ADVERTISEMENT

ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:43 IST
Last Updated 18 ಫೆಬ್ರುವರಿ 2026, 5:43 IST
ದೊಡ್ಡಬಳ್ಳಾಪುರದಲ್ಲಿ ಸಾರ್ವತ್ರಿಕ ಆರೋಗ್ಯ ಆಂದೋಲನ ನೇತೃತ್ವದಲ್ಲಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ದೊಡ್ಡಬಳ್ಳಾಪುರದಲ್ಲಿ ಸಾರ್ವತ್ರಿಕ ಆರೋಗ್ಯ ಆಂದೋಲನ ನೇತೃತ್ವದಲ್ಲಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ದೊಡ್ಡಬಳ್ಳಾಪುರ: ರಾಜ್ಯದ 8 ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ವಹಿಸಲು ಸರ್ಕಾರ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಸಾರ್ವತ್ರಿಕ ಆರೋಗ್ಯ ಆಂದೋಲನದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಡಾ.ಸ್ವಾತಿ ಮತ್ತು ಅಕ್ಷಯ್, ದೇಶದಲ್ಲಿ ಪ್ರತಿ ವರ್ಷ ಚಿಕಿತ್ಸಾ ವೆಚ್ಚದಿಂದಾಗಿ ₹10ಕೋಟಿ ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಆರೋಗ್ಯ ಸೇವೆ ಮತ್ತು ಚಿಕಿತ್ಸಾ ವೆಚ್ಚ ದುಬಾರಿಯಾಗುತ್ತಿದೆ. ಖರ್ಚು ಭರಿಸಲಾಗದೆ ಅನೇಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವ ಬದಲು ಸರ್ಕಾರ ಆರೋಗ್ಯ ಸೇವೆ ಖಾಸಗೀಕರಣಗೊಳಿಸಲು ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ತುಮಕೂರು, ವಿಜಯಪುರ, ಕೋಲಾರ, ವಿಜಯನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಸ್ಪತ್ರೆಗಳು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಇದು ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕ್ರಮವಾಗಿದೆ. ರಾಜ್ಯ ಸರ್ಕಾರ ಈ ಕೂಡಲೇ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ವಿಜಯಪುರದಲ್ಲಿ ಈ ಖಾಸಗೀಕರಣವನ್ನು ಕೈಬಿಡುವುದಾಗಿ ಸರ್ಕಾರ ಭರವಸೆ ನೀಡಿದೆ. ಎಲ್ಲ ಜಿಲ್ಲೆಗಳಲ್ಲೂ ಇದೇ ಮಾದರಿ ಅನುಸರಿಸಬೇಕು. ಮುಂಬರುವ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧ ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಔಷಧ ಹೊರಗಡೆ ಖರೀದಿಸಲು ಚೀಟಿ ಬರೆದುಕೊಡಬಾರದು. ಕರ್ನಾಟಕದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿಗೊಳಿಸಬೇಕು. ಆರೋಗ್ಯ ರಕ್ಷಣೆಯನ್ನು ಮೂಲಭೂತಕ್ಕಾಗಿ ಮಾಡಬೇಕು. ಖಾಸಗಿ ಆಸ್ಪತ್ರೆಗಳ ಶುಲ್ಕ ನಿಯಂತ್ರಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಪ್ರತಿಭಟನೆಯಲ್ಲಿ ಜನ ಚಳವಳಿಗಳ ರಾಷ್ಟ್ರೀಯ ಒಕ್ಕೂಟದ ವೀರಸಂಗ ಮಿತ್ರ, ಕನ್ನಡ ಪಕ್ಷದ ಸಂಜೀವ್ ನಾಯಕ್, ಪ್ರಾಂತ ರೈತ ಸಂಘದ ಆರ್.ಚಂದ್ರತೇಜಸ್ವಿ, ಸಿಐಟಿಯು ಮುಖಂಡ ಪಿ.ಎ.ವೆಂಕಟೇಶ್, ಸಿಪಿಐಎಂನ ಎಸ್. ರುದ್ರರಾಧ್ಯ, ಯುವ ಸಂಚಲನದ ಚಿದಾನಂದ, ಕಾರ್ಮಿಕ ಮುಖಂಡರಾದ ರೇಣುಕಾರಾಧ್ಯ, ಅನಿಲ್ ಗುಪ್ತ, ಸಾದಿಕ್ ಪಾಷಾ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಬೇರು ಬೆವರು ಸಾಂಸ್ಕೃತಿಕ ಕಲಾ ಬಳಗ ಕರ್ನಾಟಕದ ಚಂದ್ರಶೇಖರ್ ನೇತೃತ್ವದ ಕಲಾತಂಡದಿಂದ ಜಾಗೃತಿ ಗೀತ ಗಾಯನ ಮತ್ತು ಬೀದಿ ನಾಟಕ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.