ್ರದಲ್ಲಿ ಫಿಜಿಯೋಥೆರಪಿ ತಜ್ಞರು ಮಕ್ಕಳಿಗೆ ವ್ಯಾಯಾಮ ಕಲಿಸುತ್ತಾರೆ. ಭಾಷಾ ಚಿಕಿತ್ಸಕರು ತೊದಲು ಮಾತನಾಡುವ, ಮಾತನಾಡಲು ತೊಂದರೆ ಪಡುವ ಮಕ್ಕಳಿಗೆ ಮೊದಲು ಅಮ್ಮ ಎಂಬ ಮಾತಿನ ಚಿಕಿತ್ಸೆ ನೀಡುತ್ತಾರೆ. ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು ಮಕ್ಕಳ ಮನಸ್ಸನ್ನು ಅರಿತು ಅವರಿಗೆ ಬೌದ್ಧಿಕ ಪರೀಕ್ಷೆ, ವಿಶೇಷ ಶಿಕ್ಷಣ ನೀಡುತ್ತಿದ್ದಾರೆ.

ಹೀಗೆ ಕೇಂದ್ರದಲ್ಲಿ ವೈದ್ಯಕೀಯ ಪುನರ್ವಸತಿ ಸೇವೆಗಳಾದ ಭಾಷಾ ಮತ್ತು ಮಾತಿನ ಚಿಕಿತ್ಸೆ, ಫಿಸಿಯೋ ಥೆರಪಿ, ವಿಶೇಷ ಶಿಕ್ಷಣ ಮಕ್ಕಳಿಗೆ ಶ್ರವಣ ಪರೀಕ್ಷೆ ಸೇವೆಗಳನ್ನು ತಜ್ಞರಿಂದ ಪರೀಕ್ಷಿಸಿ ಉಚಿತವಾಗಿ ಸೇವೆಗಳನ್ನು ನೀಡುವ ಮೂಲಕ ಆರಂಭಿಕ ಹಂತದಲ್ಲಿ ಮಕ್ಕಳ ವೈದ್ಯಕೀಯ ಪುನರ್ವಸತಿ ಸೇವೆಗಳ ಮೇಲೆ ನಿಗಾವಹಿಸಲಾಗಿದೆ.

ಡಿ ಮೈಲಿನಿಷನ್ ನ್ಯೂನತೆ ಹೊಂದಿರುವ ಮಗುವಿಗೆ ಥೆರಪಿ ನೀಡುತ್ತಿರುವುದು

ವೃತ್ತಿಪರ ತಜ್ಞರ ತಂಡ:

ಕೇಂದ್ರಕ್ಕೆ ವಾರಕ್ಕೆ ಎರಡು ದಿನ ವೃತ್ತಿಪರ ತಜ್ಞರಾದ (ಕ್ಲಿನಿಕಲ್ ಸೈಕಾಲಜಿಸ್ಟ್, ಫಿಸಿಯೋಥೆರಪಿ, ಆಡಿಯೋ ಮತ್ತು ಭಾಷಾ ಚಿಕಿತ್ಸಕರು) ಆಗಮಿಸಿ ಮಕ್ಕಳ ಆರಂಭಿಕ ಹಂತದ ಬೆಳವಣಿಗೆಯ ನ್ಯೂನ್ಯತೆಯನ್ನು ಪರೀಕ್ಷಿಸಿ ಥೆರಪಿ ಸೇವೆಗಳನ್ನು ಒದಗಿಸಲು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ವಿಶೇಷ ಶಿಕ್ಷಕಿಯರಾದ ಮಾಲಾ ಮತ್ತು ಚೈತ್ರಾ ಅವರಿಗೆ ಸೂಚಿಸುತ್ತಾರೆ.

ಈ ವಿಶೇಷ ಶಿಕ್ಷಕಿಯರು ದಿನನಿತ್ಯ ಮಕ್ಕಳಿಗೆ ವೃತ್ತಿಪರ ತಜ್ಞರು ಸೂಚಿಸಿದಂತೆ ಥೆರಪಿ ಸೇವೆಗಳು ಹಾಗೂ ವಿಶೇಷ ಶಿಕ್ಷಣ ನೀಡುವ ಮೂಲಕ ಆರಂಭಿಕ ಹಂತದಲ್ಲಿ ಮಕ್ಕಳ ವೈದ್ಯಕೀಯ ಪುನರ್ವಸತಿ ಸೇವೆಗಳನ್ನು ಒದಗಿಸುತ್ತಿದ್ದಾರೆ.

ಹೊರ ತಗ್ಗಿಸುವ ಪ್ರಯತ್ನ:

 ‘ಈ ಹಿಂದೆ ಇಲ್ಲಿನ ಸೇವೆಗಳನ್ನು ಪಡೆಯಬೇಕಾದರೆ ಬೆಂಗಳೂರು ನಗರ ಕೇಂದ್ರದ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಇದು ಪೋಷಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಹೊರೆಯಾಗುತಿತ್ತು. ಇದರಿಂದ ಮಕ್ಕಳನ್ನು ಥೆರಪಿ ಸೇವೆಗಳಿಂದ ಹೊರಗೆ ಉಳಿಯುತ್ತಿದ್ದ ಕಾರಣ ವಿಕಲತೆಯ ಪ್ರಮಾಣ ಹೆಚ್ಚಾಗುತ್ತಿತ್ತು.  ಇದನ್ನು ಮನಗೊಂಡು ಎಲ್ಲಾ ವಿಕಲಚೇತನ ಮಕ್ಕಳಿಗೂ ಉಚಿತವಾಗಿ ಥೆರಪಿ ಸೇವೆಗಳು ಲಭ್ಯವಾಗಬೇಕು ಎಂದು ಕೇಂದ್ರವನ್ನು ಸ್ಥಾಪಿಸಲಾಗಿದೆ. ನೋಂದಣಿಗಾಗಿ ವಿಜಯಪುರ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ 080–27622560 ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಸುನಿಲ್ ಕುಮಾರ್ ತಿಳಿಸುತ್ತಾರೆ.

