ADVERTISEMENT

ದೊಡ್ಡಬಳ್ಳಾಪುರ | ಜೆಡಿಎಸ್ ಮುಖಂಡರ ಸೆಳೆಯಬೇಡಿ: ಧೀರಜ್‌ ಮುನಿರಾಜು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:51 IST
Last Updated 17 ಫೆಬ್ರುವರಿ 2026, 4:51 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ ಮಂಜುನಾಥ್ ಮಾತನಾಡಿದರು
ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ ಮಂಜುನಾಥ್ ಮಾತನಾಡಿದರು   

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಜೆಡಿಎಸ್ ಸದೃಢವಾಗಿದ್ದು, ತನ್ನದೇ ಆದ ಅಸ್ತಿತ್ವ ಹೊಂದಿದೆ. ಇಲ್ಲಿನ ಶಾಸಕರು ಬಿಜೆಪಿ ಪಕ್ಷ ಸಂಘಟನೆ ಮಾಡಿಕೊಳ್ಳಲಿ. ಆದರೆ ಆಸೆ, ಆಮಿಷವೊಡ್ಡಿ ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದನ್ನ ಇಲ್ಲಿಗೆ ಬಿಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದೆಯೇ ಹೊರತು, ನಮ್ಮ ಕಾರ್ಯಕರ್ತರನ್ನು ನಿಮ್ಮ ಪಕ್ಷಕ್ಕೆ ಸೇರಿಸುತ್ತೇವೆ ಎಂದು ಮಾತು ನೀಡಿಲ್ಲ. ನಮ್ಮ ಪಕ್ಷಕ್ಕೆ ಕಾರ್ಯಕರ್ತರಿಗೆ ತನ್ನದೇ ಆದ ಶಕ್ತಿ ಇದೆ. ಶಾಸಕ ಧೀರಜ್‌ ನಿರಾಜು ಅವರು ನಮ್ಮ ಪಕ್ಷದವರನ್ನು ಆಮಿಷವೊಡ್ಡಿ ಸೆಳೆಯುವುದನ್ನು ನಿಲ್ಲಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜೆಡಿಎಸ್ ವರಿಷ್ಠರಾದ ದೇವೇಗೌಡ, ಕುಮಾರಸ್ವಾಮಿ, ನಿಖಿಲ್, ಕೃಷ್ಣಾ ರೆಡ್ಡಿ ಅವರ ಸೂಚನೆಯಂತೆ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಆದರೆ ನಮ್ಮ ಶಕ್ತಿ ಮೇಲೆ ನಮಗೆ ನಂಬಿಕೆ ಇಲ್ಲದಿರುವುದು ಬೇಸರದ ಸಂಗತಿ. ಮಾಜಿ ಜಿಲ್ಲಾಧ್ಯಕ್ಷ ಬಿ.ಮುನೇಗೌಡರಾದಿಯಾಗಿ ಎಲ್ಲಾ ಕಾರ್ಯಕರ್ತರು ಮುಖಂಡರು ಒಳಗೊಂಡಂತೆ ಎಲ್ಲರೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ. ನಾನು ಪ್ರತಿನಿತ್ಯ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

ADVERTISEMENT

‘ಯಾವುದನ್ನು ಮನಸ್ಸಿನಲ್ಲಿ ಇಟ್ಟಿಕೊಳ್ಳದೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲರೂ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ನಿಷ್ಠರಾಗಿರಬೇಕು. ಜಾತ್ಯತೀತವಾಗಿ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಎಲ್ಲಾ ಧರ್ಮ, ಜಾತಿಯವರನ್ನು ಒಗ್ಗೂಡಿಸಿ ಪಕ್ಷ ಕಟ್ಟುವುದೇ ನಮ್ಮ ಗುರಿ’ ಎಂದರು.

‘ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು, ಹೋಬಳಿ ಸಮಿತಿ ರಚಿಸಿ, ಪ್ರತಿ ಬೂತ್ ಸಮಿತಿಯಲ್ಲಿ ಕನಿಷ್ಠ 10 ರಿಂದ 15 ಜನ ಸಕ್ರಿಯ ಕಾರ್ಯಕರ್ತರನ್ನು ತಯಾರಿಸಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನಾನು ಯಾರಿಂದಲೂ ಒತ್ತಡ ಹಾಕಿಸಿ ಅಧ್ಯಕ್ಷನಾಗಿಲ್ಲ. ಪಕ್ಷದ ವರಿಷ್ಠರು ನನ್ನ ಪಕ್ಷ ನಿಷ್ಠೆ ನೋಡಿ ಈ ಜವಾಬ್ದಾರಿ ನೀಡಿದೆ. ಮುಂದಿನ 20 ದಿನಗಳಲ್ಲಿ ತಾಲೂಕು ಸಮಿತಿ ರಚನೆ ಮಾಡುತ್ತೇವೆ’ ಎಂದರು.

ಮುಖಂಡರಾದ ಹರೀಶ್ ಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯ ಕುಮಾರ್, ನಗರಸಭೆ ಸದಸ್ಯರಾದ ಟಿ.ಎನ್.ಪ್ರಭುದೇವ್, ಪ್ರಭಾ ನಾಗರಾಜು, ವೆಂಕಟೇಶ್ ಬಾಬು, ಜಿ.ಸತ್ಯನಾರಾಯಣ, ಶಾಂತಮ್ಮ, ಕೆಂಪರಾಜು, ಆಂಜಿನ ಗೌಡ, ಹಾಡೋನಹಳ್ಳಿ ನಾಗರಾಜು ಉಪಸ್ಥಿತರಿದ್ದರು.

ನಗರಸಭೆಯಲ್ಲಿ ಮಾತಿನಂತೆ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಡಬೇಕಿದೆ. ಈ ಬಗ್ಗೆ ಪಕ್ಷದ ವರಿಷ್ಠರು ತ್ವರಿತವಾಗಿ ತೀರ್ಮಾನ ಕೈಗೊಳ್ಳಬೇಕಿದೆ
ಹರೀಶ್ ಗೌಡ ಮುಖಂಡ

ರಾಜ್ಯದಲ್ಲಿ ಮೈತ್ರಿ ಇದೆ; ಪಕ್ಷಾಂತರವಲ್ಲ

‘ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಇದೆ ಆದರೆ ಪಕ್ಷಾಂತರ ಇಲ್ಲ. ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲಿ ಮೈತ್ರಿ ಕುರಿತಂತೆ ವರಿಷ್ಟರ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಆದರೆ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇದೆ’ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.