ADVERTISEMENT

ಕನಸವಾಡಿ ಸಾಹಿತ್ಯ ಸಮ್ಮೇಳನ: ಜನಪ್ರತಿನಿಧಿಗಳ ವಿರುದ್ಧ ಗೊರುಚ ಸಾತ್ವಿಕ ಸಿಟ್ಟು

ಬೆಳಗ್ಗೆ ಬರಬೇಕಿದ್ದ ಜನಪ್ರತಿನಿಧಿಗಳು ಮಧ್ಯಾಹ್ನ ಬಂದರೂ । ನಾಡು, ವಿಚಾರದಲ್ಲಿ ಚುನಾಯಿತರ ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 12:56 IST
Last Updated 12 ಏಪ್ರಿಲ್ 2025, 12:56 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿಯಲ್ಲಿ 26ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ. ಸಮ್ಮೇಳನ ಸರ್ವಾಧ್ಯಕ್ಷ ಟಿ.ಕೆಂಪಣ್ಣ ಮತ್ತಿತತರಿದ್ದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿಯಲ್ಲಿ 26ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ. ಸಮ್ಮೇಳನ ಸರ್ವಾಧ್ಯಕ್ಷ ಟಿ.ಕೆಂಪಣ್ಣ ಮತ್ತಿತತರಿದ್ದರು   

ಕನಸವಾಡಿ(ದೊಡ್ಡಬಳ್ಳಾಪುರ): ತಾಲ್ಲೂಕಿನ ಭಕ್ತಿ ಕೇಂದ್ರ ಕನಸವಾಡಿಯಲ್ಲಿ ಶನಿವಾರ 26ನೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ ದೊರೆಯಿತು. ಆದರೆ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಬೇಕಿದ್ದ ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮ ಮುಗಿದ ಬಳಿಕ ಆಗಮಿಸಿದರು.

ಬೆಳಗ್ಗೆ 10.30 ಗಂಟೆಗೆ ಬರಬೇಕಿದ್ದ ಜನಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಅಂದರೆ ಮಧ್ಯಾಹ್ನ 1.40ಕ್ಕೆ ಬಂದರು. ಇದು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರ ಬೇಸರಕ್ಕೆ ಕಾರಣವಾಯಿತು.

ಸಮ್ಮೇಳನದ ಅಧ್ಯಕ್ಷತೆ ವಹಿಸಬೇಕಿದ್ದ ಕ್ಷೇತ್ರದ ಶಾಸಕ ಧೀರಜ್‌ಮುನಿರಾಜ್‌, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ನಿಗದಿತ ಸಮಯಕ್ಕೆ ಬರಲಿಲ್ಲ. ಅವರ ಗೈರು ಹಾಜರಿಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಸಮ್ಮೇಳನವನ್ನು ಸಾಹಿತಿ ಗೊ.ರು.ಚನ್ನಬಸಪ್ಪ ಉದ್ಘಾಟಿಸಿದರು.

ADVERTISEMENT

ಬಳಿಕ ತಮ್ಮ ಭಾಷಣದಲ್ಲಿ ಜನಪ್ರತಿನಿಧಿಗಳು ಗೈರಾಗಿರುವುದಕ್ಕೆ ಸಾತ್ವಿಕ ಸಿಟ್ಟು ವ್ಯಕ್ತಪಡಿಸಿದ ಅವರು, ಕನ್ನಡ ಕೆಲಸಗಳಿಗೆ ಜನಪ್ರತಿನಿಧಿಗಳ ಗೈರು ಸರಿಯಲ್ಲ. ಸಕ್ರಿಯವಾಗಿ ತೊಡಗಸಿಕೊಳ್ಳಬೇಕು. ಸಚಿವರು, ಶಾಸಕರೇ ಗೈರಾದಾರೆ ಬೇರೆಯವರಿಂದ ಭಾಷಾ ಬೆಳೆವಣಿಗೆ ಕುರಿತು ಏನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ ಅವರು, ಇಂತಹ ಉದಾಸೀನ ಬೇಡ. ಕನ್ನಡ, ನಾಡು ವಿಚಾರದಲ್ಲಿ ನಿರ್ಲಕ್ಷ್ಯ ನಿಲ್ಲಬೇಕು ಎಂದು ಆಗ್ರಹಿಸಿದರು.

ಜನಪ್ರತಿನಿಧಿಗಳು ಕನ್ನಡ ಭಾಷೆಯ ಕುರಿತು ನಡೆಯುವ ಸಮ್ಮೇಳನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಇರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದು.

ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ಶಾಸಕ ದೀರಜ್‌ ಮುನಿರಾಜು ಮಧ್ಯಾಹ್ನ 1.40ರ ಸುಮಾರಿಗೆ ವೇದಿಕೆಗೆ ಬಂದರು. ಅಷ್ಟರಲ್ಲಿ ವೇದಿಕೆಯಲ್ಲಿನ ಬಹುತೇಕ ಜನರ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದಿದ್ದವು. ಗೊ.ರು.ಚನ್ನಬಸಪ್ಪ ಅವರು ವೇದಿಕೆಯಿಂದ ನಿರ್ಗಮಿಸುವ ಸಮಯಕ್ಕೆ ಜನಪ್ರತಿನಿಧಿಗಳು ಆಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.