
ದೊಡ್ಡಬಳ್ಳಾಪುರ: ತಾಲ್ಲೂಕಿನ ಕಂಟನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅರಿವು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಸ್ಟೆಮ್.ಎಐ ಪ್ರಯೋಗಾಲಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಬೆಂಗಳೂರಿನ ಚೆರಿಷ್ ಟ್ರಸ್ಟ್ ಸಂಸ್ಥಾಪಕ ಮೈಖಲ್ ಡೇಸಾ ಮಾತನಾಡಿ, ‘ಜಾಗತಿಕ ಸವಾಲುಗಳಿಗೆ ಗ್ರಾಮೀಣ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ’ ಎಂದು ಹೇಳಿದರು.
ಸ್ಟೆಮ್ ಮತ್ತು ಎಐ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರ ಕೌಶಲ್ಯ, ಸೃಜನಶೀಲತೆ ಹಾಗೂ ಭವಿಷ್ಯದ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಅಗತ್ಯ ಸಾಮರ್ಥ್ಯಗಳನ್ನು ಬೆಳೆಸುತ್ತದೆ. ಶಿಕ್ಷಣ ಮತ್ತು ಕಾರ್ಯಪಡೆ ಅಭಿವೃದ್ಧಿಗೆ ಅಂತರಶಿಸ್ತೀಯ ವಿಧಾನ ಪ್ರತಿನಿಧಿಸುವ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಮತ್ತು ಎ.ಐ(ಕೃತಕ ಬುದ್ಧಿಮತ್ತೆ) ಇಂದು ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳ ಪರಿಹಾರದ ಮೇಲೆ ಕೇಂದ್ರೀಕೃತವಾಗಿದೆ. ಇದು ತಾಂತ್ರಿಕ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು, ಜಾಗತಿಕ, ಆರ್ಥಿಕ, ಸ್ಪರ್ಧಾತ್ಮಕತೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.
ಸಿ.ಎಸ್.ಆರ್ ಮುಖ್ಯಸ್ಥೆ ಸಮೀತಾ ಮನೋಹರನ್ ಮಾತನಾಡಿ, ಸ್ಟೆಮ್.ಎಐ ಪ್ರಯೋಗಾಲಯಗಳನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಟನಕುಂಟೆ, ಚಿಕ್ಕಹೆಜ್ಜಾಜಿ, ಆರೂಢಿ ಹಾಗೂ ಮೆಳೇಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎ.ಎನ್.ಎಸ್.ಆರ್ ಫೌಂಡೇಶನ್ ಬೆಂಬಲದೊಂದಿಗೆ ಸ್ಥಾಪಿಸಲ್ಪಟ್ಟಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲ ಕೋಡಿಂಗ್, ಎಐ ಪರಿಚಯ, ವಿನ್ಯಾಸ ಚಿಂತನೆ ಹಾಗೂ ವಿಜ್ಞಾನ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕೈಚಳಕದ ಕಲಿಕೆ ಅವಕಾಶ ಒದಗಿಸಲಿವೆ ಎಂದರು.
ಚೆರಿಷ್ ಟ್ರಸ್ಟ್ ಅಧ್ಯಕ್ಷ ಸಂಜೀವ್ ಷಣ್ಮುಗಂ, ಟ್ರಸ್ಟಿ ಅನಿತಾ ಸಿಂಗ್, ಡಾ.ಕ್ಯಾರೋಲಿನ್ ಕ್ಯಾಮರನ್, ಶಾಲೆ ಮಖ್ಯ ಶಿಕ್ಷಕಿ ಮಂಜುಳಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಕಾರ್ಯದರ್ಶಿ ವಿ.ಧನಂಜಯ, ಶಿಕ್ಷಣ ಸಂಯೋಜಕ ಆಂಜಿನಪ್ಪ, ಮಧು, ರಾಮಚಂದ್ರ, ಸಿ.ಆರ್.ಪಿ ವೆಂಕಟೇಶಮೂರ್ತಿ, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿ ಎ.ವಿ.ಚಂದ್ರಪ್ಪ, ಜೈ ಕುಮಾರ್, ಸಿದ್ದಗಂಗಯ್ಯ, ಎಂ.ಜಿ. ಶ್ರೀನಿವಾಸ್, ಚೆರಿಷ್ ತಂಡದ ಸುರೇಶ್, ಆತ್ಮಜ, ಸ್ಫೂರ್ತಿ, ಕೃತಿಕ್, ಶಾಂತ, ಎಎನ್ಎಸ್ಆರ್ ಫೌಂಡೇಶನ್ ಗ್ಯಾನ್ಪ್ರೊ ತಂಡದ ಡಾ.ಸುಪ್ರೀತ್ ಕಿತ್ತನಕೆರೆ, ಕೃತಿಕಾ, ಅಶೋಕ್, ಭೀಮರಾವ್ ವಿ. ಕುಲಕರ್ಣಿ, ವಾಸುಕಿ ಶೆನೋಯ್, ವಿಕಾಸ್ ತಿವಾರಿ, ಶಿಕ್ಷಕ ಮಲ್ಲಿಕಾರ್ಜುನರೆಡ್ಡಿ, ಆಂಜಿನಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.