ವಿಶೇಷ ಶಿಕ್ಷಕಿಯೊಬ್ಬರು ಮಕ್ಕಳಿಗೆ ಗುಂಪು ಥೆರಪಿಯಲ್ಲಿ ಪಾಲ್ಗೊಂಡಿರುವುದು 
ಎಲ್ಲಾ ಅಂಗವಿಕಲ ಮಕ್ಕಳಿಗೂ ಉಚಿತವಾಗಿ ಥೆರಪಿ ಸೇವೆಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ವಿಜಯಪುರ ಪಟ್ಟಣದಲ್ಲಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.
ಸುನಿಲ್ ಕುಮಾರ್ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ
‘ಅಮ್ಮ’ ಎಂಬ ಮಧುರ ಉಡುಗೊರೆ
ನನ್ನ  ಮಗಳಿಗೆ 5 ವರ್ಷ ಮಾತನಾಡಲು ಆಗುತ್ತಿರಲಿಲ್ಲ. ಒಂದು ದಿನ ಆಪ್ತರೊಬ್ಬರು ಈ ಕೇಂದ್ರದ ಬಗ್ಗೆ ಹೇಳಿದಾಗ ನನ್ನ ಹೃದಯದಲ್ಲಿ ಹೊಸ ಆಶಾ ಕಿರಣ ಹೊಮ್ಮಿತು. ಮಗುವನ್ನು ತಜ್ಞರಿಗೆ ತಂದು ತೋರಿಸಿ ಭಾಷಾ ಚಿಕಿತ್ಸೆಯ ಒಳಪಡಿಸಲಾಯಿತು. ಮೊದಲಿಗೆ ಒಂದು ಅಕ್ಷರ… ನಂತರ ಎರಡು ಅಕ್ಷರಗಳ ಶಬ್ದ ಉಚ್ಚಾರಣೆ ಮಾಡಿದಳು. ನನ್ನ ಮಗಳು ಚಿಕ್ಕ ತುಟಿಗಳನ್ನು ಜೋಡಿಸಿ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದಳು. ‘ಅಮ್ಮ’ ಎಂದು. ಆ ಶಬ್ದ ಕೇಳಿದ ಕ್ಷಣ ನನಗೆ ಅತ್ಯಂತ ಮಧುರವಾದ ಉಡುಗೊರೆ ಇದೇ ಎನ್ನುತ್ತಾರೆ ಸಹನಾ . ಇದು ನನ್ನ ಮಗಳ ಮಾತುಗಳ ಆರಂಭ ಮಾತ್ರ. ಆದರೆ ತಾಯಿಯಾದ ನನಗೆ ಇದು ಜೀವನದ ಅತ್ಯಂತ ದೊಡ್ಡ ಜಯ. ಇದು ಕೇವಲ ಅಮ್ಮ ಎಂಬ ಎರಡು ಅಕ್ಷರ ಶಬ್ದವಲ್ಲ. ಇದು ಗೆಲುವು ತಾಳ್ಮೆಯ ಫಲ ಮತ್ತು ತಾಯಿಯ ಹೃದಯಕ್ಕೆ ಮರು ಜೀವ ತುಂಬಿದ ಮಧುರ ನಾದ ಎನ್ನುತ್ತಾರೆ ಅವರು.
ನೆರೆ ಜಿಲ್ಲೆಯಿಂದ ಆಗಮನ
ಹೋಬಳಿ ಮಟ್ಟದಲ್ಲಿ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ ಆರಂಭವಾದ ನಂತರ ಹೋಬಳಿಯ ಗ್ರಾಮ ಪಂಚಾಯಿತಿಗಳು ಪಟ್ಟಣ ಸೇರಿದಂತೆ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೇಲೂರು ಮಳ್ಳೂರು ಜಂಗಮಕೋಟೆ ವಿವಿಧ ಗ್ರಾಮಗಳಿಂದ ಪೋಷಕರು ಮಕ್ಕಳನ್ನು ಕರೆ ತಂದು ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ಥೆರಪಿ ಸೇವೆಗಳನ್ನು ಉಚಿತವಾಗಿ ಪಡೆಯುತ್ತಿದ್ದಾರೆ. *** ಸಣ್ಣ ಬದಲಾವಣೆ ಸೇವೆಗೆ ಪ್ರೇರಣೆ ಪ್ರತಿ ಮಕ್ಕಳ ಸಣ್ಣ ಧನಾತ್ಮಕ ಬದಲಾವಣೆಯು ನಮಗೆ ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರೇಪಣೆ ಆಗುತ್ತದೆ. ಮೊದಲ ಸಲ ಬರುವ ಪೋಷಕರು ಬಹಳ ದುಃಖದಿಂದ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಥೆರಪಿ ಸೇವೆಗಳಿಂದ ಮಗುವಿನ ಧನಾತ್ಮಕ ಬದಲಾವಣೆಯು ಪೋಷಕರ ವೈಯಕ್ತಿಕವಾಗಿ ಅಲ್ಲದೆ ಇಡೀ ಕುಟುಂಬದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಾಲಾ ವಿಶೇಷ ಶಿಕ್ಷಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.