ADVERTISEMENT

ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲು: ಸುಡು ಬಿಸಿಲಿಗೆ ಜನ ತತ್ತರ

ಹೊರ ಬಾರದ ಜನರು । ಮಜ್ಜಿಗೆ, ಎಳನೀರಿಗೆ ಹೆಚ್ಚಿದ ಬೇಡಿಕೆ

ನಟರಾಜ ನಾಗಸಂದ್ರ
Published 7 ಏಪ್ರಿಲ್ 2024, 5:12 IST
Last Updated 7 ಏಪ್ರಿಲ್ 2024, 5:12 IST
ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಾಲಯ ರಸ್ತೆಯ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುವ ಸ್ಥಳದಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ಜನರ ಒಡಾಟವೇ ವಿರಳವಾಗಿದೆ
ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಾಲಯ ರಸ್ತೆಯ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುವ ಸ್ಥಳದಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ಜನರ ಒಡಾಟವೇ ವಿರಳವಾಗಿದೆ   

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷದ ಬೇಸಿಗೆಯ ಋತುವಿನಲ್ಲೇ ಶನಿವಾರ ಗರಿಷ್ಠ ಉಷ್ಣಾಂಶ 37 ಡಿಗ್ರಿ ದಾಖಲಾಗಿದ್ದು, ಮಧ್ಯಾಹ್ನ 12 ಗಂಟೆಯ ನಂತರ ನಗರದ ರಸ್ತೆಗಳಲ್ಲಿ ಜನರ ಒಡಾಟವೇ ವಿರಳವಾಗುತ್ತಿದ್ದರೆ, ಹೊಲಗಳಲ್ಲಿ ಕೆಲಸ ಮಾಡುವ ಕೃಷಿಕರು ಸಹ 12 ಗಂಟೆಗೆ ವೇಳೆಗೆ ಮರಗಳ ನೆರಳು ಸೇರುತ್ತಿದ್ದಾರೆ.

ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಾಲವು ಸಹ ಕೈಕೊಟ್ಟಿದ್ದರಿಂದ ಕೆರೆ ಕುಂಟೆಗಳಲ್ಲಿ ನೀರು ಇಲ್ಲ. ಹಿಂಗಾರು ಮಳೆಯು ಪ್ರತಿ ವರ್ಷ ಡಿಸೆಂಬರ್‌ ಅಂತ್ಯದವರೆಗೂ ಅಲ್ಪಸ್ವಲ್ಪವಾದರು ಬಿಳುತ್ತಲೇ ಇರುತಿತ್ತು. ಆದರೆ ಈ ಬಾರಿ ನವೆಂಬರ್‌ ತಿಂಗಳಲ್ಲಿ ಒಂದಿಷ್ಟು ಮಳೆ ಬಿದ್ದಿದ್ದು ಹೊರತು ಪಡಿಸಿದರೆ ಇಲ್ಲಿಯವರೆಗೂ ತಾಲ್ಲೂಕಿನಲ್ಲಿ ಮಳೆಯಾಗಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಇದರೊಂದಿಗೆ ಒಂದು ವಾರದಿಂದ ಈಚೆಗೆ ಮಧ್ಯಾಹ್ನದ ನಂತರ ಬಿಸಿ ಗಾಳಿಯು ಪ್ರಾರಂಭವಾಗಿದೆ.

ದಾಹನೀಗಿಸಿಕೊಳ್ಳಲು ಜನರು ಎಳನೀರು, ಮಜ್ಜಿಗೆ ಮತ್ತು ತಂಪು ಪಾನೀಯ ಮೊರೆ ಹೋಗಿದ್ದಾರೆ. ಒಂದು ಎಳನೀರು ₹45 ರಿಂದ ₹50ಗಳವರೆಗೆ ಮಾರಾಟವಾಗುತ್ತಿದೆ. ಇನ್ನು ನಂದಿನಿ ಹಾಲಿನ ಕೇಂದ್ರಗಳಲ್ಲಿ ದಿನಕ್ಕೆ ಎರಡು ಬಾರಿ ಮಜ್ಜಿಗೆ, ಮೊಸರಿನ ಪ್ಯಾಕೇಟ್‌ ತರಿಸಿದರು ಸಹ ಸಂಜೆ ವೇಳೆಗೆ ಖಾಲಿಯಾಗುತ್ತಿವೆ ಎನ್ನುತ್ತಾರೆ ನಂದಿನಿ ಹಾಲು ಮಾರಾಟಗಾರ ಮಂಜುನಾಥ್‌.

ADVERTISEMENT

ರಂಜಾನ್‌ ಸಮಯದಲ್ಲಿ ಸಾಮಾನ್ಯವಾಗಿ ಸಂಜೆ ಇಫ್ತಾರ್‌ಗೆ ಹಣ್ಣು ಬಳಸಲಾಗುತ್ತದೆ. ಅದರಲ್ಲೂ ಬಿಸಿಲಿನ ತಾಪವು ಹೆಚ್ಚಾಗಿರುವುದರಿಂದ ಕಲ್ಲಂಗಡಿ ಹಣ್ಣುಗಳು ಹೆಚ್ಚಾಗಿ ಬಿಕರಿ ಆಗುತ್ತಿದೆ. ಹೀಗಾಗಿ 1 ಕೆ.ಜಿ. ಕಲ್ಲಂಗಡಿ ಹಣ್ಣು ₹35ವರೆಗೂ ಮಾರಾಟವಾಗುತ್ತಿದೆ.

