ADVERTISEMENT

ಮುಗಿಯದ ಕಸ ಕಂಟಕ, ಬಿಗಾಡಿಯಿಸುತ್ತಿದೆ ನೇಕಾರಿಕೆ ಉದ್ಯಮ

ನಟರಾಜ ನಾಗಸಂದ್ರ
Published 31 ಡಿಸೆಂಬರ್ 2025, 2:12 IST
Last Updated 31 ಡಿಸೆಂಬರ್ 2025, 2:12 IST
ದೊಡ್ಡಬಳ್ಳಾಪುರ ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ಬಸ್‌
ದೊಡ್ಡಬಳ್ಳಾಪುರ ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ಬಸ್‌   

ದೊಡ್ಡಬಳ್ಳಾಪುರ: ಏರುಪೇರುಗಳ ರಾಜಕೀಯ ಮೇಲಾಟ, ಅಪಘಾತ ಹೆಚ್ಚಳ, ಮುಂದುವರೆದ ಶಾಶ್ವತ ಸಮಸ್ಯೆಗಳ ನಡುವೆ 2025ನೇ ವರ್ಷ ಮುಗಿದಿದೆ.

ಕ್ಷೇತ್ರದ ರಾಜಕೀಯದ ಮಟ್ಟಿಗೆ ಪಿಎಲ್‌ಡಿ ಬ್ಯಾಂಕ್‌, ಬಮೂಲ್‌, ಟಿಎಪಿಎಂಸಿಎಸ್‌ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗಳು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಟಿಎಪಿಎಂಸಿಎಸ್‌ ಕಾಂಗ್ರೆಸ್‌ ಪಾಲಾಗಿದೆ. ಇನ್ನು ಪಿಎಲ್‌ಡಿ ಬ್ಯಾಂಕ್‌ ಬಿಜೆಪಿ, ಜೆಡಿಎಸ್‌ ಮೈತ್ರಿಗೆ ಜಯವಾಗಿದೆ. ಬಮೂಲ್‌ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿ ಮೈತ್ರಿಗಿಂತಲು ಅಭ್ಯರ್ಥಿಗಳ ಸ್ವಂತ ವರ್ಚಸ್ಸು ಮೇಲುಗೈ ಸಾಧಿಸಿದೆ.

ಪ್ರಶಸ್ತಿಗಳ ವರ್ಷ: ಈ ವರ್ಷ ತಾಲ್ಲೂಕಿನ ಮಟ್ಟಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ಆರ್‌.ನಾರಾಯಣಸ್ವಾಮಿ ಪಡೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವೀಣೆ ತಯಾರಕ ಸಿಂಪಾಡಿಪುರದ ಪೆನ್ನ ಓಬಳಯ್ಯ ಅವರಿಗೆ ಲಭಿಸಿದೆ. ಶ್ರವಣೂರು ಗ್ರಾಮದ ಜೇನು ಕೃಷಿಕ ಮಹೇಶ್‌ ಅವರಿಗೆ ಅತ್ಯುತ್ತಮ ಯುವ ಜೇನು ಸಾಕಾಣಿಕೆದಾರ ಪ್ರಶಸ್ತಿ, ಶಿಕ್ಷಕ ಸಿ.ವಿ.ಲೋಕೇಶ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ‘ಕೆ.ರಾಮಚಂದ್ರಯ್ಯ ದತ್ತಿ’ ಪುರಸ್ಕಾರ, ತೂಬಗೆರೆ ಸಮೀಪ ನಾರಸಿಂಹನಳ್ಳಿಯ ರೈತ ಶ್ರೀಕಾಂತ್‌ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಸೋಬಾನೆ ಹಾಡುಗಳ ಗಾಯಕಿ ಓಬವ್ವ ಅವರಿಗೆ ಜಾನಪದ ಅಕಾಡಮಿ ಪ್ರಶಸ್ತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ 25 ವರ್ಷಗಳ ನೆನಪಿನಲ್ಲಿ ವೈ.ಟಿ.ಲೋಹಿತ್‌, ಅರ್ಜುನ್‌ ಅವರಿಗೆ ಇಂದಿಗಾಂಧಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಕೇಂದ್ರ, ರಾಜ್ಯ ಸರ್ಕಾರದ ಪ್ರಶಸ್ತಿಗಳು ತಾಲ್ಲೂಕಿಗೆ ಲಭಿಸಿವೆ.

