ದೊಡ್ಡಬಳ್ಳಾಪುರ: ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ಸಬರಾಜು ಮಾಡಬೇಕು. ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕೆಂದು ಆಗ್ರಹಿಸಿ ಬುಧವಾರ ನಗರದ ಕೆಪಿಟಿಸಿಎಲ್ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ರೈತರೊಂದಿಗೆ ಕೆಪಿಟಿಸಿಎಲ್ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡುತ್ತೇವೆಂದು ಹೇಳಿದ ಸರ್ಕಾರ ಈಗ ಕೃಷಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ದಿನದಲ್ಲಿ ಒಂದರಿಂದ ಎರಡು ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ ಎಂದು ಪ್ರತಿಭಟನನಿರತರು ದೂರಿದರು.
ಕೆಪಿಟಿಸಿಲ್ ಎಂಜಿನಿಯರ್ ಲಕ್ಷ್ಮಣ್ ರೈತರ ಮನವಿ ಸ್ವೀಕರಿಸಿ ಮಾತನಾಡಿ, ವಿದ್ಯುತ್ ಸರಬಾರಾಜನ್ನು ಸರಿಪಡಿಸಿಕೊಳ್ಳಲು ಒಂದು ವಾರ ಸಮಯಾವಕಾಶ ನೀಡಿ. ಕೃಷಿಗೆ ರಾತ್ರಿ 3 ಗಂಟೆ, ಹಗಲಿನ ವೇಳೆ 3 ಗಂಟೆ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಸತೀಶ್, ಮುತ್ತೇಗೌಡ ಸೇರಿದಂತೆ ನೂರಾರು ಜನ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.