ಬಿಸಿಲಿನ ತೀವ್ರತೆಯ ಸಮಯದಲ್ಲಿ ಬೇಲದ ಹಣ್ಣಿನ ಪಾನಕ ಸೇವನೆ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಉತ್ತಮವಾಗಿರುತ್ತದೆ ಎನ್ನುವುದು ಹಿರಿಯ ನಾಗರಿಕರ ಸಲಹೆ.

ಚುನಾವಣ ಪ್ರಚಾರ ಸಭೆಗಳಲ್ಲೂ ಜನರ ಸಂಖ್ಯೆ ಕಡಿಮೆ: ಹಿಂದಿನ ಚುನಾವಣಾ ಸಭೆಗಳಿಗೆ ಹೋಲಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಯ ಕಾರ್ಯಕರ್ತರ, ಮುಖಂಡರ ಸಭೆಗಳಿಗೆ ಬರುವ ಜನರ ಸಂಖ್ಯೆಯು ಕಡಿಮೆಯಾಗಿದೆ. ಇದಕ್ಕೆ ಬಹುತೇಕ ಮುಖಂಡರು ಹೇಳುವುದು ಬಿಸಿಲಿನ ತಾಪ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ.

ವಾಂತಿ ಬೇದಿ ಪ್ರಕರಣ ಹೆಚ್ಚಳ

ಬಿಸಿಗೆಯಲ್ಲಿ ಸಾಮಾನ್ಯವಾಗಿ ನೊಣಗಳ ಹಾವಳಿ ಹೆಚ್ಚಾಗುವುದರಿಂದ ವಾಂತಿ ಬೇದಿ ಪ್ರಕರಣಗಳು ಹೆಚ್ಚಾಗುತ್ತವೆ. ರಸ್ತೆ ಬದಿಯಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣು ಸೇವನೆ ಮಾಡುತ್ತಾರೆ. ಇದರಿಂದಾಗಿ ವಾಂತಿ ಬೇದಿ ಪ್ರಾರಂಭವಾಗಿವೆ. ಅದರಲ್ಲೂ ಮಕ್ಕಳಲ್ಲಿಯೇ ವಾಂತಿ ಬೇದಿ ಹೆಚ್ಚಾಗುತ್ತಿವೆ.

ಕಳೆದ ಒಂದು ವಾರದಿಂದ ಈಚೆಗೆ  ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಕಾಲರ ಗುಣ ಲಕ್ಷಣ ಯಾರಲ್ಲೂ ಕಂಡು ಬಂದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರ ನಗರದ ವೈದ್ಯ ಡಾ.ಎಚ್‌.ಜಿ.ವಿಜಯಕುಮಾರ್‌. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಸಾಮಾನ್ಯವಾಗಿ ಮಕ್ಕಳು ಒಂದೆಡೆ ಸೇರಿ ಆಟವಾಡುವುದು ಸಹಜ. ಇಂಹತ ಸಮಯದಲ್ಲಿ ಗಂಟಲು ಊತ ಜ್ವರದಂತಹ ಖಾಯಿಲೆ ಇರುವ ಮಕ್ಕಳೊಂದಿಗೆ ಆಟವಾಡುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಬಿಸಿಲಿನ ತೀವ್ರತೆ ಹೆಚ್ಚಾಗಿರುವ ಮಧ್ಯಾಹ್ನ ಸಮಯದಲ್ಲಿ ನೆರಳಿನಲ್ಲೇ ಇರಲು ಪ್ರಯತ್ನಿಸಬೇಕು. ಶುದ್ಧವಾದ ನೀರಿನ ಸೇವನೆ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎನ್ನುತ್ತಾರೆ.

***

ವೈದ್ಯರ ಸಲಹೆ ಸಾಧ್ಯವಾದಷ್ಟು ಶುದ್ಧ ಹಾಗೂ ಒಂದೇ ಸ್ಥಳದ ನೀರಿನ ಬಳಕೆ ಮಾಡಬೇಕು. ಫ್ರೀಜ್ಡ್‌ಗಳಲ್ಲಿ ದೀರ್ಘಕಾಲ ಶೇಖರಿಸಿದ ಹಣ್ಣು ಸೇರಿದಂತೆ ಇತರೆ ಪದಾರ್ಥಗಳ ಸೇವೆನೆ ಕಡಿಮೆ ಮಾಡಬೇಕು. ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಪಕೋಡ ಜಿಲೇಬಿಯಂತಹ ಎಣ್ಣೆಯಲ್ಲಿ ಕರಿದ ಪದಾರ್ಥ ಸೇವನೆ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.