ADVERTISEMENT

ಗಣ್ಯರ ನಿಧನ: ಜೆಡಿಎಸ್‌ ಮುಖಂಡ ಎಚ್‌.ಅಪ್ಪಯ್ಯಣ್ಣ, ಸ್ವಾತಂತ್ರ್ಯ ಹೋರಾಟಗಾರ ಕೆ.ಸಿ.ನಾರಾಯಣಪ್ಪ, ಖ್ಯಾತ ವಾಣಿಜ್ಯೋದ್ಯಮಿ ಹುಂಗಿ ಎಚ್.ಪಿ.ಶಂಕರ್, ಜಿಂಕೆಬಚ್ಚಹಳ್ಳಿ ಗ್ರಾಮದ ನಿವೃತ್ತ ಎಸಿಪಿ ಹಾಗೂ ಬಾಶೆಟ್ಟಿಹಳ್ಳಿ ವಿಎಸ್‌ಎಸ್‌ಎನ್‌ ಮಾಜಿ ನಿರ್ದೇಶಕ ಬಿ.ಸಿ.ಕನಕಕುಮಾರ್, ನಗರದ ಶ್ರೀಚಾಮುಂಡೇಶ್ವರಿ ಡೆವಲಪ್ಪರ್ಸ್ ಮಾಲೀಕ ಎನ್.ಗಂಗಾಧರಯ್ಯ, ಹಿರಿಯ ರಂಗಭೂಮಿ ಕಲಾವಿದ ಜವಾಜಿ ಸೀತಾರಂ, ಕಂಟನಕುಂಟೆ ಸಮೀಪದ ಟಿಪ್ಪುನಗರದಲ್ಲಿನ ಖಾನಖಾಯೇ ಸೂಫಿ ಔಲಿಯಾದ ಪಿರೇ ಮುರಶಿದ್ ಹಾಜ್ರತ್ ಸೂಫಿ ಇಮ್ತಿಯಾಜ್ ಹುಸೈನ್ ಚಿಸ್ತಿ, ನಾಮಫಲಕ ಕಲಾವಿದ ಸೂರ್ಯಕುಮಾರ್‌, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ಪೆನ್ನಓಬಳಯ್ಯ, ನಗರದ 21ನೇ ವಾರ್ಡ್ ಹೇಮಾವತಿ ಪೇಟೆ ನಗರಸಭಾ ಸದಸ್ಯ ಎಸ್‌.ಎ.ಭಾಸ್ಕರ್‌ ಅವರು ನಿಧನರಾಗಿದ್ದರು.

ಮುತ್ತೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಪಟಾಕಿ ಸ್ಫೋಟದಲ್ಲಿ ಮೂರು ಜನರ ಸಾವು ಜನರನ್ನು ಹೆಚ್ಚು ಕಾಡಿದ ಕಹಿ ಘಟನೆ.

ಪರಿಹಾರ ಕಾಣದ ಸಮಸ್ಯೆ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಗೇರನಹಳ್ಳಿಗೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ಬರುವುದು ನಿಂತಿಲ್ಲ. ಈ ನಡುವೆ ಮತ್ತೆ ಗುಂಡ್ಲಹಳ್ಳಿ ಸಮೀಪ ಬಿಬಿಎಪಿಎಂ ವ್ಯಾಪ್ತಿಯ ಕಸ ಬರುವ ನಿರೀಕ್ಷೆ ಇದೆ. ಮಜರಾಹೊಸಹಳ್ಳಿ, ದೊಡ್ಡತುಮಕೂರು ವ್ಯಾಪ್ತಿಯ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿಯಿಂದ ಒಳಚರಂಡಿ ನೀರು ಹರಿಯುವುದು ನಿಂತಿಲ್ಲ.

ನಗರದ ಜೀವನಾಡಿ ಉದ್ಯಮವಾಗಿರುವ ನೇಕಾರಿಕೆ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಆದರೆ ಸೂಕ್ತ ಪರಿಹಾರ ಇನ್ನೂ ದೊರೆತಿಲ್ಲ. ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ₹100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಎಸ್‌ಐ ಆಸ್ಪತ್ರೆ ನಿರ್ಮಾಣವಾಗಿ 5 ವರ್ಷ ಕಳೆಯುತ್ತ ಬಂದಿದ್ದರು ಕಾರ್ಯಾರಂಭ ಮಾಡಿಲ್ಲ. ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆಯಾಗಿದ್ದು ಬಿಟ್ಟರೆ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗೆ ಹತ್ತಾರು ಸಮಸ್ಯೆಗಳು 2026ಕ್ಕೂ ಮುಂದುರಿಯುತ್ತವೆ. 

ಸಮಸ್ಯೆಗಳ ನಡುವೆ ನಗರದ ಪ್ರಮುಖ ರಸ್ತೆಗೆ ವೈಟ್‌ ಟ್ಯಾಪಿಂಗ್‌, ₹14 ಕೋಟಿ ವೆಚ್ಚದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪ್ರೌಢಶಾಲಾ ಕಟ್ಟಡ, ತಾಲ್ಲೂಕಿಗೆ ಹೊಸದಾಗಿ ಮಂಜೂರಾಗಿರುವ 6 ಪದವಿ ಪೂರ್ವ ಕಾಲೇಜು, ಜಿಲ್ಲಾ ಕ್ರೀಡಾಂಗಣಕ್ಕೆ 20 ಎಕರೆ ಜಮೀನು ನಿಗದಿ ಹಾಗೂ ಕ್ರೀಡಾಂಗಣ ಅಭಿವೃದ್ಧಿಗೆ ಮೊದಲ ಹಂತವಾಗಿ ಬಜೆಟ್‌ನಲ್ಲಿ ₹8 ಕೋಟಿ ಹಣ ನಿಗದಿಯಾಗಿರುವುದು ಅಭಿವೃದ್ಧಿ ಕೆಲಸಗಳಾಗಿವೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಹಜಾರಹೊಸಹಳ್ಳಿ ಕೆರೆಗೆ ಕೊಳಚೆ ನೀರು ಹರಿಯುವುದನ್ನು ತಡೆಯುವಲ್ಲಿ ವಿಫಲವಾದ ಮಾಲಿನ್ಯ ನಿಯಂತ್ರಣ ಮಂಡಲಿಗೆ ರೈತರಿಂದ ಕೊಳಚೆ ನೀರಿನ ಅಭಿಷೇಕ ಮಾಡಲಾಗಿತ್ತು
ದೊಡ್ಡಬಳ್ಳಾಪುರ ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ಕಾರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಬಿಬಿಎಂಪಿ ಕಸ ವಿಲೇವಾರಿ ಘಟಕಕ್ಕೆ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳು

ಹೆದ್ದಾರಿಯಲ್ಲಿ ಮಿತಿ ಮೀರಿದ ಅಪಘಾತ  ತಾಲ್ಲೂಕಿನ ಮೂಲಕ ಹಾದುಹೋಗಿರುವ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಹಾಗೂ ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಗಳು ಪ್ರಯಾಣಿಕರ ಪಾಲಿನ ಮೃತ್ಯುಕೂಪವಾಗಿ ಪರಿಣಿಸಿವೆ. ಒಂದೇ ಅಪಘಾತದಲ್ಲಿ 5 ಜನ ಮೃತಪಟ್ಟರೆ ಬಸ್‌ ಬೈಕ್‌ ಕಾರು ರಸ್ತೆ ಬದಿಯಲ್ಲಿ ನಿಂತಿರುವ ಲಾರಿಗಳಿಗೆ ಡಿಕ್ಕಿ ಹೊಡೆದು ಮೃತಪಡುತ್ತಿರುವ ಸಂಖ್ಯೆಯಂತು ಹೆಚ್ಚುತ್ತಲೇ ಇದೆ. ಆದರೆ ಟೋಲ್‌ ಸಂಗ್ರಹ ಮಾಡುವವರು ಮಾತ್ರ ಅಪಘಾತಗಳ ತಡೆಗೆ ತಲೆಕೆಡಿಸಿಕೊಂಡಿಲ್ಲ.